ಯುವಕನ ಮರ್ಮಾಂಗ ತುಳಿದು ಹಲ್ಲೆ ಕೇಸ್: ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದಾಕೆ ಅರೆಸ್ಟ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಸೂತ್ರಧಾರಿ 17 ವರ್ಷದ ಹುಡುಗಿ ಎಂದು ತಿಳಿದುಬಂದಿದೆ. ಹಾಗಿದ್ದರೆ ಹುಡುಗಿ ಸೂತ್ರಧಾರಿ ಆಗಿದ್ದು ಹೇಗೆ? ಇಲ್ಲಿದೆ ವಿವರ.

ನೆಲಮಂಗಲ, ಜುಲೈ 07: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿ ಬಳಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಕೇಸ್ಗೆ ಸಂಬಂಧಿಸಿದಂತೆ ಪ್ರಕರಣದ ಸೂತ್ರಧಾರಿ 17 ವರ್ಷದ ಹುಡಗಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು, ಬಾಲಕಿಯನ್ನು ಬಂಧಿಸಿ ಕಾನೂನು ಸಂಘರ್ಷ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ. ಇದೀಗ, ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಶಾಲಾದಿನಗಳಲ್ಲಿ ಅರಳಿದ ಪ್ರೀತಿ
17 ವರ್ಷದ ಹುಡಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಯುವಕ ಕುಶಾಲ್ನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಹುಡುಗಿ ಶಾಲೆ ಮುಗಿಸಿಕೊಂಡು ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಪ್ರೇಮಿಗಳ ನಡುವೆ ಬಿರುಕು ಮೂಡಿದೆ. ಎರಡು ವರ್ಷದ ಪ್ರೀತಿ ಕೆಲ ದಿನಗಳ ಹಿಂದೆಯಷ್ಟೇ ಬ್ರೇಕ್ ಅಪ್ ಆಗಿದೆ. ಬ್ರೇಕ್ ಅಪ್ ಆದ ಬಳಿಕ ಯುವಕ ಕುಶಾಲ್ ಖಾಸಗಿ ಕ್ಷಣದ ಫೋಟೋಗಳನ್ನು ವೈರಲ್ ಮಾಡುವುದಾಗಿ ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ಪವಿತ್ರಾ ಗೌಡ ರೀತಿಯೇ ಪ್ಲಾನ್ ಕೊಟ್ಟ ಬಾಲಕಿ
ಈ ವಿಚಾರವನ್ನು ಹುಡುಗಿ ತನ್ನ ಸ್ನೇಹಿತರ ಮುಂದೆ ಹೇಳಿದ್ದಾಳೆ. ಅಲ್ಲದೆ, ಕುಶಾಲ್ನನ್ನು ಅಪಹರಿಸುವಂತೆ ಹುಡುಗಿ ತನ್ನ ಸ್ನೇಹಿತರಿಗೆ ಹೇಳಿದ್ದಾಳೆ. ಅದರಂತೆ ಹುಡುಗಿಯ ಸ್ನೇಹಿತರು, ಕುಶಾಲ್ನನ್ನು ಸಂಪರ್ಕಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಬಾ ಅಂತ ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಯುವಕ ಕುಶಾಲ್ನನ್ನು ಹುಡುಗಿಯ ಸ್ನೇಹಿತರು ಅಪಹರಿಸಿದ್ದಾರೆ.
ಹುಡಗಿ ಎದುರು ಯುವಕನನ್ನು ಬೆತ್ತಲೆಗೊಳಿಸಿದ ಆರೋಪಿಗಳು
ಕುಶಾಲ್ನನ್ನು ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಕಾರಿನಲ್ಲಿ ಹುಡುಗಿಯೂ ಇದ್ದಳು. ಕಾರ್ನಲ್ಲಿ ಹುಡಗಿ ಮುಂದೆಯೇ ಆರೋಪಿಗಳು ಕುಶಾಲ್ ಮೇಲೆ ಹಲ್ಲೆ ಮಾಡಿದ್ದಾರೆ. ಹಾಡು ಹೇಳುವಂತೆ ಒತ್ತಾಯಿಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಮೇಲೆ ಆರೋಪಿಗಳು ಹುಡುಗಿಯ ಮುಂದೆಯೇ ಯುವಕ ಕುಶಾಲ್ನ ಬಟ್ಟೆ ಬಿಚ್ಚಿಸಿ ಬೆತ್ತಲು ಗೋಳಿಸಿ ವಿಕೃತಿ ಮೆರೆದಿದ್ದಾರೆ. ಬಳಿಕ, ಯುವಕ ಕುಶಾಲ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗ ತುಳಿದು ಹಲ್ಲೆ: ರೇಣುಕಾಸ್ವಾಮಿ ರೀತಿ ಮಾಡುತ್ತೇವೆ ಎಂದ ಆರೋಪಿಗಳು
11 ಜನ ಆರೋಪಿಗಳ ಬಂಧನ
ಪ್ರಕರಣ ಸಂಬಂಧ ಹುಡುಗಿ ಸೇರಿದಂತೆ 11 ಜನರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ 8 ಜನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿಗಳಾದ ಶಶಾಂಕ್ ಗೌಡ, ಸಲ್ಮಾನ್, ಯಶ್ವಂತ್, ವಿದ್ಯಾರ್ಥಿಗಳಾದ ತೇಜಸ್, ರಾಕೇಶ್, ರಾಹುಲ್ ಮತ್ತು ಹೇಮಂತ್ ಬಿಡುಗಡೆಯಾದವರು. ಆರೋಪಿ ಹೇಮಂತ ಈ ಹಿಂದೆ ಹಲವು ಬಾರಿ ಹಲ್ಲೆ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಬಂದಿದ್ದಾನೆ.
ಗೃಹ ಸಚಿವರು ಹೇಳಿದ್ದಿಷ್ಟು
ಪ್ರಕರಣ ಸಂಬಂಧ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ. ರೇಣುಕಾಸ್ವಾಮಿ ಪ್ರಕರಣ ಪ್ರೇರಣೆ ಆಗುತ್ತಿದೆಯಾ ಅನ್ನೋದು ಗೊತ್ತಿಲ್ಲ. ಆ ಬಗ್ಗೆ ಮನಶ್ಶಾಸ್ತ್ರಜ್ಞರು ಅಧ್ಯಯನ ಮಾಡಿ ಹೇಳಬೇಕಾಗುತ್ತದೆ ಎಂದು ಹೇಳಿದರು. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Mon, 7 July 25