ಆಸ್ತಿ ವಿಚಾರಕ್ಕೆ ನಡು ರಸ್ತೆಯಲ್ಲಿ ತಂದೆ-ಮಕ್ಕಳ ಕೌಟುಂಬಿಕ ಕಲಹದ ಹೈಡ್ರಾಮ: ಮನೆಗೆ ಬೀಗ ಜಡಿದು ವಶಕ್ಕೆ ಪಡೆದ ಅಧಿಕಾರಿಗಳು
ಪಾಪಣ್ಣ ದೇವನಹಳ್ಳಿಯ ಬೂದಿಗೆರೆ ಗ್ರಾಮದವರು. 2 ಪತ್ನಿಯರು, 8 ಮಕ್ಕಳಿದ್ದು ಕಷ್ಟಪಟ್ಟು ದುಡಿದು ಬೂದಿಗೆರೆ ಗ್ರಾಮದಲ್ಲಿ ಮನೆ, ಅಂಗಡಿ ಸೇರಿದಂತೆ ಒಂದಷ್ಟು ಜಮೀನು ಮಾಡಿದ್ದರು. ಆದರೀಗ ಅವರು ಕೈಯಲ್ಲಿ ದಾಖಲೆ ಪತ್ರ ಹಿಡಿದು ನನಗೆ ನ್ಯಾಯ ಸಿಗ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ.
ಅವರೆಲ್ಲ ಒಂದೇ ಕುಟುಂಬ ಒಂದೆ ರಕ್ತ ಹಂಚಿಕೊಂಡು ಹುಟ್ಟಿರುವ ತಂದೆ ಮಕ್ಕಳು. ಎಲ್ಲವೂ ಚೆನ್ನಾಗಿದ್ರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸಮಸ್ಯೆ ಬಗೆ ಹರಿಸಿಕೊಳ್ಳಬೇಕಿತ್ತು. ಆದ್ರೆ ಮಕ್ಕಳೆ ತನ್ನ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ ಅಂತ ತಂದೆ ಪ್ರತಿಭಟನೆ ನಡೆಸಿದ್ರೆ ಇತ್ತ ಮಕ್ಕಳು ತಮ್ಮ ತಂದೆಯ ವಿರುದ್ದ (Father, Sons) ನಡುರಸ್ತೆಯಲ್ಲಿ ತಿರುಗಿಬಿದ್ದು ಮನೆ ಜಗಳವನ್ನ ಬೀದಿ ರಂಪಾಟವನ್ನಾಗಿ ಮಾಡಿದ್ದಾರೆ. ಒಬ್ಬೊಂಟಿಯಾಗಿ ಪಂಚಾಯ್ತಿ ಮುಂದೆ ದಾಖಲೆ ಹಿಡಿದು ಕುಳಿತು ವೃದ್ದ ಆಕ್ರೋಶ ಹೊರ ಹಾಕ್ತಿದ್ರೆ ಇತ್ತ ವೃದ್ದನ ವಿರುದ್ದ ಮಹಿಳೆಯರು ಪುರುಷರು ಸಹ ತಿರುಗಿ ಬಿದ್ದಿದ್ದಾರೆ. ನೋಡ ನೋಡ್ತಿದ್ದಂತೆ ಕ್ಷಣ ಮಾತ್ರದಲ್ಲೆ ಸರ್ಕಾರಿ ಕಛೇರಿ ಫ್ಯಾಮಿಲಿ ಡ್ರಾಮಾ ಸ್ಪಾಟ್ ಆಗಿ ಬದಲಾಗಿದೆ. ಇತ್ತ ಅಧಿಕಾರಿಗಳು ಪೊಲೀಸರು ಎರಡು ಕಡೆಯವರ ಮನವೊಲಿಸಲು ಹರಸಾಹಸವನ್ನೆ ಪಡ್ತಿದ್ದಾರೆ. ಹೌದು ಅಷ್ಟಕ್ಕೂ ಅಲ್ಲಿ ಈ ರೀತಿ ಬೀದಿ ಜಗಳ ಮಾಡ್ತಿರುವ ಇವರು ಅಕ್ಕಪಕ್ಕದ ಮನೆಯವರೂ ಅಥವಾ ದಾಯಾದಿಗಳೋ ಅಲ್ಲ ಬದಲಾಗಿ ಒಂದೇ ಕುಟುಂಬದ ತಂದೆ ಮತ್ತು ಮಕ್ಕಳು!
ಅಂದಹಾಗೆ ಕೈಯಲ್ಲಿ ದಾಖಲೆ ಪತ್ರಗಳನ್ನು (Property issue) ಹಿಡಿದು ನನಗೆ ನ್ಯಾಯ ಸಿಗ್ತಿಲ್ಲ ಅಂತ ಆರೋಪಿಸುತ್ತಿರುವ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ (Budigere, Devanahalli) ನಿವಾಸಿಯಾದ ಪಾಪಣ್ಣ. ಆತನಿಗೆ ಇಬ್ಬರು ಪತ್ನಿಯರು ಮತ್ತು ಎಂಟು ಜನ ಮಕ್ಕಳಿದ್ದು ಕಷ್ಟಪಟ್ಟು ದುಡಿದು ಬೂದಿಗೆರೆ ಗ್ರಾಮದಲ್ಲಿ ಮನೆ, ಅಂಗಡಿ ಸೇರಿದಂತೆ ಒಂದಷ್ಟು ಜಮೀನು ಮಾಡಿದರಂತೆ.
ಆದ್ರೆ ಮಕ್ಕಳು ಬೆಳೆದು ದೊಡ್ಡವರಾದ ನಂತರ ಆಸ್ತಿ ಮತ್ತು ಮನೆಯನ್ನ ಕಿತ್ತುಕೊಂಡು ಹೊರಗಡೆ ಹಾಕಿದ್ದಾರೆ ಅಂತ ಕಳೆದ ವರ್ಷ ಪಾಪಣ್ಣ ಎಸಿ ಕೋರ್ಟ್ ಮೊರೆ ಹೋಗಿದ್ದರು. ಎಸಿ ಕೋರ್ಟ್ ನಲ್ಲಿ ಪಾಪಣ್ಣ ಅವರ ಸ್ವಯಾರ್ಜಿತ ಆಸ್ತಿ ಬಿಡಿಸಿಕೊಡುವಂತೆ ಉಪ ವಿಭಾಗಾಧಿಕಾರಿ ಆದೇಶ ಮಾಡಿದ್ರಂತೆ.
ಆದ್ರೆ ಆದೇಶ ಮಾಡಿದ ನಂತರವೂ ಮಕ್ಕಳು ದೌರ್ಜನ್ಯ ಮುಂದುವರೆಸಿದ್ದು ನನಗೆ ನ್ಯಾಯ ಸಿಗ್ತಿಲ್ಲ ಅಂತ ಪಾಪಣ್ಣ ಗ್ರಾಮ ಪಂಚಾಯ್ತಿ ಮುಂದೆ ಕುಳಿತು ಧರಣಿ ನಡೆಸಿ ಆಕ್ರೋಶ ಹೊರ ಹಾಕಿದ್ರು. ಇನ್ನು ತಮ್ಮ ತಂದೆ ಪಾಪಣ್ಣ ಕಛೇರಿ ಮುಂದೆ ಧರಣಿ ನಡೆಸುತ್ತಿರುವ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಮಕ್ಕಳು ತಂದೆಯ ವಿರುದ್ದ ತಿರುಗಿಬಿದ್ದಿದ್ದಾರೆ. ತಂದೆ ಮಕ್ಕಳ ನಡುವೆ ಮಾತಿನ ಚಕಮಕಿ ನಡೆದಿದೆ.
ತಂದೆ ಮಕ್ಕಳು ಸರ್ಕಾರಿ ಕಛೇರಿ ಮುಂದೆ ದಾಯಾದಿಗಳಂತೆ ಬೀದಿ ಜಗಳ ನಡೆಸುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಇಬ್ಬರ ಮನವೊಲಿಸುವ ಕೆಲಸ ಮಾಡಿದರು. ಆದ್ರೆ ತಂದೆಯೆ ಚಿಕ್ಕ ಪತ್ನಿ ಪರ ನಿಂತು ನಮಗೆ ಅನ್ಯಾಯ ಮಾಡ್ತಿದ್ದು ನಮಗೂ ನ್ಯಾಯ ಸಿಕ್ಕಿಲ್ಲ. ಇದೀಗ ಡ್ರಾಮಾ ಮಾಡಿ ನಮ್ಮ ವಿರುದ್ದ ಪಿತೂರಿ ಮಾಡ್ತಿದ್ದಾರೆ ಅಂತ ಪಾಪಣ್ಣನ ಮಕ್ಕಳು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಇಬ್ಬರ ಜಗಳ ಜೋರಾಗ್ತಿದ್ದಂತೆ ಇಬ್ಬರನ್ನೂ ಸ್ಥಳದಿಂದ ಹೊರ ಕಳಿಸಿದ ಅಧಿಕಾರಿಗಳು ನಂತರ ಉಪ ವಿಭಾಗಾಧಿಕಾರಿಗಳ ಆದೇಶದಂತೆ ತಂದೆ ಸಂಪಾದಿಸಿದ್ದು ಎನ್ನಲಾದ ಮನೆಗೆ ಹಾಕಿದ್ದ ಬೀಗವನ್ನ ಒಡೆದು, ಮತ್ತೊಂದು ಬೀಗವನ್ನ ಅಧಿಕಾರಿಗಳು ಹಾಕಿಸಿದ್ರು. ಜೊತೆಗೆ ಬೀಗ ಜಡಿದಿರುವ ಮನೆಯಲ್ಲಿರುವ ವಸ್ತುಗಳನ್ನ ತೆಗೆದುಕೊಳ್ಳಲು ಮಕ್ಕಳಿಗೆ ಎರಡು ದಿನ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ತಗೆದುಕೊಳ್ಳದೆ ಇದ್ದಲ್ಲಿ ಮನೆಯನ್ನ ತಂದೆಯ ವಶಕ್ಕ ನೀಡೋದಾಗಿ ದೇವನಹಳ್ಳಿ ಉಪ ತಹಶೀಲ್ದಾರ್ ಸುರೇಶ್ ಎಚ್ಚರಿಸಿದ್ದಾರೆ.
ಒಟ್ಟಾರೆ ನಾಲ್ಕು ಗೋಡೆ ಮಧ್ಯೆ ಕುಳಿತು ಕೂತು ಬಗೆಹರಿಸಿಕೊಳ್ಳಬೇಕಾದ ತಂದೆ ಮಕ್ಕಳೇ, ಆಸ್ತಿ ವಿಚಾರಕ್ಕೆ ಬೀದಿಗಿಳಿದು ರಂಪಾಟ ನಡೆಸಿಕೊಂಡು ಇದೀಗ ವಾಸವಿದ್ದ ಮನೆಗಳಿಗೆ ಬೀಗ ಜಡಿದು ಹೋರಾಟ ನಡೆಸುತ್ತಿರುವುದು ನಿಜಕ್ಕೂ ವಿಪರ್ಯಾಸ.
ವರದಿ: ನವೀನ್, ಟಿವಿ 9, ದೇವನಹಳ್ಳಿ