ಬೆಂಗಳೂರು ವಿವಿಯಲ್ಲಿ ಕುರ್ಚಿಗಾಗಿ ಕುಸ್ತಿ; ಹಾಲಿ ಕುಲಸಚಿವರ ನಿರ್ಗಮನಕ್ಕೂ ಮುನ್ನ ಅಧಿಕಾರ ಚಲಾಯಿಸುತ್ತಿರುವ ನೂತನ ಕುಲಸಚಿವ, ದೂರು ದಾಖಲು
ನವೆಂಬರ್ 2ರಂದು ಕುಲಸಚಿವರ ಕಚೇರಿಗೆ ಬಂದಿದ್ದ ಪ್ರೊ.ಕೊಟ್ರೇಶ್, ಅನುಮತಿ ಇಲ್ಲದೆ ಅನಧಿಕೃತವಾಗಿ ಕಡತ, ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಐಎಎಸ್ ಅಧಿಕಾರಿ, ಹಾಲಿ ಕುಲಸಚಿವೆ ಕೆ.ಜ್ಯೋತಿ ದೂರು ನೀಡಿದ್ದಾರೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುರ್ಚಿಗಾಗಿ ಕುಸ್ತಿ ಶುರುವಾಗಿದೆ. ಅಧಿಕಾರ ಸ್ವೀಕಾರಕ್ಕಾಗಿ ಹೈಡ್ರಾಮಾ ನಡೆಯುತ್ತಿದೆ. ಹಾಲಿ ಕುಲಸಚಿವರ ನಿರ್ಗಮನಕ್ಕೂ ಮುನ್ನ ಪ್ರೊ.ಕೊಟ್ರೇಶ್ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ.
ಬೆಂಗಳೂರು ಕುಲಸಚಿವ ಸ್ಥಾನಕ್ಕೆ ಪ್ರೊ.ಕೊಟ್ರೇಶ್ ನೇಮಕಗೊಂಡಿದ್ದಾರೆ. ನವೆಂಬರ್ 26ರಂದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿತ್ತು. ಆದ್ರೆ ಹಾಲಿ ಕುಲಸಚಿವೆ ಕೆ.ಜ್ಯೋತಿ ಬೇರೆ ಯಾವುದೇ ಇಲಾಖೆಗೆ ಇನ್ನೂ ವರ್ಗಾವಣೆ ಆಗಿಲ್ಲ. ಹೀಗಾಗಿ ಈಗಲೂ ಹಾಲಿ ಕುಲಸಚಿವೆ ಕೆ.ಜ್ಯೋತಿ ಅವರ ಅಧಿಕಾರವಿದೆ. ಇದು ತಿಳಿದಿದ್ದರೂ ಹಾಲಿ ಕುಲಸಚಿವೆ ಇಲ್ಲದ ಸಮಯದಲ್ಲಿ ಪ್ರೊ.ಕೊಟ್ರೇಶ್ ಕಡತಗಳಿಗೆ ಸಹಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ನವೆಂಬರ್ 2ರಂದು ಕುಲಸಚಿವರ ಕಚೇರಿಗೆ ಬಂದಿದ್ದ ಪ್ರೊ.ಕೊಟ್ರೇಶ್, ಅನುಮತಿ ಇಲ್ಲದೆ ಅನಧಿಕೃತವಾಗಿ ಕಡತ, ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಐಎಎಸ್ ಅಧಿಕಾರಿ, ಹಾಲಿ ಕುಲಸಚಿವೆ ಕೆ.ಜ್ಯೋತಿ ದೂರು ನೀಡಿದ್ದಾರೆ. ವಿವಿ ಕುಲಪತಿ ಕೆ.ಆರ್.ವೇಣುಗೋಪಾಲ್, ನೂತನ ಕುಲಸಚಿವ ಪ್ರೊ.ಕೊಟ್ರೇಶ್ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಸದ್ಯ ಕುಲಪತಿ ಬಳಿ ರಿಪೋರ್ಟ್ ಮಾಡಿಕೊಂಡು ಡಿಸೆಂಬರ್ 1ರಿಂದ ಪ್ರೊ.ಕೊಟ್ರೇಶ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆ.ಜ್ಯೋತಿ ಅಧಿಕಾರ ಹಸ್ತಾಂತರಕ್ಕೂ ಮೊದಲೇ ಕುಲಸಚಿವ ಸ್ಥಾನದಲ್ಲಿ ಪ್ರೊ.ಕೊಟ್ರೇಶ್ ಆಸೀನರಾಗಿದ್ದಾರೆ. ಅಲ್ಲದೆ ನಿನ್ನೆ ವಿವಿ ಸಿಬ್ಬಂದಿಯ ಜೊತೆಗೆ ದಿಢೀರ್ ಸಭೆ ನಡೆಸಿದ್ದಾರೆ. ಈ ವಿಚಾರವಾಗಿಯೂ ಕೆ.ಜ್ಯೋತಿ ದೂರು ನೀಡಿದ್ದಾರೆ. ಪ್ರೊ.ಕೊಟ್ರೇಶ್ ಈ ಹಿಂದೆ ಸಂಸ್ಕೃತ ವಿವಿ ಕುಲಸಚಿವರಾಗಿದ್ದರು. ಈಗ ಮತ್ತೊಂದು ಬೆಳವಣಿಗೆಯೆಂಬಂತೆ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರು ಕೂಡ ಪ್ರೊ.ಕೊಟ್ರೇಶ್ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾರೆ. ಕುಲಸಚಿವರ ಸ್ಥಾನಕ್ಕೆ ಕಾನೂನು ಬಾಹಿರವಾಗಿ ನೇಮಕವಾಗಿದೆ. ಕೂಡಲೇ ಕುಲಸಚಿವ ಸ್ಥಾನದಿಂದ ಕೈಬಿಡುವಂತೆ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಗೋವಿಂದರಾಜು ಸಿಎಂ ಬೊಮ್ಮಾಯಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Konijeti Rosaiah Death: ಆಂಧ್ರಪ್ರದೇಶದ ಮಾಜಿ ಸಿಎಂ ಕೋನಿಜೇಟಿ ರೋಸಯ್ಯ ಇಂದು ನಿಧನ; ಕರ್ನಾಟಕದ ಮಾಜಿ ರಾಜ್ಯಪಾಲರು ಇವರು