ಬೆಂಗಳೂರು ಕಾಲ್ತುಳಿತ: 11 ಸಾವಾದರೂ ದಾಖಲಾಗಿಲ್ಲ ಒಂದೇ ಒಂದು ಎಫ್​ಐಆರ್! ಮುಂದೇನಾಗಲಿದೆ? ಇಲ್ಲಿದೆ ವಿವರ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ, ಒಂದೇ ಒಂದು ಎಫ್​ಐಆರ್ ದಾಖಲಿಸದ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ‘ಅಸಹಜ ಸಾವು’ ಪ್ರಕರಣ ದಾಖಲಿಸಿ ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದರೂ, ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವುದು ಅನುಮಾನವಾಗಿದೆ. ಅದಕ್ಕೆ ಏನು ಕಾರಣ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಕಾಲ್ತುಳಿತ: 11 ಸಾವಾದರೂ ದಾಖಲಾಗಿಲ್ಲ ಒಂದೇ ಒಂದು ಎಫ್​ಐಆರ್! ಮುಂದೇನಾಗಲಿದೆ? ಇಲ್ಲಿದೆ ವಿವರ
ಆರ್​ಸಿಬಿ ಅಭಿಮಾನಿಗಳು
Edited By:

Updated on: Jun 05, 2025 | 9:59 AM

ಬೆಂಗಳೂರು, ಜೂನ್ 5: ಆರ್​ಸಿಬಿ  (RCB) ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆಯನ್ನು ಮುಚ್ಚಿಹಾಕಲು ಸರ್ಕಾರ ಮುಂದಾಗುತ್ತಿದೆಯೇ? ಇಂಥದ್ದೊಂದು ಅನುಮಾನ ಇದೀಗ ಬಲವಾಗಿದೆ. ಯಾಕೆಂದರೆ, ಇಷ್ಟೊಂದು ದೊಡ್ಡ ಮಟ್ಟದ ದುರಂತ ಸಂಭವಿಸಿದ್ದರೂ ಈವರೆಗೆ ಒಂದೇ ಒಂದು ಎಫ್​ಐಆರ್ ಕೂಡ ದಾಖಲಾಗಿಲ್ಲ. ಘಟನೆಯನ್ನು ಕೇವಲ ‘ಅಸಹಜ ಸಾವು (UDR)’ ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹನ್ನೊಂದು ಯುಡಿಆರ್ ದಾಖಲಾಗಿವೆ. ದುರ್ಘಟನೆಯಿಂದ ಆಗಿರುವ ಸಾವು ಹಾಗೂ ಇತರ ಯಾವುದೇ ವಿಚಾರಕ್ಕೆ ಕೇಸ್ ದಾಖಲು ಮಾಡಿಲ್ಲ.

ಕಾರ್ಯಕ್ರಮ ಆಯೋಜಿಸಿದವರ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ ಎಂದು ಕೇಸ್ ದಾಖಲು ಮಾಡಲು ಅವಕಾಶವಿತ್ತು. ಕಾರ್ಯಕ್ರಮ ಆಯೋಜಿಸಿದ್ದ ಕೆಎಸ್​ಸಿಎ ಮತ್ತು ಕಾರ್ಯಕ್ರಮದ ಇವೆಂಟ್ ಮ್ಯಾನೇಜ್​ಮೆಂಟ್ ಜವಾಬ್ದಾರಿ ವಹಿಸಿದ್ದ ಡಿಎನ್​ಎ ಕಂಪನಿ ವಿರುದ್ಧ ಕೇಸ್ ದಾಖಲು ಮಾಡಿ ತನಿಖೆ ನಡೆಸಬಹುದಾಗಿತ್ತು. ಆದರೆ, ಈಗ ಹೊಣೆಗಾರಿಕೆ ಹೊರಲು ಯಾರೂ ತಯಾರಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ‘ಅಸಹಜ ಸಾವು’ ಪ್ರಕರಣ ದಾಖಲಿಸಿದ್ದಾರೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ
ತಕ್ಷಣವೇ ಸಂಭ್ರಮಾಚರಣೆ ಬೇಡವೆಂದರೂ ಕೇಳಿಲ್ಲ: ಪೊಲೀಸರಿಂದ ತೀವ್ರ ಅಸಮಾಧಾನ
ಬೆಂಗಳೂರು ಕಾಲ್ತುಳಿತದಲ್ಲಿ ಮೃತಪಟ್ಟವರು ಯಾರೆಲ್ಲ? ಇಲ್ಲಿದೆ ಪೂರ್ಣ ವಿವರ
ಬೆಂಗಳೂರಲ್ಲಿ ಕಾಲ್ತುಳಿತ; ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣವೆಂದ ಬಿಜೆಪಿ
ಐಪಿಎಲ್ ಸಂಭ್ರಮದಲ್ಲಿ ಸೂತಕ; ಯಡವಟ್ಟಾಗಿದ್ದೆಲ್ಲಿ, ಹೊಣೆ ಯಾರು?

ಪೊಲೀಸರ ಈ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷಪ ವ್ಯಕ್ತವಾಗಿದೆ. ಹಾಗಾದರೆ, ಹನ್ನೊಂದು ಜೀವಗಳಿಗೆ ಬೆಲೆ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈಗ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿ ಪಡೆದು ನಂತರ ಅದನ್ನು ಕ್ಲೋಸ್ ಮಾಡಲಿದ್ದಾರೆ.

ಮ್ಯಾಜಿಸ್ಟ್ರೇಟ್ ತನಿಖೆಯ ಪಾತ್ರವೇನು?

ಸದ್ಯ, ದುರ್ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಸರ್ಕಾರ ಆದೇಶಿಸಿದೆ. ಈ ಪ್ರಕ್ರಿಯೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಕೆ ಮಾಡುವುದಷ್ಟೇ ಮ್ಯಾಜಿಸ್ಟ್ರೇಟರ ಹೊಣೆಗಾರಿಕೆಯಾಗಿರುತ್ತದೆ. ಇಲ್ಲಿ ಅದಕ್ಕಿಂತ ಹೆಚ್ಚಿನ ತನಿಖೆ, ವಿಚಾರಣೆಗೆ ಆಸ್ಪದ ಇರುವುದಿಲ್ಲ. ಹೆಚ್ಚೆಂದರೆ, ಅಧಿಕಾರಿಗಳ ಅಥವಾ ಆಯೋಜಕರ ವಿರುದ್ದ ಮ್ಯಾಜಿಸ್ಟ್ರೇಟರು ವರದಿ ಸಲ್ಲಿಸಬಹುದು. ಅಂಥ ಸಂದರ್ಭದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಬಹದು ಅಥವಾ ಇಲಾಖಾ ತನಿಖೆಗೆ ಅದೇಶಿಸಬಹುದು.

ಇದನ್ನೂ ಓದಿ: ತಕ್ಷಣವೇ ಆರ್​ಸಿಬಿ ಸಂಭ್ರಮಾಚರಣೆ ಬೇಡವೆಂದರೂ ಕೇಳಿಲ್ಲ: ಪೊಲೀಸ್ ಅಧಿಕಾರಿಗಳಿಂದ ತೀವ್ರ ಅಸಮಾಧಾನ

ಪೊಲೀಸರ ಈ ನಡೆಯಿಂದಾಗಿ ಸಂಪೂರ್ಣ ಘಟನೆಗೆ ಯಾರು ಹೊಣೆ ಎಂಬ ಬಗ್ಗೆ ತನಿಖೆಯೇ ನಡೆಯುವುದಿಲ್ಲ. ಜನರು ಅವರಾಗಿಯೇ ಬಂದು ಸಿಕ್ಕಿ ಹಾಕಿಕೊಂಡು ಕಾಲ್ತುಳಿತವಾಗಿ ಸಾವನಪ್ಪಿದ್ದಾರೆ. ಇದಕ್ಕೆ ಯಾರೂ ಹೊಣೆ ಅಲ್ಲ ಎಂಬ ನಿರ್ಧಾರಕ್ಕೆ ಭಾಗಶಃ ಬಂದಂತಾಗಿದೆ. ಬಿಎನ್​ಎಸ್ ಕಾಯ್ದೆಯ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಉಂಟಾದ ಸಾವು) ಅಡಿ ಪ್ರಕರಣ ದಾಖಲಿಸಲು ಅವಕಾಶ ಇದ್ದರೂ ಹಾಗೆ ಮಾಡದೇ ಇರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:55 am, Thu, 5 June 25