ಫೇಸ್‌ಬುಕ್‌ನಲ್ಲಿ ಶ್ರೀರಾಮನಿಗೆ ಅಪಮಾನ: ಕನ್ನೇರಿ ಶ್ರೀಗಳ ಸಮಾವೇಶದ ಬೆನ್ನಲ್ಲೇ ಪ್ರಚೋದನಕಾರಿ ಪೋಸ್ಟ್, ಭುಗಿಲೆದ್ದ ಆಕ್ರೋಶ!
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಕನ್ನೇರಿ ಶ್ರೀಗಳ ಬೃಹತ್ ಹಿಂದೂ ಸಮಾವೇಶಕ್ಕೆ ಅನುಮತಿ ದೊರೆತ ಬೆನ್ನಲ್ಲೇ, 'ಬಸವಪರ ಸಂಘಟನೆಗಳ ಒಕ್ಕೂಟ' ಎಂಬ ಫೇಸ್‌ಬುಕ್ ಖಾತೆಯಿಂದ ಪ್ರಭು ಶ್ರೀರಾಮ ಹಾಗೂ ಜಗದ್ಗುರು ರೇಣುಕಾಚಾರ್ಯರ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿ ಅವಮಾನಿಸಲಾಗಿದೆ. ಈ ಕುರಿತು ಹಿಂದೂ ಮುಖಂಡ ಕೃಷ್ಣ ಗೋಣೆ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು
- ಕನ್ನೇರಿ ಶ್ರೀಗಳ ಸಮಾವೇಶಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಶ್ರೀರಾಮನಿಗೆ ಫೇಸ್‌ಬುಕ್‌ನಲ್ಲಿ ಅವಮಾನ.
- 'ಬಸವಪರ ಸಂಘಟನೆಗಳ ಒಕ್ಕೂಟ' ಹೆಸರಿನ ಖಾತೆಯಿಂದ ಪ್ರಚೋದನಕಾರಿ ಪೋಸ್ಟ್ ಹಾಕಲಾಗಿದೆ.
- ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಸವಕಲ್ಯಾಣ ಪೊಲೀಸ್ ಠಾಣೆಗೆ ದೂರು ದಾಖಲು.
ಬೀದರ್, ಜೂನ್ 27: ಜಿಲ್ಲೆಯ ಬಸವಕಲ್ಯಾಣದಲ್ಲಿ (Basavakalyan) ಕನ್ನೇರಿ ಶ್ರೀಗಳ ನೇತೃತ್ವದ ಬೃಹತ್ ಸಮಾವೇಶಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಪ್ರಭು ಶ್ರೀರಾಮನಿಗೆ ಅವಮಾನಿಸಿ ವಿಕೃತಿ ಮೆರೆದಿದ್ದಾರೆ. ಫೇಸ್‌ಬುಕ್‌ನಲ್ಲಿ ಶ್ರೀರಾಮ ಹಾಗೂ ಜಗದ್ಗುರು ರೇಣುಕಾಚಾರ್ಯರ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಬಸವಕಲ್ಯಾಣದಲ್ಲಿ ಭುಗಿಲೆದ್ದ ಆಕ್ರೋಶ
ಬಸವಕಲ್ಯಾಣ ನಗರದ ಅಕ್ಕಮಹಾದೇವಿ ಮಹಾವಿದ್ಯಾಲಯದ ಆವರಣದಲ್ಲಿ ನಾಳೆ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಆಯೋಜನೆಗೊಂಡಿದೆ. ಈ ಸಮಾವೇಶಕ್ಕೆ ಕನ್ನೇರಿ ಶ್ರೀಗಳ ಆಗಮನಕ್ಕೆ ಅನುಮತಿ ಲಭ್ಯವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಲಾಗಿದೆ. ‘ಬಸವಪರ ಸಂಘಟನೆಗಳ ಒಕ್ಕೂಟ’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಶ್ರೀರಾಮ ಹಾಗೂ ರೇಣುಕಾಚಾರ್ಯರನ್ನು ‘ತಾಲಿಬಾನಿಗಳು’ ಎಂದು ನಿಂದಿಸಿ ಅತ್ಯಂತ ಕೀಳುಮಟ್ಟದ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಲಾಗಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉದ್ದೇಶಪೂರ್ವಕವಾಗಿ ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡಲು ಈ ಹುನ್ನಾರ ನಡೆಸಲಾಗಿದೆ ಎಂದು ಭಕ್ತರು ಆಪಾದಿಸಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಮುಖಂಡರ ಆಗ್ರಹ
ಶ್ರೀರಾಮನಿಗೆ ಅವಮಾನಿಸಿರುವ ಫೇಸ್‌ಬುಕ್ ಖಾತೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಮುಖಂಡ ಕೃಷ್ಣ ಗೋಣೆ ಅವರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಜಗದ್ಗುರು ಬಸವಣ್ಣನವರ ಪವಿತ್ರ ಹೆಸರನ್ನು ದುರುಪಯೋಗಪಡಿಸಿಕೊಂಡು ಹಿಂದೂ ದೇವರುಗಳಿಗೆ ಹಾಗೂ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಮಾವೇಶದ ಹೊತ್ತಿನಲ್ಲಿ ಇಂತಹ ಪ್ರಚೋದನಕಾರಿ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಸದ್ಯ ದೂರು ಸ್ವೀಕರಿಸಿರುವ ಬಸವಕಲ್ಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ ಗದಗ ಮಠದಲ್ಲಿ ಹೈಡ್ರಾಮಾ: ಶ್ರೀಗಳ ಜೀವ ಬೆದರಿಕೆ ಆರೋಪಕ್ಕೆ ಟ್ರಸ್ಟಿಗಳ ಬಿಗ್ ಟ್ವಿಸ್ಟ್!
ಬಸವಕಲ್ಯಾಣದಲ್ಲಿ ನಾಳೆ ಬೃಹತ್ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಯಾವುದೇ ಪ್ರಚೋದನಕಾರಿ ಪೋಸ್ಟ್‌ಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕಾಗಿ ವಿನಂತಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




