ಕೊಂಬುಚಾ ಜ್ಯೂಸ್ ಅನ್ನು ಬಿಯರ್ ಅಂದುಕೊಂಡು ಮಹಿಳೆಗೆ ಕಿರುಕುಳ: ಚಾಲಕನ ವಿರುದ್ಧ ಎಫ್ಐಆರ್!
ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಉಬರ್ ಕ್ಯಾಬ್ ಚಾಲಕನೊಬ್ಬ ಮಹಿಳೆ ಕುಡಿಯುತ್ತಿದ್ದ ಕೊಂಬುಚಾವನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿ, ಆಕೆಯ ಕೈ ಎಳೆದು ದೌರ್ಜನ್ಯ ಎಸಗಿದ್ದಾನೆ. ಮಹಿಳೆಯ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದ್ದು, ಚಾಲಕನ ವಿರುದ್ಧ ತನಿಖೆ ನಡೆಯುತ್ತಿದೆ. ಇದು ನಗರದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ.

ಮುಖ್ಯಾಂಶಗಳು
- ಕೊಂಬುಚಾ ಅನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿದ ಉಬರ್ ಕ್ಯಾಬ್ ಚಾಲಕ
- ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಚಾಲಕ
- ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ
ಬೆಂಗಳೂರು,ಜೂ.27: ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕ್ಯಾಬ್ನಲ್ಲಿ ಮಹಿಳೆಯೊಬ್ಬರು ಕುಡಿಯುತ್ತಿದ್ದ ಆರೋಗ್ಯಕರ ಜ್ಯೂಸ್ (ಕೊಂಬುಚಾ) ಅನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿದ 60 ವರ್ಷದ ಉಬರ್ ಕ್ಯಾಬ್ ಚಾಲಕನೊಬ್ಬ, ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಆಕೆಯ ಕೈ ಎಳೆದು ದೌರ್ಜನ್ಯ ಎಸಗಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಚಾಲಕನ ವಿರುದ್ಧ ಎಫ್ಐಆರ್ (FIR) ದಾಖಲಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಪ್ರಕಾರ, ಜೂನ್ 21ರ ರಾತ್ರಿ ಮಹಿಳೆಯು ಕೋರಮಂಗಲದ ರೆಸ್ಟೋರೆಂಟ್ವೊಂದರಿಂದ ತಮ್ಮ ಮನೆಗೆ ಹೋಗಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಪ್ರಯಾಣದ ಮಧ್ಯೆ, ಭಾರತೀಯ ಕ್ರಿಶ್ಚಿಯನ್ ಸ್ಮಶಾನದ (Indian Christian Cemetery) ಹತ್ತಿರ ತಲುಪಿದಾಗ ಮಹಿಳೆ ತಾವು ತಂದಿದ್ದ ‘ಕೊಂಬುಚಾ (ಒಂದು ರೀತಿಯ ಹುದುಗಿಸಿದ ಪಾನೀಯ) ಬಾಟಲಿಯನ್ನು ತೆಗೆದು ಕುಡಿಯಲು ಯತ್ನಿಸಿದ್ದಾರೆ. ಇದನ್ನು ನೋಡಿದ ಚಾಲಕ ಪರಮೇಶ್ವರ್, ಅದು ಬಿಯರ್ ಬಾಟಲಿ ಎಂದು ತಪ್ಪಾಗಿ ಭಾವಿಸಿ ಮಹಿಳೆಯೊಂದಿಗೆ ಜಗಳಕ್ಕಿಳಿದಿದ್ದಾನೆ ಮತ್ತು ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ ಎಂದು ಹೇಳಲಾಗಿದೆ.
ಚಾಲಕನ ಉದ್ಧಟತನದಿಂದಾಗಿ ಇಬ್ಬರ ನಡುವೆ ಭಾರಿ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಭಯಭೀತರಾದ ಮಹಿಳೆ, ತಕ್ಷಣವೇ ಕಾರನ್ನು ನಿಲ್ಲಿಸುವಂತೆ ಮತ್ತು ಟ್ರಿಪ್ ಕೊನೆಗೊಳಿಸುವಂತೆ ಚಾಲಕನಿಗೆ ಪದೇ ಪದೇ ವಿನಂತಿಸಿದ್ದಾರೆ. ಆದರೆ, ಚಾಲಕ ಕಾರನ್ನು ನಿಲ್ಲಿಸದೆ ಹಾಗೇ ಚಲಾಯಿಸಿಕೊಂಡು ಹೋಗಿದ್ದಾನೆ. ತನ್ನ ಸುರಕ್ಷತೆಯ ಬಗ್ಗೆ ತೀವ್ರ ಆತಂಕಗೊಂಡ ಮಹಿಳೆ, ಚಲಿಸುತ್ತಿದ್ದ ಕಾರಿನ ಬಾಗಿಲನ್ನು ತೆರೆದು ಹೊರಗೆ ಜಿಗಿಯಲು ಯತ್ನಿಸಿದ್ದಾರೆ.
ಈ ವೇಳೆ ಚಾಲಕ ಪರಮೇಶ್ವರ್, ಮಹಿಳೆಯ ಕೈಯನ್ನು ಬಲವಂತವಾಗಿ ಹಿಡಿದು ಎಳೆದು, ಮತ್ತೆ ಕಾರಿನೊಳಗೆ ತಳ್ಳಿದ್ದಾನೆ. ತದನಂತರ ಹೇಗೋ ಕಷ್ಟಪಟ್ಟು ಕಾರಿನಿಂದ ತಪ್ಪಿಸಿಕೊಂಡ ಮಹಿಳೆ ಅಲ್ಲಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಚಾಲಕ ಅಲ್ಲಿಂದ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಸದ್ಯ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ, ರಾಯಚೂರಿನಲ್ಲಿ ಕೃತಕ ಶೇಂದಿ ದಂಧೆ: 1,500 ಕೆಜಿ ಮರಣಾಂತಿಕ ಕೆಮಿಕಲ್ ಸೀಜ್ ಮಾಡಿದ ಅಬಕಾರಿ ಇಲಾಖೆ
ಇದೇ ವೇಳೆ ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಭೀಕರ ಘಟನೆ ನಡೆದಿದೆ, ಅಸ್ಸಾಂ ಮೂಲದ 27 ವರ್ಷದ ಯುವತಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ 42 ವರ್ಷದ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಮನೆಗೆಲಸ ಮಾಡುವ ಈ ಯುವತಿ ನಾರಾಯಣಪುರದಿಂದ ತನ್ನ ಊರಿಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಬುಧವಾರ ತಡರಾತ್ರಿ 12:30 ರಿಂದ 1:40 ರ ನಡುವೆ ಅವಲಹಳ್ಳಿ ಎಂಬ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ ಬಳ್ಳಾರಿ ಮೂಲದ (ಪ್ರಸ್ತುತ ಶಾಂತಿನಗರ ನಿವಾಸಿ) ಚಾಲಕ, ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




