
ದೇವನಹಳ್ಳಿ, ಆಗಸ್ಟ್ 31: ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ವೃದ್ಧೆ ಸೇರಿದಂತೆ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಕರುಣಾಜನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (bengaluru rural) ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಇರ್ಫಾನಾ(46), ರುಕಿಯಾ(13) ಮತ್ತು ರಾಕಿಯಾ(8) ಮೃತರು. ಸದ್ಯ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಬಳ್ಳಾಪುರದ ಮುತ್ತೂರು ನಿವಾಸಿ ಇರ್ಫಾನಾ ಎಂಬುವವರ ಮನೆಗೆ ಆಂಧ್ರಪ್ರದೇಶದ ಹಿಂದೂಪುರದಿಂದ ಮೊಮ್ಮಕ್ಕಳಾದ ರುಕಿಯಾ ಮತ್ತು ರಾಕಿಯಾ ಕಳೆದ ಶನಿವಾರ ರಜೆ ಕಳೆಯಲೆಂದು ಖುಷಿಯಿಂದ ಬಂದಿದ್ದರು. ಸೋಮವಾರ ಬೆಳಿಗ್ಗೆ ಶಾಲೆಯಿದ್ದ ಕಾರಣ, ಮಕ್ಕಳನ್ನು ಸರಿಯಾದ ಸಮಯಕ್ಕೆ ಕಳುಹಿಸುವಂತೆ ಪೋಷಕರು ತಿಳಿಸಿದ್ದರು. ಹೀಗಾಗಿ ಅಜ್ಜಿ ಇರ್ಫಾನಾ, ಬೆಳಿಗ್ಗೆ 6 ಗಂಟೆಯ ಹಿಂದೂಪುರ ಪ್ಯಾಸೆಂಜರ್ ರೈಲಿನಲ್ಲಿ ಮಕ್ಕಳನ್ನು ಕಳುಹಿಸಲು ಬೆಳಿಗ್ಗೆಯೇ ಇಬ್ಬರನ್ನೂ ಎಬ್ಬಿಸಿ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದರು.
ಪ್ಯಾಸೆಂಜರ್ ರೈಲು ತಪ್ಪಿಹೋಗಬಾರದು ಎಂಬ ಆತುರದಲ್ಲಿ ಬೇಗನೆ ಟಿಕೆಟ್ ತೆಗೆದುಕೊಳ್ಳಲು, ನಿಂತಿದ್ದ ಗೂಡ್ಸ್ ರೈಲಿನ ಪಕ್ಕದಲ್ಲೇ ಮೂವರೂ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಹಳಿ ದಾಟಲು ಯತ್ನಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಅತಿವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು ಮೂವರಿಗೂ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೃತದೇಹಗಳು ಹಳಿಯಿಂದ ಸುಮಾರು ನೂರು ಮೀಟರ್ ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಜ್ಜಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನೂ ಗ್ರಾಮದ ಪಕ್ಕದಲ್ಲಿ ರೈಲು ನಿಲ್ಥಾಣವಿದ್ದರೂ ಒಂದು ಸ್ಕೈ ವಾಕ್ ಇಲ್ಲದಿರುವುದು ಈ ರೀತಿಯ ಅನಾಹುತವಾಗಿದ್ದು, ಘಟನೆಗೆ ರೈಲ್ವೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಅಂತ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ರೈಲು ನಿಲ್ಥಾಣದ ಪಕ್ಕದಲ್ಲೇ ಕೈಗಾರಿಕಾ ಪ್ರದೇಶವು ಇರುವ ಕಾರಣ ರಾತ್ರಿ ವೇಳೆ ಕೆಲಸ ಮುಗಿಸಿ ಜನರು ರೈಲಿನ ಅಡಿ ನುಗ್ಗಿ ಬರುವ ಪರಿಸ್ಥಿತಿಯಿದ್ದು, ಸ್ವಲ್ಪ ಯಾಮಾರಿದರು ಪ್ರಾಣಗಳೇ ಹೋಗುತ್ತವೆ. ಹೀಗಾಗಿ ಗ್ರಾಮದ ಬಳಿ ಸ್ಕೈ ವಾಕ್ ನಿರ್ಮಾಣ ಮಾಡುವಂತೆ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ದಾರುಣ ಅಂತ್ಯಕಂಡ ಯುವಕ
ಶಾಲೆಗೆ ಸರಿಯಾದ ಸಮಯಕ್ಕೆ ಬಿಡಬೇಕು ಎಂದು ಹೊರಟ ಅಜ್ಜಿ, ಮೊಮ್ಮಕ್ಕಳ ಜೊತೆಯಲ್ಲೇ ಬಾರದ ಲೋಕಕ್ಕೆ ತೆರಳಿದ್ದು, ನಿಜಕ್ಕೂ ದುರಂತ. ಇನ್ನೂ ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ರೈಲ್ವೆ ಇಲಾಖೆ ಅಧಿಕಾರಿಗಳು ಗ್ರಾಮದ ಬಳಿ ಸ್ಕೈವಾಕ್ ನಿರ್ಮಿಸಿ ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:49 pm, Mon, 31 August 26