
ದೇವನಹಳ್ಳಿ, ಜೂನ್ 25: ಕಳೆದುಹೋದ ಅಥವಾ ಕಳವಾಗಿದ್ದ ಬೈಕ್‌ಗಳು ಪತ್ತೆಯಾದರೂ, ಅವುಗಳನ್ನು ಮರಳಿ ಪಡೆಯಲು ಕೋರ್ಟ್ ಆವರಣದಲ್ಲಿ ತಿಂಗಳುಗಟ್ಟಲೆ ಅಲೆಯಬೇಕಾಗಿದ್ದ ಸಾರ್ವಜನಿಕರ ಪರದಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯು ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಮತ್ತು ಜನಸ್ನೇಹಿ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳನ್ನು ಕೋರ್ಟ್ ಪ್ರಕ್ರಿಯೆಗಳ ವಿಳಂಬವಿಲ್ಲದೆ, ಕೇವಲ ಬಾಂಡ್ ಪೇಪರ್ ಪಡೆದು ನೇರವಾಗಿ ಪೊಲೀಸ್ ಠಾಣೆಯ ಆವರಣದಲ್ಲೇ ಮೂಲ ಮಾಲೀಕರಿಗೆ ಹಸ್ತಾಂತರಿಸುವ ನೂತನ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸಲಾಗಿದೆ.
ಈ ಹಿಂದೆ ಕಳ್ಳತನವಾದ ಬೈಕ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದರೂ, ಅವುಗಳನ್ನು ಬಿಡಿಸಿಕೊಳ್ಳಲು ಮಾಲೀಕರು ನ್ಯಾಯಾಲಯಕ್ಕೆ ಅಲೆಯಬೇಕಿತ್ತು. ವಕೀಲರ ಫೀಸ್, ಸಮಯ ವ್ಯರ್ಥ ಹಾಗೂ ಕಾಗದ ಪತ್ರಗಳ ದೀರ್ಘ ಪ್ರಕ್ರಿಯೆಯಿಂದ ಬೇಸತ್ತು ಹಲವು ಮಾಲೀಕರು ತಮ್ಮ ಬೈಕ್‌ಗಳು ಸಿಕ್ಕಿದ್ದರೂ ಅವುಗಳನ್ನು ಕೋರ್ಟ್ ಆವರಣದಲ್ಲೇ ಬಿಟ್ಟುಬಿಡುತ್ತಿದ್ದರು.
ಸಾರ್ವಜನಿಕರ ಈ ತೊಂದರೆಯನ್ನು ಮನಗಂಡ ವಿಜಯಪುರ ಪೊಲೀಸರು, ಮಾನ್ಯ ನ್ಯಾಯಾಧೀಶರ ಪೂರ್ವ ಅನುಮತಿಯನ್ನು ಪಡೆದು ಹೊಸದೊಂದು ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಬೈಕ್ ಕಳೆದುಕೊಂಡವರು ಸೂಕ್ತ ದಾಖಲೆಗಳನ್ನು ತಂದು ಪರಿಶೀಲನೆ ನಡೆಸಿದ ಬಳಿಕ, ಠಾಣೆಯಲ್ಲೇ ಬಾಂಡ್ ಪೇಪರ್ ಬರೆದುಕೊಟ್ಟು ತಮ್ಮ ವಾಹನಗಳನ್ನು ಹುಡುಕಿ ವಾಪಸ್ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಜನಪರ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮಹತ್ವದ ಕಾರ್ಯಾಚರಣೆ ನಡೆಸಿರುವ ವಿಜಯಪುರ ಪೊಲೀಸರು ಬೈಕ್ ಕಳ್ಳತನ ಜಾಲವನ್ನು ಭೇದಿಸಿದ್ದಾರೆ. ಕದ್ದ ಬೈಕ್‌ಗಳನ್ನು ಕೇವಲ 2 ರಿಂದ 2.5 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಕದ್ದ ಬೈಕ್‌ಗಳನ್ನು ಕೇವಲ 2 ಸಾವಿರಕ್ಕೆ ಪಡೆದು ಸಾರ್ವಜನಿಕರಿಗೆ 10 ರಿಂದ 20 ಸಾವಿರ ರೂಪಾಯಿಗಳಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದ ಆರು ಜನ ಬ್ರೋಕರ್‌ಗಳನ್ನು (ಖರೀದಿದಾರರು) ಪತ್ತೆ ಹಚ್ಚಲಾಗಿದ್ದು, ಅವರ ವಿರುದ್ಧವೂ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ