ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ ಕೃತ್ಯ

ಕರ್ನಾಟಕದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನೇಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ, ಫೇಸ್​​ಬುಕ್ ವಿಡಿಯೋ ಮಾಡಿಟ್ಟು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು, ಹಲವರ ಮೇಲೆ ವಂಚನೆ ಮತ್ತು ಹಲ್ಲೆ ಆರೋಪ ಹೊರಿಸಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ಹಾಗೂ ಕೌನ್ಸಿಲರ್ ಭಾಗ್ಯಮ್ಮ ಮತ್ತು ಶ್ರೀನಿವಾಸ್ ವಿರುದ್ಧವೂ ಆರೋಪ ಮಾಡಲಾಗಿದೆ.

ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ ಕೃತ್ಯ
ಪ್ರವೀಣ್ ಗೌಡ
Edited By:

Updated on: Apr 18, 2025 | 9:33 AM

ಅನೇಕಲ್, ಏಪ್ರಿಲ್ 18: ಬೆಂಗಳೂರಿನ ನಾಗವಾರದಲ್ಲಿ ಬಿಜೆಪಿ ಕಾರ್ಯಕರ್ತ (BJP Worker) ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ನೆನಪು ಹಸಿಯಾಗಿರುವಾಗಲೇ ಬೆಂಗಳೂರು ನಗರ ಜಿಲ್ಲೆ ಆನೇಕಲ್ (Anekal) ಪಟ್ಟಣದ ಎಸ್.ವಿ.ಎಂ ಸ್ಕೂಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೇಸ್​​ಬುಕ್ ವಿಡಿಯೋ ಮಾಡಿ ಹಲವರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು, ಆ ನಂತರ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಇವರೇ ಕಾರಣ ಎಂದು ಹಲವರನ್ನು ಹೆಸರಿಸಿರುವ ಅವರು, ಆ ಪೈಕಿ ಕಿರಣ್ ಎಂಬಾತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪ್ರವೀಣ್ ಗೌಡ ಫೇಸ್​ಬುಕ್ ವಿಡಿಯೋದಲ್ಲೇನಿದೆ?

ಸಮಂದೂರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ್​​, ಭಾಸ್ಕರ್, ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ, ಸರವಣ ಇವರೇ ನನ್ನ ಸಾವಿಗೆ ಕಾರಣ. ಯಾರನ್ನು ಬಿಟ್ಟರೂ ಕಿರಣ್​​​​​ನನ್ನು ದಯವಿಟ್ಟು ಬಿಡಬೇಡಿ. ಕಿರಣ್ ಹಲವು ಹೆಣ್ಣು ಮಕ್ಕಳಿಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದಾನೆ. ಕಿರಣ್​​ ಮಾಡಿರುವ ಇಂತಹ ಕೆಲಸಗಳೆಲ್ಲಾ ನನ್ನ ಮೇಲೆ ಬಂದಿವೆ. ಹಣದ ವಿಚಾರವಾಗಿ ಮಾತುಕತೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಫೇಸ್​​ಬುಕ್ ವಿಡಿಯೋದಲ್ಲಿ ಪ್ರವೀಣ್ ಗೌಡ ಆರೋಪಿಸಿದ್ದಾರೆ.

ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ವಿರುದ್ಧವೂ ಆರೋಪ ಮಾಡಲಾಗಿದೆ. ಬಿಜೆಪಿ ಮುಖಂಡ ನಾಯನಹಳ್ಳಿ ಮುನಿರಾಜು ಮನೆಗೆ ಕರೆದಿದ್ದರು. ಆ ಸಂದರ್ಭದಲ್ಲಿ ಆನೇಕಲ್ ಕೌನ್ಸಿಲರ್ ಭಾಗ್ಯಮ್ಮ ಹಾಗೂ ಆಕೆಯ ಪತಿ ಶ್ರೀನಿವಾಸ್ ಇದ್ದರು. ಏಕಾಏಕಿ ಹತ್ತಾರು ಮಂದಿಯನ್ನು ಕರೆಸಿಕೊಂಡಿದ್ದ ಭಾಗ್ಯಮ್ಮ ಶ್ರೀನಿವಾಸ್, ಮೊಬೈಲ್ ಕಿತ್ತುಕೊಂಡು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮನಸೋ ಇಚ್ಛೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಪ್ರವೀಣ್ ಆರೋಪಿಸಿದ್ದಾರೆ.

ಇದನ್ನೂ ಓದಿ
ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಕೋಲಾಹಲ: ಇಲ್ಲಿದೆ ಇನ್​ಸೈಡ್ ಡಿಟೇಲ್ಸ್
ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್​: ಲಾರಿ ಮಾಲೀಕರ ಮುಷ್ಕರ ವಾಪಸ್​
ಬಿಜೆಪಿ ವಿನಯ್ ಆತ್ಮಹತ್ಯೆ ಕೇಸ್​: ಸಿಎಂ ಕಾನೂನು ಸಲಹೆಗಾರರ ವಿರುದ್ಧ ದೂರು
ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಕಾಂಗ್ರೆಸ್ ಶಾಸಕರ ವಿರುದ್ಧ ಗಂಭೀರ ಆರೋಪ

‘‘ನಾನು ಸತ್ತ ಮೇಲೆ ನನ್ನ ದೇಹದ ಮೇಲಿರುವ ಗಾಯದ ಗುರುತುಗಳನ್ನು ಪರಿಶೀಲಿಸಿ. ಪೊಲೀಸರು ನನಗೆ ನ್ಯಾಯ ಕೊಡಿಸಬೇಕು’’ ಎಂದು ಪ್ರವೀಣ್ ಮನವಿ ಮಾಡಿದ್ದಾನೆ. ಗುರುವಾರ ರಾತ್ರಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ವಿನಯ್ ಆತ್ಮಹತ್ಯೆ ಕೇಸ್​: ಭುಗಿಲೆದ್ದ ಆಕ್ರೋಶ, ಸಿಎಂ ಕಾನೂನು ಸಲಹೆಗಾರರ ವಿರುದ್ಧ ದೂರು

ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಮಂತರ್ ಗೌಡ ಎಂಬವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ಬಿಜೆಪಿ ನಾಯಕರಿಂದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಅದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಸಾವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ