ಬಿಜೆಪಿ ವಿನಯ್ ಆತ್ಮಹತ್ಯೆ ಕೇಸ್: ಭುಗಿಲೆದ್ದ ಆಕ್ರೋಶ, ಸಿಎಂ ಕಾನೂನು ಸಲಹೆಗಾರರ ವಿರುದ್ಧ ದೂರು
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಆತ್ಮಹತ್ಯೆಗೂ ಮುನ್ನ ವಿನಯ್ ಸೋಮಯ್ಯ ಅವರು ಬರೆದಿಟ್ಟ ಡೆಟ್ನೋಟ್ನಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರ ಹೆಸರಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಇನ್ನು, ವಿನಯ ಸೋಮಯ್ಯ ಅವರ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರು, ಏಪ್ರಿಲ್ 04: ಬಿಜೆಪಿ (BJP) ಕಾರ್ಯಕರ್ತ ವಿನಯ್ ಸೋಮಯ್ಯ (Vinay Somayya) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ವಕ್ತಾರ ತೆನ್ನೀರ ಮಹಿನಾ, ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಂತರ್ ಗೌಡ ವಿರುದ್ಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಾಗಿದೆ. ವಿನಯ್ ಸೋಮಯ್ಯ ಸಹೋದರ ಜೀವನ್ ಅವರು “ನನ್ನ ಸಹೋದರನಿಗೆ ಕಿರುಕುಳ ನೀಡಿದ್ದಾರೆ” ಎಂದು ಪೊಲೀಸರಿಗೆ 6 ಪುಟಗಳ ದೂರನ್ನು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 108, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ತೆನ್ನೀರಾ ಮಹಿನಾ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ, ಈ ಎಫ್ಐಆರ್ನಲ್ಲಿ ಇಬ್ಬರು ಶಾಸಕರ ಹೆಸರಿಲ್ಲ.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ: ಅಶೋಕ್
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ್ ಆರ್ ಅಶೋಕ್ ಮಾತನಾಡಿ, ಈ ಘಟನೆಯಿಂದ ನಿಜಕ್ಕೂ ಕಾರ್ಯಕರ್ತರಿಗೆ ನೋವು ತಂದಿದೆ. ವಿನಯ್ ಒಳ್ಳೆಯ ವಿದ್ಯಾವಂತ, ಪತ್ನಿ ಸಾಫ್ಟ್‌ವೇರ್ ಇಂಜಿನಿಯರ್. 2-3 ತಿಂಗಳಿಂದ ಎಸ್ಪಿ ಮೂಲಕ ‘ಕೈ’ ಶಾಸಕರು, ತನ್ನೀರ ಕಿರುಕುಳ ನೀಡಿದ್ದಾರೆ. ಶಾಸಕ ಧಮ್ಕಿ ಹಾಕಿದ್ದನ್ನು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ವಿನಯ್ ಮಡಿಕೇರಿ ಬಿಟ್ಟು ಬೆಂಗಳೂರಿನ ಮನೆಗೆ ಬಂದರೂ ಪೊಲೀಸರು ಕಿರುಕುಳ ಕೊಟ್ಟಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲಿಷರನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳುತ್ತಿದ್ದಾರೆ. ಸಿಎಂ ಪದಕ ಲಭಿಸಿದ ಪೊಲೀಸ್ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ವಿನಯ್ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು. ಕೊಡಗು ಎಸ್ಪಿ ಅಮಾನತು ಆಗಬೇಕು. ನಾಳೆ ನಮ್ಮ ಹೋರಾಟದ ಬಗ್ಗೆ ತೀರ್ಮಾನ ಪಡೆಯುತ್ತೇವೆ. ತೆನ್ನೀರಾ, ಪೊನ್ನಣ್ಣ, ಮಂತರ್ ಗೌಡ ವಿರುದ್ಧ ದೂರು ನೀಡಿದ್ದೇವೆ ಎಂದು ಹೇಳಿದರು.
ಇನ್ನು, ಮೃತ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಮಡಿಕೇರಿಯಲ್ಲಿನ ಮನೆಗೆ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಸಿಎಂ ಕಾನೂನು ಸಲಹೆಗಾರರ ವಿರುದ್ಧ ಗಂಭೀರ ಆರೋಪ
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆಗೆ ಕಾರಣವಾದವರನ್ನು ಬಂಧಿಸುವಂತೆ ಮಡಿಕೇರಿಯ ಜ.ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್ ಗೌಡ ಮತ್ತು ಕಾಂಗ್ರೆಸ್ ವಕ್ತಾರ ತೆನ್ನೀರಾ ಮಹಿನಾ ಬಂಧಿಸಿವಂತೆ ಆಗ್ರಹಸಿದರು. ಅಲ್ಲದೇ, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ವಿರುದ್ಧವೂ ಧಿಕ್ಕಾರ ಕೂಗಿದರು. ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್ ಗೌಡ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ವಿಚಾರ ತಿಳಿದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಎಸ್ ರಾಮರಾಜನ್ ಬಿಜೆಪಿ ಕಾರ್ಯಕರ್ತರ ಮನವೊಲಿಸಿದರು. ಎಸ್ಪಿ ಮನವೊಲಿಕೆ ಬಳಿಕ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Fri, 4 April 25