ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯ: ನಾಳೆ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ​​​; ಸಾಮೂಹಿಕ ರಾಜೀನಾಮೆಗೆ ನಿರ್ಧಾರ

108 ಆ್ಯಂಬುಲೆನ್ಸ್ ನೌಕರರು 15 ದಿನಗಳ ಗಡುವು ಮುಗಿದರೂ ತಮ್ಮ ಬೇಡಿಕೆಗಳು ಈಡೇರದಿರುವ ಹಿನ್ನೆಲೆ ಸೇವೆ ಸ್ಥಗಿತಗೊಳಿಸಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ವಾರ್ಷಿಕ ವೇತನ ಪರಿಷ್ಕರಣೆ, ಏಕರೂಪ ವೇತನ ಹಾಗೂ ಅಪಘಾತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದರು.

ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯ: ನಾಳೆ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ​​​; ಸಾಮೂಹಿಕ ರಾಜೀನಾಮೆಗೆ ನಿರ್ಧಾರ
108 ಆ್ಯಂಬುಲೆನ್ಸ್
Image Credit source: tv9 kannada
Edited By:

Updated on: Sep 21, 2026 | 6:23 PM

ಬೆಂಗಳೂರು, ಸೆಪ್ಟೆಂಬರ್​​ 21: ವಾರ್ಷಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ವಾಹನ ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಇಂದಿಗೆ ಮುಕ್ತಾಯಗೊಂಡಿದೆ. ಗಡುವು ಮುಗಿದರೂ ಆರೋಗ್ಯ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ ನೌಕರರು ಆಕ್ರೋಶಗೊಂಡಿದ್ದು, ನಾಳೆ ರಾತ್ರಿ 8 ಗಂಟೆ ಬಳಿಕ 108 ಆ್ಯಂಬುಲೆನ್ಸ್ ಸೇವೆಯನ್ನು ಸಂಪೂರ್ಣವಾಗಿ ಬಂದ್​​ಗೆ ತೀರ್ಮಾನಿಸಿದ್ದಾರೆ.

ಸಾಮೂಹಿಕವಾಗಿ ರಾಜೀನಾಮೆ 

ಒಂದು ವೇಳೆ ನಾಳೆ ಸಂಜೆಯೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೇವೆ ಸ್ಥಗಿತಗೊಳಿಸುವುದರ ಜೊತೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೋರಾಟ ತೀವ್ರಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಯಲ್ಲಿ ಏರುಪೇರಾಗಿ, ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗುವ ಸಾಧ್ಯತೆ ಎದುರಾಗಿದೆ.

ಆರೋಗ್ಯ ಇಲಾಖೆ ವಿರುದ್ಧ ಸಮರ: ತುರ್ತು ಮಧ್ಯಪ್ರವೇಶಕ್ಕೆ ಆಗ್ರಹ

ಸದ್ಯ ಆರೋಗ್ಯ ಇಲಾಖೆಯ ವಿರುದ್ಧ 108 ಆ್ಯಂಬುಲೆನ್ಸ್ ನೌಕರರು ಸಮರ ಸಾರಿದ್ದಾರೆ. ಸಾಮೂಹಿಕ ರಾಜೀನಾಮೆಗೆ ಸಿದ್ಧತೆ ನಡೆಸಿರುವ ನೌಕರರು, ಸೇವೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ. ನಾಳೆ ರಾತ್ರಿಯಿಂದಲೇ ಆ್ಯಂಬುಲೆನ್ಸ್ ಸೇವೆ ಬಂದ್ ಆಗುವ ಸಾಧ್ಯತೆಯಿರುವುದರಿಂದ ರಾಜ್ಯಾದ್ಯಂತ ರೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.

108 ಆ್ಯಂಬುಲೆನ್ಸ್ ನೌಕರರ ಪ್ರಮುಖ ಬೇಡಿಕೆಗಳು

  • ಪ್ರತಿ ವರ್ಷ ವಾರ್ಷಿಕ ವೇತನ ಹೆಚ್ಚಳದೊಂದಿಗೆ ವೇತನ ಪರಿಷ್ಕರಣೆ ಮಾಡಬೇಕು.
  • ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಾಹನಗಳ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
  • ವಲಯವಾರು ವೇತನ ನಿಗದಿ ವ್ಯವಸ್ಥೆಯನ್ನು ರದ್ದುಪಡಿಸಿ, ಎಲ್ಲರಿಗೂ ಏಕರೂಪ ವೇತನ ಜಾರಿಗೊಳಿಸಬೇಕು.
  • ಜೇಷ್ಠತೆಯ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿಪಡಿಸಬೇಕು.
  • ಕಾರ್ಮಿಕ ಇಲಾಖೆಯ ನಿಯಮಾವಳಿ ಪ್ರಕಾರ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕು.

ಇದನ್ನೂ ಓದಿ: 108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಖಡಕ್ ಎಚ್ಚರಿಕೆ ಸಂದೆಶ ರವಾನಿಸಿದ ಸಚಿವ ಖಾದರ್

  • ಕರ್ತವ್ಯದ ವೇಳೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡಬೇಕು.
  • ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಒದಗಿಸಬೇಕು.
  • ಕರ್ತವ್ಯದ ಶಿಫ್ಟ್ ಸಮಯವನ್ನು ಬದಲಾವಣೆ ಮಾಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:12 pm, Mon, 21 September 26

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us