
ಬೆಂಗಳೂರು, ನವೆಂಬರ್ 10: ಕರ್ನಾಟಕ ಸರ್ಕಾರದ ಆಹಾರ ಹಾಗೂ ನಾಗರಿಕ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರ ಎಥನಾಲ್ ಮಿಶ್ರಣಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯು ಜವಾಬ್ದಾರಿಯುತ ಆಡಳಿತಕ್ಕಿಂತ ದುರುದ್ದೇಶಪೂರಿತ ಹಾಗೂ ದಾರಿತಪ್ಪಿಸುವ ಸುದ್ದಿಗೆ ಆದ್ಯತೆ ನೀಡಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಪೆಟ್ರೋಲ್‌ನಲ್ಲಿ ಶೇ. 26–31ರಷ್ಟು ಎಥನಾಲ್ ಇದೆ ಎಂದು ಯಾವುದೇ ಆಧಾರವಿಲ್ಲದೆ ಹೇಳಿಕೆ ನೀಡಿ ಆತಂಕ ಸೃಷ್ಟಿಸುವ ಬದಲು, ಮೊದಲಿಗೆ ತಾವು ಅಧಿಕೃತ ತಪಾಸಣಾ ವರದಿಗಳನ್ನು ಪರಿಶೀಲಿಸಬೇಕಿತ್ತು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಲಾದ ಎಲ್ಲಾ 893 ಮಾದರಿಗಳು ನಿಗದಿಪಡಿಸಿದ ಶೇ. 19–21ರ ಮಿತಿಗೆ ಒಳಪಟ್ಟಿವೆ. ಅತ್ಯಂತ ಮುಖ್ಯವಾಗಿ, ತೈಲ ಮಾರಾಟ ಸಂಸ್ಥೆಗಳು (OMCs) ಕರ್ನಾಟಕದಲ್ಲಿ ಪರೀಕ್ಷಿಸಿದ ಎಲ್ಲಾ 56 ಮಾದರಿಗಳು ಸರಾಸರಿ ಶೇ. 19.30ರಷ್ಟು ನಿಯಮಾವಳಿಗೆ ಬದ್ಧವಾಗಿವೆ ಎಂದವರು ತಿಳಿಸಿದ್ದಾರೆ.
ಕರ್ನಾಟಕದ ಪ್ರಮಾಣಪತ್ರಗಳಲ್ಲಿ ಕೇವಲ “ಗ್ಯಾಸ್ ಕ್ರೊಮ್ಯಾಟೋಗ್ರಫಿ ಮೂಲಕ ಎಥನಾಲ್ %” ಎಂದು ಮಾತ್ರ ನಮೂದಿಸಲಾಗಿದೆ. ಅದರಲ್ಲಿ ಪರೀಕ್ಷಾ ವಿಧಾನ, ಮಾಪನಾಂಕ ನಿರ್ಣಯ , ವಿಲೀನಗೊಳಿಸುವಿಕೆಅಥವಾ ಉಲ್ಲೇಖಿತ ಮಾದರಿಯಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕರ್ನಾಟಕದಲ್ಲಿ ಶೇ. 26–31ರಷ್ಟು ಎಥನಾಲ್ ಇದೆ ಎಂದು ತೋರಿಸಿದ ಮಾದರಿಗಳ ಸಾಂದ್ರತೆಯು ಕೇವಲ 0.742–0.749 g/cc ನಷ್ಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ, E20 ಪೆಟ್ರೋಲ್ ಅನ್ನು ದೃಢೀಕರಿಸಿದ ತೈಲ ಮಾರಾಟ ಸಂಸ್ಥೆಗಳು ಪರೀಕ್ಷಿಸಿದ ಮಾದರಿಗಳು 0.752–0.760 g/cc ಯಷ್ಟು ಹೆಚ್ಚಿನ ಸಾಂದ್ರತೆಯನ್ನು ದಾಖಲಿಸಿವೆ. ಎಥನಾಲ್ ಪ್ರಮಾಣ ಶೇ. 20ಕ್ಕಿಂತ ಹೆಚ್ಚಿದ್ದರೆ ಸಾಂದ್ರತೆಯು E20 ಪೆಟ್ರೋಲ್‌ಗಿಂತ ಅತ್ಯಂತ ಹೆಚ್ಚಿರಬೇಕಿತ್ತು, ಆದರೆ ಹಾಗಾಗಿರಲಿಲ್ಲ.ಅಲ್ಲದೆ, ಈ ಮಾದರಿಗಳನ್ನು ಪರೀಕ್ಷಿಸಿದ ಯಾವುದೇ ಪ್ರಯೋಗಾಲಯಗಳು ಗೆಜೆಟ್‌ನಲ್ಲಿ ಅಧಿಸೂಚಿಸಲಾದ ‘ಶೆಡ್ಯೂಲ್ 3’ ಅನುಮೋದಿತ ಪ್ರಯೋಗಾಲಯಗಳ ಪಟ್ಟಿಯಲ್ಲಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ಗೆ ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಆರೋಪ: ಕೇಂದ್ರದ ಮೌನ ಪ್ರಶ್ನಿಸಿದ ಸಚಿವ ರಿಜ್ವಾನ್ ಅರ್ಷದ್
ಮಾದರಿ ಸಂಗ್ರಹಣೆ ಪ್ರಕ್ರಿಯೆ, ಕಾಯ್ದಿರಿಸಿದ ಮಾದರಿಗಳು ಮತ್ತು ಪ್ರಯೋಗಾಲಯದ ಪ್ರಮಾಣೀಕರಣದಲ್ಲಿರುವ ಈ ಕೊರತೆಗಳು ಪರೀಕ್ಷೆಯ ನಂಬಿಕಾರ್ಹತೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಆದರೆ, ಕರ್ನಾಟಕ ಸರ್ಕಾರ ಉತ್ತರಿಸಬೇಕಾದ ಇದಕ್ಕಿಂತಲೂ ದೊಡ್ಡ ಪ್ರಶ್ನೆಯೊಂದಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತಾನೇ ಆರಂಭಿಸಿದ್ದ ಎಥನಾಲ್ ಕಾರ್ಯಕ್ರಮವನ್ನು ಈಗ ವಿರೋಧಿಸುತ್ತಿದೆಯೇ? ವಾಸ್ತವವಾಗಿ 2005ರಲ್ಲಿ, ಅಂದಿನ ಪೆಟ್ರೋಲಿಯಂ ಸಚಿವರಾಗಿದ್ದ ಮಣಿ ಶಂಕರ್ ಅಯ್ಯರ್ ಅವರು ಎಥನಾಲ್ ಲಭ್ಯತೆ ಹೆಚ್ಚಿದರೆ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಎಂದವರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:13 am, Tue, 10 November 26