ಬೆಂಗಳೂರಿನಲ್ಲಿ ಮತ್ತೊಂದು ನೀಚ ಕೃತ್ಯ: ಯುವತಿ ಮೈಮುಟ್ಟಿ ಕಿಡಿಗೇಡಿಯಿಂದ ಅಸಭ್ಯ ವರ್ತನೆ
ಸುದ್ದಗುಂಟೆಪಾಳ್ಯದ ಘಟನೆ ನಂತರ ಮತ್ತೊಂದು ಆತಂಕಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ 30 ರಂದು ರಾತ್ರಿ ಮಾರತ್ತಹಳ್ಳಿಯಲ್ಲಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಕಿಡಿಗೇಡಿ ಯುವತಿಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲು ಶೋಧ ನಡೆಸಿದ್ದಾರೆ.

ಬೆಂಗಳೂರು, ಮೇ 02: ನಗರದಲ್ಲಿ ಇತ್ತೀಚೆಗೆ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಯುವತಿಯ (girl) ಖಾಸಗಿ ಅಂಗವನ್ನು ಸ್ಪರ್ಶಿಸಿ ಪರಾರಿಯಾಗಿದ್ದ. ಸುದ್ದಗುಂಟೆಪಾಳ್ಯದಲ್ಲಿ ನಡೆದಿದ್ದ ಈ ಘಟನೆ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಈ ಘಟನೆ ಮಾಸುವ ಮುನ್ನವೇ ಅಷ್ಟರಲ್ಲಿ ಮತ್ತೊಂದು ನೀಚ ಕೃತ್ಯ ನಡೆದಿದೆ. ಓರ್ವ ಕಿಡಿಗೇಡಿ ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವಂತಹ ಘಟನೆ ಮಾರತ್ತಹಳ್ಳಿಯಲ್ಲಿ (Marathahalli) ನಡೆದಿದೆ. ಸದ್ಯ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 30ರ ರಾತ್ರಿ 11:30ರ ವೇಳೆಗೆ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಿಡಿಗೇಡಿ ಯುವತಿಯನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ತಹಳ್ಳಿ ಠಾಣೆ ಪೊಲೀಸರು, ಕಿಡಿಗೇಡಿಗೆ ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ.
10 ದಿನಗಳ ಬಳಿಕ ಸುದ್ದುಗುಂಟೆ ಪಾಳ್ಯ ಆರೋಪಿ ಬಂಧನ
ಇತ್ತೀಚೆಗೆ ಬೆಂಗಳೂರಿನ ಸುದ್ದುಗುಂಟೆ ಪಾಳ್ಯದಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ತಡರಾತ್ರಿ ಗೆಳತಿ ಜೊತೆ ಹೋಗುತ್ತಿದ್ದ ಯುವತಿಯ ಹಿಂದೆ ಬಂದಿದ್ದ ಓರ್ವ ಯುವಕ, ಏಕಾಏಕಿ ಆಕೆಯನ್ನ ರಸ್ತೆಯಲ್ಲೇ ಎಳೆದಾಡಿ, ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಬಳಿಕ ಕ್ಷಣ ಮಾತ್ರದಲ್ಲಿ ಎಸ್ಕೇಪ್ ಆಗಿದ್ದ. ಈ ದುಷ್ಟನಿಗಾಗಿ ಪೊಲೀಸರು, ನಾಲ್ಕು ವಿಶೇಷ ತಂಡ ರಚನೆ ಮಾಡಿ ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ಕಾಮಣ್ಣರ ಹಾವಳಿ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ಬಂಧನ
ಘಟನೆ ನಡೆದು 10 ದಿನಗಳ ಬಳಿಕ ಆರೋಪಿ ಸಂತೋಷ ಕೇರಳದಲ್ಲಿ ಲಾಕ್ ಆಗಿದ್ದ. ಈತನ ಬಂಡವಾಳ ಬಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ಕರಾಳ ಮುಖ ಕಳಚಿದೆ. ಈತನಿಗೆ ಲೇಡಿ ಹೋಮ್ಗಾರ್ಡ್ ನೆರವಾಗಿದ್ದ ಸತ್ಯವೂ ಹೊರಬಿದ್ದಿತ್ತು. ಸದ್ಯ ಆರೋಪಿಯನ್ನ ಬಂಧಿಸಿ ಬೆಂಗಳೂರಿಗೆ ಕರೆತಂದಿರುವ ಪೊಲೀಸರು, ಐದು ದಿನ ಕಸ್ಟಡಿಗೆ ಪಡೆದಿದ್ದಾರೆ.
ಅಪರಿಚಿತ ಯುವತಿ ಜೊತೆ ಅನುಚಿತ ವರ್ತನೆ: ವ್ಯಕ್ತಿ ಅರೆಸ್ಟ್
ಇನ್ನೂ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೇ ಒಂದು ಘಟನೆ ಇತ್ತೀಚೆಗೆ ನಡೆದಿತ್ತು. ಅಪರಿಚಿತ ಯುವತಿಯ ಜತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಅಂಗಡಿಯೊಂದ ಮುಂದೆ ನಿಂತಿದ್ದ ಅಪರಿಚಿತ ಯುವತಿಗೆ ಆಟೋ ಚಾಲಕ ಮಣಿ ಎಂಬಾತನಿಂದ ಫೋನ್ ನಂಬರ್ ಮತ್ತು ಸೆಲ್ಫಿ ತೆಗೆದುಕೊಳ್ಳಲು ವಿಚಾರವಾಗಿ ಕಿರುಕುಳ ನೀಡಿದ್ದ. ಬಳಿಕ ಘಟನೆಯಿಂದ ಬೇಸತ್ತ ಯುವತಿ ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಳು. ಯುವತಿ ದೂರು ಆಧರಿಸಿ ಮಣಿ ಅನ್ನು ಬಂಧಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







