AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸವಣ್ಣನವರ ಪಠ್ಯ ವಿವಾದದ ಬಳಿಕ ಅಂಬೇಡ್ಕರ್ ಪಠ್ಯ ವಿವಾದ: ಸಂವಿಧಾನ ಶಿಲ್ಪಿ ಬಿರುದನ್ನ ಪಠ್ಯದಿಂದ ತೆಗೆದ ರೋಹಿತ್ ಚಕ್ರತೀರ್ಥ ಸಮಿತಿ

ಬಸವಣ್ಣನವರ ಪಠ್ಯ ವಿವಾದದ ಬಳಿಕ ಅಂಬೇಡ್ಕರ್ ಪಠ್ಯ ವಿವಾದ ಶುರುವಾಗಿದ್ದು, ಅಂಬೇಡ್ಕರ್​ಗಿದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನ ರೋಹಿತ್ ಚಕ್ರತೀರ್ಥ ಸಮಿತಿ ಕೈಬಿಟ್ಟಿದ್ದಕೆ ಎಲ್ಲೆಡೆ ಆಕ್ರೋಶ ಉಂಟಾಗಿದೆ.

ಬಸವಣ್ಣನವರ ಪಠ್ಯ ವಿವಾದದ ಬಳಿಕ ಅಂಬೇಡ್ಕರ್ ಪಠ್ಯ ವಿವಾದ: ಸಂವಿಧಾನ ಶಿಲ್ಪಿ ಬಿರುದನ್ನ ಪಠ್ಯದಿಂದ ತೆಗೆದ ರೋಹಿತ್ ಚಕ್ರತೀರ್ಥ ಸಮಿತಿ
ಅಂಬೇಡ್ಕರ್ ಪಠ್ಯ ವಿವಾದ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 05, 2022 | 7:45 AM

Share

ಬೆಂಗಳೂರು: ಪಠ್ಯಪುಸ್ತಕ ‌ಪರಿಷ್ಕರಣೆ ವಿವಾದ ಇನ್ನೂ ಮುಗಿಯುತ್ತಿಲ್ಲ. ಒಂದಲ್ಲ ಒಂದು ವಿವಾದಳು ಹುಟ್ಟಿಕೊಳ್ಳುತ್ತಿವೆ. ಬಸವಣ್ಣನವರ ವಿವಾದದ ಬಳಿಕ ಈಗ ಅಂಬೇಡ್ಕರ್ ವಿವಾದ ಭುಗಿಲೆದ್ದಿದೆ. ಎಲ್ಲಾ ತಣ್ಣಗಾಯ್ತು ಎಂದು ಕೊಂಡಿದ್ದ ಶಿಕ್ಷಣ ಇಲಾಖೆಗೆ ಮತ್ತೆ ತಲೆ ಬಿಸಿ ಉಂಟಾಗಿದೆ. ವಿವಾದ ಮುಗೀತು ಎಂದು ನಿಟ್ಟುಸಿರು ಬಿಟ್ಟ ಸಿಎಂ ಬೊಮ್ಮಾಯಿ ಅವರಿಗೆ ಮತ್ತೆ ಟೆನ್ಶನ್ ಶುರುವಾಗಿದೆ. ಸರ್ಕಾರವನ್ನ ಪಠ್ಯ ಪರಿಷ್ಕರಣೆ ವಿವಾದ ಬಿಟ್ಟೂ ಬಿಡದೇ ಕಾಡುತ್ತಿರೋದಂತೂ ಸತ್ಯ. ರೋಹಿತ್ ‌ಚಕ್ರತೀರ್ಥ ನೇತೃತ್ವದ ಪರಿಷ್ಕರಣೆ ವೇಳೆ ಮಹಾಪ್ರಮಾದ ಉಂಟಾಗಿದ್ದು, ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಇದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೇ ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದ ಪದವನ್ನ ಕೈಬಿಟ್ಟು ಪರಿಷ್ಕೃತ ಪಠ್ಯ ವಿವಾದಕ್ಕೆ ಕಾರಣವಾಗಿದೆ. 9ನೇ ತರಗತಿಯ ನಮ್ಮ ಸಂವಿಧಾನ ಪಠ್ಯದಲ್ಲಿ ಪರಿಷ್ಕರಣೆ ಆಗಿದ್ದು, ಪರಿಷ್ಕೃತ ಪಠ್ಯದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬ ಅಂಶವನ್ನೇ ಸಮಿತಿ ಕೈಬಿಟ್ಟಿದೆ.

ಇದನ್ನೂ ಓದಿ; Blood Sugar Level: ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದರೆ ಏನೆಲ್ಲಾ ತೊಂದರೆಯಾಗಬಹುದು?

ನಮ್ಮ ಸಂವಿಧಾನ ಪಠ್ಯದಲ್ಲಿ ಕರಡು ರಚನಾ ಸಮಿತಿ ಬಗ್ಗೆ ಮಾಹಿತಿ ನೀಡುವ ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ್ದ ಕೊಡುಗೆಯನ್ನ ಆದರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ ಎಂಬ ಅಂಶ ಇತ್ತು. ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಪದ ಇತ್ತು. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ಸಂವಿಧಾನ ಶಿಲ್ಪಿ ಪದವನ್ನೇ ಕೈಬಿಟ್ಟಿದೆ. ಇದರ ಜೊತೆ ಸಂವಿಧಾನ ಕರಡು ಸಮಿತಿ ತನ್ನ ಕಾರ್ಯ ಮುಗಿಸಲು 2 ವರ್ಷ 11 ತಿಂಗಳು 18 ದಿನಗಳನ್ನ ತೆಗೆದುಕೊಂಡಿತ್ತು ಎಂಬ ವಿವರ ಇತ್ತು. ಇದನ್ನೂ ಕೂಡ ರೋಹಿತ್ ಸಮಿತಿ 145 ದಿನ ಸಭೆ ಸೇರಿತ್ತು ಎಂಬ ಅಂಶವನ್ನ ಮಾತ್ರ ಉಲ್ಲೇಖಿಸಿದೆ. ಅನೇಕರು ಇದು ಅಂಬೇಡ್ಕರ್ ಅವಹೇಳನ ಎಂದು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್​ಗೆ ಅವಹೇಳನ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲೇನಿತ್ತು..? ಕರಡು ರಚನಾ ಸಮಿತಿ, ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್‌ರವರು ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್. ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್‌ ಸಾದುಲ್ಲಾ, ಸಿ. ಮಾಧವರಾವ್‌ ಅವರು ಸದಸ್ಯರಾಗಿದ್ದರು.

ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯದಲ್ಲೇನಿದೆ..? ಕರಡು ರಚನಾ ಸಮಿತಿ ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಅನೇಕ ಸಮಿತಿಗಳನ್ನು ರಚಿಸಿತು. ಅವುಗಳಲ್ಲಿ ಮುಖ್ಯವಾದುದು ಕರಡು ಸಮಿತಿ, ಡಾ. ಬಿ.ಆರ್.ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಟಿ.ಟಿ. ಕೃಷ್ಣಮಾಚಾರಿ ಮುಂತಾದ ಮುತ್ಸದ್ಧಿಗಳು ಸದಸ್ಯರುಗಳಾಗಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.