ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸಿಎಂ, ಡಿಸಿಎಂ ಸೇರಿ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ದೂರು
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಉಂಟಾದ ಕಾಲ್ತುಳಿತ ದುರಂತ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಕ್ಷಪಗಳು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುತ್ತಿವೆ. ಹೀಗಿರುವಾಗ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಘಟನೆ ಸಂಬಂಧ ಸಿಎಂ, ಡಿಸಿಎಂ ಸೇರಿ ಕೆಎಸ್‌ಸಿಎ ಅಧಿಕಾರಿಗಳ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಬೆಂಗಳೂರು, ಜೂನ್ 05: ಹದಿನೆಂಟು ವರ್ಷಗಳ ತಪ್ಪಸ್ಸಿನ ಟ್ರೋಫಿ ಕಣ್ತುಂಬಿಕೊಳ್ಳಲು ಹೋಗಿದ್ದ ಸಾವಿರಾರು ಅಭಿಮಾನಿಗಳ ಮಧ್ಯೆ ಘೋರ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಉಸಿರುಚೆಲ್ಲಿದ್ದಾರೆ. ಭೀಕರ ದುರಂತ ಹಿನ್ನೆಲೆ ಇದುವರೆಗೆ ಒಂದೇ ಒಂದು ಎಫ್ಐಆರ್ ದಾಖಲಾಗಿಲ್ಲ. ಇದರ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (Snehamayi Krishna), ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ಸೇರಿದಂತೆ ಕೆಎಸ್‌ಸಿಎ ಅಧಿಕಾರಿಗಳ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?
ಜನಪ್ರಿಯ ಪ್ರಚಾರದ ರಾಜಕೀಯ ಲಾಭದ ಕಾರಣಕ್ಕಾಗಿ ಆರ್‌ಸಿಬಿ ತಂಡದ ಆಟಗಾರರನ್ನು ವಿಧಾನಸೌಧದ ಮುಂಭಾಗ ಸನ್ಮಾನ ಮಾಡುವ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವ ದುಡುಕಿನ ನಿರ್ಧಾರ ಕೈಗೊಂಡು, ಸೂಕ್ತ ಭದ್ರತೆಯ ನಿರ್ಲಕ್ಷ್ಯವನ್ನು ತೋರಿಸಿ, ಸುಮಾರು 11 ಜನರ ಸಾವು ಸಂಭವಿಸಿದ್ದು, 30 ಜನರಿಗಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: 11 ಸಾವಾದರೂ ದಾಖಲಾಗಿಲ್ಲ ಒಂದೇ ಒಂದು ಎಫ್ಐಆರ್! ಮುಂದೇನಾಗಲಿದೆ? ಇಲ್ಲಿದೆ ವಿವರ
ಈ ದುರಂತಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು ಹಾಗೂ ಇತರರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಕಲಂ 106 ರ ಪ್ರಕಾರ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ಕಾಲ್ತುಳಿತ ದುರಂತ ಹಿನ್ನೆಲೆ ಇಂದು ಮಧ್ಯಾಹ್ನ 12.30ಕ್ಕೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಕೀಲ ನಟರಾಜ ಶರ್ಮ ಕೂಡ ದೂರು ದಾಖಲಿಸಲು ಮುಂದಾಗಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಿಷ್ಟು
ಪ್ರಕರಣ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ನಿನ್ನೆ ನಡೆದ ಘಟನೆ ರಾಜ್ಯದ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ನ್ಯಾಯಾಂಗ ತನಿಖೆ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್, ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ
ಕಾಲ್ತುಳಿತ ದುರಂತದಲ್ಲಿ ಈವರೆಗೂ 11 ಜನ ಮೃತಪಟ್ಟಿದ್ದಾರೆ. ಘಟನೆಯಲ್ಲಿ 56 ಜನ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 46 ಜನ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 10 ಜನರಿಗೆ ಚಿಕಿತ್ಸೆ ಮುಂದುವರಿದಿದೆ. 10 ಜನರ ಸ್ಥಿತಿ ಗಂಭೀರ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Thu, 5 June 25







