ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಿ: ಕೇಂದ್ರ ಜಲಶಕ್ತಿ ಸಚಿವರಿಗೆ ಸಿದ್ದರಾಮಯ್ಯ ಮನವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಕರ್ನಾಟಕದ ಕೃಷಿಗೆ ನೀರಾವರಿ ಅತ್ಯಗತ್ಯವಾಗಿರುವುದರಿಂದ ಈ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಜೊತೆಗೆ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ವಿಚಾರವಾಗಿ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಪತ್ರ ಬರೆದಿದ್ದಾರೆ.

ಬೆಂಗಳೂರು, ಏಪ್ರಿಲ್ 04: ಮೇಕೆದಾಟು (mekedatu), ಭದ್ರಾ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಿ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯದ ನೀರಾವರಿ ಯೋಜನೆ, ವಿಷಯಗಳಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಕೇಂದ್ರದ ಗಮನ ಸೆಳೆದಿದ್ದಾರೆ. ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿಯಿರುವ ಕರ್ನಾಟಕದ ಮೇಕೆದಾಟು ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನದ ಕುರಿತು ವೈಯಕ್ತಿಕವಾಗಿ ಗಮನ ಹರಿಸುವಂತೆ ಸಚಿವ ಸಿ.ಆರ್.ಪಾಟೀಲ್ರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ದೇಶದಲ್ಲೇ ರಾಜಸ್ಥಾನವನ್ನು ಹೊರತುಪಡಿಸಿದರೆ ಕರ್ನಾಟಕ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳಿಸಲಾಗಿರುವ ನೀರಾವರಿ ಯೋಜನೆಗಳು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿವೆ. ಉತ್ಪಾದನೆಯಲ್ಲಿನ ಹೆಚ್ಚಳ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನೀರಿನ ನಿರ್ವಹಣೆಯಲ್ಲಿ ಸುಧಾರಣೆ, ಹವಾಮಾನ ವೈಪರೀತ್ಯದ ನಿರ್ವಹಣೆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ಕೃಷಿ ಉತ್ಪಾದನೆ ಹೆಚ್ಚಳ, ರೈತರ ಆದಾಯ ಹೆಚ್ಚಳ ಮಾಡಲು ಪೂರಕವಾಗಿ ನಿರಂತರ ಮತ್ತು ಸಮರ್ಪಕ ನೀರಾವರಿ ಪೂರೈಕೆಗೆ ಬದ್ಧವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Lorry Strike: ಮುಂದಿನ ವಾರ ಲಾರಿ ಮುಷ್ಕರ ಬಹುತೇಕ ಫಿಕ್ಸ್, ಡೀಸೆಲ್ ದರ ಏರಿಕೆಗೆ ಲಾರಿ ಮಾಲೀಕರ ಆಕ್ರೋಶ
ಕರ್ನಾಟಕ ರಾಜ್ಯದ ಬಾಕಿಯಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ, ಪ್ರಸ್ತಾವನೆಗಳಿಗೆ ಅನುಮತಿ, ಕ್ಲಿಯರೆನ್ಸ್ ನೀಡಲು ಜಲಶಕ್ತಿ ಸಚಿವಾಲಯಕ್ಕೆ ತಾವು ನಿರ್ದೇಶನ ನೀಡಬೇಕು. ಈ ಯೋಜನೆಗಳು ರಾಜ್ಯದ ನೀರಾವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆ ಮೂಲಕ ರೈತರ ಕಲ್ಯಾಣಕ್ಕೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ: ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಸಿಎಂ ಪತ್ರ
ಇನ್ನು ಇದೇ ರೀತಿಯಾಗಿ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಕುರಿತು ನಾಗರಿಕ ಕೇಂದ್ರ ವಿಮಾನ ಯಾನ ಸಚಿವ ಕಿಂಜರಾಪು ರಾಮಮೋಹನ ನಾಯ್ಡುಗೂ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ರಾಜ್ಯ ಸರ್ಕಾರವು ದಿನಾಂಕ 6-10-2005 ರಂದು ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ನಿಯಮ ಬಿ (2) (v) ಪ್ರಕಾರ ಕಾರ್ಯನಿಯೋಜಕರು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಅಗತ್ಯ ವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಋಣಭಾರವಿಲ್ಲದೆ ನಿಯೋಜಿತರಿಗೆ ಉಚಿತವಾಗಿ ವರ್ಗಾಯಿಸಬೇಕು.
ಅದರಂತೆ, ಅಗತ್ಯವಿರುವ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಉಚಿತವಾಗಿ ವರ್ಗಾಯಿಸಲಾಗಿದೆ. ಒಪ್ಪಂದದ ಷರತ್ತು ಬಿ 2 (VI) ಪ್ರಕಾರ, ನಿಯೋಜಿತರು ಮೈಸೂರು ವಿಮಾನ ನಿಲ್ದಾಣದ ಹೆಚ್ಚಿನ ಅಭಿವೃದ್ಧಿಯ ಬಂಡವಾಳ ವೆಚ್ಚ, ಮಾರ್ಪಾಡುಗಳು, ಬಲಪಡಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ಎಲ್ಲಾ ವೆಚ್ಚಗಳನ್ನು ಭರಿಸಬೇಕು. ಅದರಂತೆ, ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಿರುವ ಬಂಡವಾಳ ಹಾಗೂ ಇನ್ನಿತರೆ ವೆಚ್ಚಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ ಭರಿಸಬೇಕಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ಮುಖ್ಯಮಂತ್ರಿ @siddaramaiah ಅವರು ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರಿಗೆ ಸಲ್ಲಿಸಿರುವ ಬೇಡಿಕೆ ಪತ್ರದ ಕನ್ನಡ ಭಾಷಾಂತರ ರೂಪ;
ದೇಶದಲ್ಲೇ ರಾಜಸ್ಥಾನವನ್ನು ಹೊರತುಪಡಿಸಿದರೆ ಕರ್ನಾಟಕ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳಿಸಲಾಗಿರುವ ನೀರಾವರಿ… pic.twitter.com/H2FkzLGfIK
— CM of Karnataka (@CMofKarnataka) April 3, 2025
ಈ ಹಿನ್ನೆಲೆಯಲ್ಲಿ, ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಅಗತ್ಯವಿರುವ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು 319.14 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಭೂ ಸ್ವಾಧೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 2024 ರಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತವು (ಸಿ. ಎನ್.ಎನ್.ಎಲ್) ವಿಮಾನ ನಿಲ್ದಾಣ ವಿಸ್ತರಣೆ ಪ್ರದೇಶದಲ್ಲಿ ಎರಡು ಕಂದಕಗಳ ಮತ್ತು 7 ಕಾಲುವೆಗಳ ಸ್ಥಳಾಂತರಕ್ಕೆ ವರದಿಯನ್ನು ಸಲ್ಲಿಸಿದ್ದು, ಇದಕ್ಕೆ 70 ಕೋಟಿ ರೂ ವೆಚ್ಚವಾಗಲಿದೆ. ಅಂತೆಯೇ, ಕೆ.ಪಿ.ಟಿ.ಸಿಎಲ್ ಕೂಡ ಹೈ-ಟೆನ್ಷನ್ ಲೈನ್ಗಳ ಮತ್ತು ಚೆಸ್ಕಾಂ ಲೋ ಟೆನ್ಶನ್ ವೈರ್ಗಳ ಮಾರ್ಗ ಬದಲಾವಣೆಗೆ 31.82 ಕೋಟಿ ರೂ ಅಂದಾಜು ವೆಚ್ಚವಾಗಲಿದೆ ಎಂದು ತಿಳಿಸಿದ್ದು, ಒಟ್ಟಾರೆ ಸದರಿ ಕಾಮಗಾರಿಗೆ 101.82 ಕೋಟಿಗಳ ಅನುದಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ: 6 ತಿಂಗಳಲ್ಲಿ 27,000 ಪ್ರಯಾಣಿಕರಿಂದ ನಿಯಮಗಳ ಉಲ್ಲಂಘನೆ, ಆದರೂ ದಂಡ ವಿಧಿಸಿಲ್ಲವೇಕೆ ಗೊತ್ತೇ!
ರಾಜ್ಯ ಸರ್ಕಾರವು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 ಎಕರೆ ಭೂ ಸ್ವಾಧೀನಕ್ಕೆ ತಗಲುವ 319.14 ಕೋಟಿ ರೂ ವೆಚ್ಚವನ್ನು ಭರಿಸಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ವಿಸ್ತರಣೆಯ ಅಂದಾಜು ವೆಚ್ಚ 101.84 ಕೋಟಿಗಳ ಯುಟಿಲಿಟಿ ಸ್ಥಳಾಂತರದ ಯೋಜನೆಯನ್ನು ರೂಪಿಸಿ ಶ್ರೀಘ್ರವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಕೋರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.