
ಬೆಂಗಳೂರು, ಏಪ್ರಿಲ್ 14: ಬೇಸಿಗೆಯ ತಾಪಮಾನ, ವೈಟ್ ಟಾಪಿಂಗ್ ಸೇರಿದಂತೆ ಹಲವು ಕಾಮಗಾರಿಗಳಿಂದಾಗಿ (BBMP Works) ಬೆಂಗಳೂರಿನ (Bengaluru) ಬಹುತೇಕ ರಸ್ತೆಗಳು ಧೂಳಿನಿಂದ ಹದಗೆಡುತ್ತಿವೆ. ವಾಯುಮಾಲಿನ್ಯದಿಂದ (Air Pollution) ಸಾರ್ವಜನಿಕರಿಗೆ ಅನಾರೋಗ್ಯದ ಭೀತಿ ಎದುರಾಗಿದೆ. ರಾಜಾಜಿನಗರ, ನಂದಿನಿ ಲೇಔಟ್, ಬಸವೇಶ್ವರ ನಗರದ ಪ್ರಮುಖ ರಸ್ತೆಗಳು ಧೂಳಿನಿಂದ ಕೂಡಿದ್ದು, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಅನಾರೋಗ್ಯದ ಭೀತಿಯಲ್ಲಿ ಮಾಸ್ಕ್ ಧಿರಸಿಕೊಂಡೇ ಸಂಚರಿಸುತ್ತಿದ್ದಾರೆ. ಸದ್ಯ ಸಿಲಿಕಾನ್ ಸಿಟಿ ಅಲರ್ಜಿಕ್ ಸಿಟಿಯಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಹೆಚ್ಚಾಗುತ್ತಿದ್ದ ಅಲರ್ಜಿ ಸಮಸ್ಯೆಗಳು ಈಗ ಬೇಸಿಗೆಯಲ್ಲಿಯೇ ಶುರುವಾಗಿವೆ.
ರಾಜಧಾನಿಯಲ್ಲಿ ಹೆಚ್ಚಾಗಿರುವ ಧೂಳು ಹಾಗೂ ಹವಾಮಾನ ಬದಲಾವಣೆಯಿಂದ ನೆಗಡಿ ಮತ್ತು ಕೆಮ್ಮಿನ ಜೊತೆಗೆ ಅಲರ್ಜಿ ಬೆಂಬಿಡದೇ ಕಾಡುತ್ತಿದೆ. ಬೆಂಗಳೂರಿನ ಬಹುತೇಕ ಕಡೆ ರಸ್ತೆ ಅಗೆದು ತಿಂಗಳುಗಟ್ಟಲೆ ಹಾಗೇ ಬಿಟ್ಟಿರುವುದರಿಂದ ಧೂಳು ಹೆಚ್ಚಾಗಿದೆ. ಜೊತೆಗೆ ಬದಲಾಗುತ್ತಿರುವ ಹವಮಾನ ಕೂಡ ಕೊಡುಗೆ ನೀಡುತ್ತಿದೆ. ಧೂಳಿನ ಪ್ರಮಾಣ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ಅಲರ್ಜಿ ಪ್ರಕರಣಗಳು ಹೆಚ್ಚಾಗಿವೆ. ಅರ್ಲಜಿ ಕೆಮ್ಮು, ನೆಗಡಿ ಎಂದು ಸರ್ಕಾರಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ.
ಸೀನು, ಕೆಮ್ಮು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳ
ಜ್ವರ, ನೆಗಡಿ ಮತ್ತು ಕೆಮ್ಮಿನ ಜೊತೆಗೆ ಜನರನ್ನು ಅಲರ್ಜಿಯೂ ಕಾಡುತ್ತಿದೆ. ಆಸ್ಪತ್ರೆಗಳಿಗೆ ಬರುವ ಬಹುತೇಕ ಮಕ್ಕಳಲ್ಲಿಯೂ ಈ ಸಮಸ್ಯೆ ಕಂಡು ಬರುತ್ತಿದೆ. ಬೇಸಿಗೆ ಜೊತೆಗೆ ಮಳೆ ಕಾಟ ಇರುವುದರಿಂದ ಅಲರ್ಜಿ ಹೆಚ್ಚಾಗುತ್ತಿದ್ದು ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ನಿಗಾವಹಿಸಬೇಕು ಎಂದು ಕೆಸಿ ಜನರಲ್ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಡಾ ಶುಭಾ ಸಲಹೆ ನೀಡಿದ್ದಾರೆ.
ಧೂಳಿನಿಂದ ಕೆಮ್ಮು, ಕಣ್ಣು ಉರಿ, ಅಸ್ತಮಾ, ಉಸಿರಾಟ, ಚರ್ಮರೋಗ, ಶ್ವಾಸಕೋಶ ತೊಂದರೆ, ಮಕ್ಕಳಿಗೆ ಉಸಿರಾಟದ ಸಮಸ್ಯೆ ಕಂಡು ಬರುತ್ತಿವೆ. ರಾಜಾಜಿನಗರ, ಮಲ್ಲೇಶ್ವರಂ ಹಾಗೂ ಬಶವೇಶ್ವರನಗರದ ಪ್ರಮುಖ ರಸ್ತೆಗಳು ಹಳ್ಳ ಹಿಡದಿದ್ದು, ಧೂಳುಮಯವಾಗಿವೆ. ಜಲಮಂಡಳಿ, ಬಿಬಿಎಂಪಿ ಹಾಗೂ ಬೆಸ್ಕಾಂ ಒಂದೇ ಸಮುದಲ್ಲಿ ಎಲ್ಲಡೆ ನಡೆಸುತ್ತಿರುವ ಕಾಮಗಾರಿಯೇ ಇದಕ್ಕೆಲ್ಲ ಕಾರಣ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಯಾದಗಿರಿ: ತಾಪಮಾನ ಏರಿಕೆ ಪರಿಣಾಮ ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು, ಆರೋಗ್ಯ ಸಮಸ್ಯೆ ಹೆಚ್ಚಳ
ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದೀಗ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಜನರಿಗೆ ಅನುಕೂಲ ಆಗುವುದಕ್ಕೆಂದು ಏನು ಮಾಡಲು ಹೊರಟಿದೆಯೋ ಆ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಮಾಡಿ ಮುಗಿಸಬೇಕಿದೆ.