ಲಕ್ಷಾಂತರ ಮೌಲ್ಯದ 200ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನ ಕತ್ತರಿಸಿದ ಕಿಡಿಗೇಡಿಗಳು; ಕಂಗಾಲಾದ ರೈತ ಕುಟುಂಬ

ಆ ರೈತನಿಗೆ ಇರುವುದು ಅಲ್ಪ ಸ್ವಲ್ಪ ಜಮೀನು. ಆದ್ರೆ, ಜೀವನದಲ್ಲಿ ಕೃಷಿಯನ್ನೇ ಕಾಯಕವಾಗಿ ಮಾಡಿಕೊಂಡಿದ್ದ ರೈತ, ದಾಳಿಂಬೆ ಬೆಳೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ರೈತನ ಅಕ್ಕಪಕ್ಕದ ಜಮೀನನ್ನು ಲೀಸ್​ಗೆ ತೆಗೆದುಕೊಂಡು ದಾಳಿಂಬೆ ಗಿಡಗಳನ್ನು ಬೆಳೆದಿದ್ದ. ಆದ್ರೆ, ಯಾರೋ ಕಿಡಿಗೇಡಿಗಳು ರೈತನ ದಾಳಿಂಬೆ ಗಿಡಗಳನ್ನು ಕಟಾವು ಮಾಡಿ ವಿಕೃತಿ ಮೆರೆದಿದ್ದು, ದಾಳಿಂಬೆ ಬೆಳೆದ ರೈತ ಕಂಗಲಾಗಿದ್ದಾನೆ.

ಲಕ್ಷಾಂತರ ಮೌಲ್ಯದ 200ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನ ಕತ್ತರಿಸಿದ ಕಿಡಿಗೇಡಿಗಳು; ಕಂಗಾಲಾದ ರೈತ ಕುಟುಂಬ
ದೇವನಹಳ್ಳಿಯಲ್ಲಿ ದಾಳಿಂಬೆ ಬೆಳೆ ನಾಶ; ರೈತ ಕುಟುಂಬ ಕಂಗಾಲು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 19, 2023 | 8:44 PM

ಬೆಂಗಳೂರು ಗ್ರಾಮಾಂತರ, ನ.19: ಸಂಪಾಗಿ ಬೆಳೆದು ನಿಂತಿದ್ದ ದಾಳಿಂಬೆ(Pomegranate) ಗಿಡವನ್ನು ಕಿಡಿಗೇಡಿಗಳು ಕತ್ತರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ(Devanahalli) ತಾಲೂಕಿನ ಹ್ಯಾಡಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೆಂಕಟೇಗೌಡ ಎಂಬ ರೈತನಿಗೆ ಇರುವುದು 11 ಗುಂಟೆ ಜಮೀನು ಮಾತ್ರ. ಆದ್ರೆ, ಕೃಷಿಯಲ್ಲೆ ಮೇಲೆ ಬರಬೇಕು ಎಂಬ ಚಲದಿಂದ ತನ್ನ ಜಮೀನಿನ ಪಕ್ಕದ ಬೇರೆಯವರ ಜಮೀನನ್ನು ಲೀಸ್​ಗೆ ತೆಗೆದುಕೊಂಡು ಸುಮಾರು ಒಂದು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಯನ್ನು ಬೆಳೆದಿದ್ದಾನೆ. ಇನ್ನು ಸಂಪಾಗಿ ಬಂದಿದ್ದ ದಾಳಿಂಬೆಗೆ ಯಾರೋ ಕಿಡಿಗೇಡಿಗಳ ಕಣ್ಣು ಬಿದ್ದಿದ್ದು, ರಾತ್ರೋರಾತ್ರಿ ರೈತನ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು ದಾಳಿಂಬೆ ಗಿಡ ಬುಡಗಳನ್ನು ಕಟಾವು ಮಾಡಿ ಎಸ್ಕೆಪ್ ಆಗಿದ್ದಾರೆ.

ಒಂದು ಎಕರೆ ಭೂಮಿಯಲ್ಲಿ ಸುಮಾರು 400 ದಾಳಿಂಬೆ ಗಿಡಗಳನ್ನು ರೈತ ವೆಂಕಟೇಗೌಡ ಬೆಳೆದಿದ್ದರು. ಸುಮಾರು ಒಂದು ವರ್ಷ 2 ತಿಂಗಳಿನ ದಾಳಿಂಬೆ ಗಿಡ ಇದಾಗಿದ್ದು, ಒಂಬತ್ತು ತಿಂಗಳು ಹೋಗಿದ್ದರೆ ಒಳ್ಳೆಯ ಫಸಲು ಸಿಕ್ಕುತ್ತಿತ್ತು. ಆದ್ರೆ, ಕಿಡಿಗೇಡಿಗಳು 200 ಗಿಡಗಳ ಕಟ್ ಮಾಡಿದ್ದಾರೆ. ಇದರಿಂದ ರೈತನಿಗೆ ಸುಮಾರು ಐದರಿಂದ 6 ಲಕ್ಷ ಲಾಸ್ ಆಗಿದೆ. ದಾಳಿಂಬೆ ಗಿಡಗಳನ್ನ ಪೋಷಿಸಲು ವರ್ಷಾನುಗಟ್ಟಲೇ ಔಷಧಿ, ಕಳೆ ತೆಗೆಯುವುದು ಸೇರಿದಂತೆ ಲಕ್ಷಾಂತರ ಬಂಡವಾಳ ಹಾಕಿದ್ದರು. ಆದರೆ, ರಾತ್ರೋರಾತ್ರಿ ಕಿಡಿಗೇಡಿಗಳು ದಾಳಿಂಬೆ ನಾಶದಿಂದ ರೈತನ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಕಟಾವು ಮಾಡಿರೋ ಗಿಡಗಳನ್ನ ಹಿಡಿದುಕೊಂಡು ರೈತನ ಕುಟುಂಬ ಕಣ್ಣಿರಾಕಿದೆ. ಇನ್ನು ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬರಗಾಲದಲ್ಲೂ ಹನಿ ಹನಿ ನೀರು ಉಳಿಸಿ ದಾಳಿಂಬೆ ಬೆಳೆದಿದ್ದ ವಿಜಯಪುರ ರೈತ: ರಾತ್ರೋರಾತ್ರಿ ನಾಲ್ಕಾರು ಲಕ್ಷ ಮೌಲ್ಯದ ದಾಳಿಂಬೆ ಕದ್ದ ಖದೀಮರು!

ಒಟ್ಟಾರೆ ಸಾಲ ಸೋಲ ಮಾಡಿ ಒಳ್ಳೆಯ ದಾಳಿಂಬೆ ಬೆಳೆಯಬೇಕು ಎಂದು ಅಂದುಕೊಂಡಿದ್ದ ರೈತ ವೆಂಕಟೇಗೌಡ ಕುಟುಂಬ, ಕಿಡಿಗೇಡಿಗಳ ಕೃತ್ಯದಿಂದ ತತ್ತರಿಸಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ತನಿಖೆಯ ನಂತರ ದಾಳಿಂಬೆ ನಾಶ ಮಾಡಿದವರು ಯಾರು? ಕಾರಣವೇನು ಎಂದು ಗೊತ್ತಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ