ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್! ರೋಗಿಗಳ ಪರದಾಟ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಯಂತ್ರ ಸ್ಥಗಿತಗೊಂಡಿರುವುದರಿಂದ ನೂರಾರು ರೋಗಿಗಳು ಪರದಾಡುತ್ತಿದ್ದಾರೆ. ರಾಜ್ಯದ 13 ಜಿಲ್ಲಾಸ್ಪತ್ರೆಗಳಲ್ಲೂ ಸ್ಕ್ಯಾನಿಂಗ್ ಸೌಲಭ್ಯಗಳ ಕೊರತೆಯಿದ್ದು, ವೈದ್ಯಕೀಯ ಸೇವೆಗಳಲ್ಲಿ ವಿಳಂಬ ಉಂಟಾಗಿದೆ. ಬಡ ರೋಗಿಗಳು ಇದರಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್! ರೋಗಿಗಳ ಪರದಾಟ
ಬೆಂಗಳೂರಿನ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್!
Edited By:

Updated on: Feb 21, 2026 | 11:56 AM

ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಸ್ಕ್ಯಾನಿಂಗ್ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ರೋಗಿಗಳು ಪರದಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಎಂಆರ್‌ಐ ಸ್ಕ್ಯಾನ್ ಯಂತ್ರ ಕಾರ್ಯನಿರ್ವಹಿಸದೇ ಇರುವುದರಿಂದ ನೂರಾರು ರೋಗಿಗಳು ಬಿಲ್ಡಿಂಗ್​ನಿಂದ ಬಿಲ್ಡಿಂಗ್​ಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ.

ಮೂರೂ ಯಂತ್ರಗಳು ಖರಾಬು!

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಹಾಳಾಗಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಹಾಗೂ ಪಿಎಂಎಸ್‌ಎಸ್‌ವೈ ಸೇರಿ ಮೂರು ಆಸ್ಪತ್ರೆಗಳಿಗೆ ಒಟ್ಟು ಕೇವಲ ಮೂರು ಸ್ಕ್ಯಾನಿಂಗ್ ಯಂತ್ರಗಳಷ್ಟೇ ಲಭ್ಯವಿವೆ. ಅವುಗಳಲ್ಲಿ ಒಂದು ಯಂತ್ರ ಎಸಿ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಇದರಿಂದ ಉಳಿದ ಎರಡು ಯಂತ್ರಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ, ಸ್ಕ್ಯಾನಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಎರಡು ದಿನಗಳಿಂದ ಸ್ಕ್ಯಾನಿಂಗ್ ಕೌಂಟರ್ ಬಳಿ ಬಂದು ಕೊನೆಗೆ ಬರಿಗೈಯಲ್ಲಿ ಹಿಂತಿರುಗುತ್ತಿರುವ ರೋಗಿಗಳ ಅಸಮಾಧಾನ ಹೆಚ್ಚಾಗಿದೆ. ತುರ್ತು ಚಿಕಿತ್ಸೆಗಾಗಿ ಸ್ಕ್ಯಾನಿಂಗ್ ಅವಶ್ಯಕವಾಗಿರುವ ರೋಗಿಗಳಿಗೆ ವರದಿಗಳು ತಡವಾಗಿ ಕೈ ಸೇರುತ್ತಿರುವುದರಿಂದ ಆರೋಗ್ಯ ಸೇವೆಗಳ ಗುಣಮಟ್ಟದ ಕುರಿತು ಪ್ರಶ್ನೆಗಳು ಎದ್ದಿವೆ. ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ; ಸರ್ಕಾರ ವಿರುದ್ಧ ಜನಾಕ್ರೋಶ!

ಜಿಲ್ಲಾಸ್ಪತ್ರೆಗಳಲ್ಲೂ ಇದೇ ಪಾಡು!

ಇತ್ತ ರಾಜ್ಯದ 13 ಜಿಲ್ಲಾಸ್ಪತ್ರೆಗಳಲ್ಲಿಯೂ ಸ್ಕ್ಯಾನಿಂಗ್ ಯಂತ್ರಗಳು ಸ್ಥಗಿತಗೊಂಡಿರುವ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಇಲಾಖೆ ಸುಮಾರು 143 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದೇ ಸಮಸ್ಯೆಗೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸೌಲಭ್ಯಗಳ ಕೊರತೆಯಿಂದ ಬಡ ರೋಗಿಗಳು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರೋಗ್ಯ ಇಲಾಖೆಯಿಂದ ಸುಮಾರು 140 ಕೋಟಿ ರೂ ಬಿಲ್ ಬಾಕಿ ಉಳಿದ ಹಿನ್ನೆಲೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿಟಿ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದೆ. ಬಿಪಿಎಲ್ ಕಾರ್ಡ್ ಹೊಂದಿದ ಬಡ ರೋಗಿಗಳು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ. ಸರ್ಕಾರದ ಬಾಕಿ ಪಾವತಿ ವಿಳಂಬದ ಕಾರಣ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲೂ ಉಚಿತ ಸಿಟಿ ಸ್ಕ್ಯಾನ್ ಸೇವೆ ಬಂದ್ ಮಾಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ಸರ್ಜನ್ ಮನವಿ ಮೇರೆಗೆ ಮಾತ್ರ ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ರಾಜ್ಯದ 14 ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ KRSNAA ಡಯಾಗ್ನೊಸ್ಟಿಕ್ ಸೆಂಟರ್‌ಗಳು 143 ಕೋಟಿ ಬಾಕಿ ಹಿನ್ನೆಲೆಯಲ್ಲಿ ಸೇವೆ ನಿಲ್ಲಿಸಿವೆ. ಸಿಟಿ, ಎಂಆರ್‌ಐ ಸೌಲಭ್ಯಗಳಿಲ್ಲದೆ ರೋಗಿಗಳು ಸಂಕಷ್ಟದಲ್ಲಿದ್ದು, ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:24 am, Sat, 21 February 26

Follow Us