AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಯನ ಮದುವೆಗೆ ಬಂದಿದ್ದ NRI ವೈದ್ಯೆಗೆ ಆಘಾತ: ಮದುವೆ ಮಂಟಪದಿಂದ 1 ಕೋಟಿ ರೂ. ಮೌಲ್ಯದ ಬಂಗಾರದ ಆಭರಣ ಕಳವು

ಬೆಂಗಳೂರಿನ ಮದುವೆ ಮಂಟಪದಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಅಳಿಯನ ಮದುವೆಗೆ ಅಮೆರಿಕದಿಂದ ಬಂದಿದ್ದ ಎನ್‌ಆರ್‌ಐ ವೈದ್ಯೆಗೆ ಸೇರಿದ್ದ 725 ಗ್ರಾಂ ಚಿನ್ನ ಲಾಕ್ ಮಾಡಿದ ಕೊಠಡಿಯಿಂದಲೇ ಕಳುವಾಗಿದೆ. ಕುಟುಂಬಸ್ಥರಿಗೆ ಆಪ್ತರ ಕೈವಾಡದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಮದುವೆ ಸಂಭ್ರಮದಲ್ಲಿರುವ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ.

ಅಳಿಯನ ಮದುವೆಗೆ ಬಂದಿದ್ದ NRI ವೈದ್ಯೆಗೆ ಆಘಾತ: ಮದುವೆ ಮಂಟಪದಿಂದ 1 ಕೋಟಿ ರೂ. ಮೌಲ್ಯದ ಬಂಗಾರದ ಆಭರಣ ಕಳವು
ಸಾಂದರ್ಭಿಕ ಚಿತ್ರImage Credit source: AI Image
ಪ್ರಸನ್ನ ಹೆಗಡೆ
|

Updated on: Apr 26, 2026 | 7:02 AM

Share

ಬೆಂಗಳೂರು, ಏಪ್ರಿಲ್​​ 26: ಮದುವೆ ಮನೆಯಲ್ಲಿ ಕೈಚಳಕ ತೋರಿರುವ ಖದೀಮರು ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಅಮೆರಿಕದಲ್ಲಿ ವಾಸವಿರುವ 52 ವರ್ಷದ ಮಹಿಳಾ ವೈದ್ಯೆ ಸಿರುವೆಲ್ಲ ಶ್ರೀದೇವಿ ಎಂಬವರಿಗೆ ಸೇರಿದ ಚಿನ್ನಾಭರಣವನ್ನು ಮದುವೆ ಮಂಟಪದಲ್ಲಿ ದೋಚಿರುವ ಪ್ರಸಂಗ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ.

ಇನ್ನು ಘಟನೆ ಸಂಬಂಧ ಸಿರುವೆಲ್ಲ ಶ್ರೀದೇವಿ ಅವರು ಗುರುವಾರ ಮಧ್ಯಾಹ್ನ ದೂರು ನೀಡಿದ್ದಾರೆ. ತಮ್ಮ ಸಹೋದರನ ಮಗನ ಮದುವೆಗೆ ಏಪ್ರಿಲ್ 18ರಂದು ಬೆಂಗಳೂರಿಗೆ ಬಂದಿದ್ದ ಅವರು, ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿರುವ ತಮ್ಮ ಸಹೋದರರ ಮನೆಯಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಬಿಡರಹಳ್ಳಿಯ ಓಲ್ಡ್ ಮದ್ರಾಸ್ ರಸ್ತೆಯ ಎಸ್‌ಡಿಪಿ ಪ್ಯಾಲೆಸ್ ಮಂಟಪಕ್ಕೆ ತೆರಳಿದ್ದರು. ಸಂಜೆ 6.30ರ ವೇಳೆಗೆ ಅವರ ಸಹೋದರರು ಚಿನ್ನಾಭರಣಗಳಿದ್ದ ಪೆಟ್ಟಿಗೆಯನ್ನು ಮಂಟಪದಲ್ಲೇ ನೀಡಿದ್ದಾರೆ. ಆ ಪೈಕಿ ಸ್ವಲ್ಪ ಆಭರಣಗಳನ್ನು ಧರಿಸಿ ಉಳಿದವುಗಳನ್ನು ಕೊಠಡಿಯಲ್ಲಿ ಇಟ್ಟು ಬಾಗಿಲು ಲಾಕ್ ಮಾಡಿ ಸ್ವಾಗತ ಕಾರ್ಯಕ್ರಮಕ್ಕೆ ಅವರು ಹೋಗಿದ್ದರು. ಕೊಠಡಿಗೆ ಲಾಕ್ ಮಾಡಿದ್ದರೂ ಈ ಆಭರಣಗಳು ಕಳವಾಗಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ವ್ಯಾಪಾರಕ್ಕೆಂದು ಬಂದು ಮಹಿಳೆಯ ಸಹವಾಸ ಮಾಡಿ ಬರ್ಬರ ಹತ್ಯೆಯಾದ ಈರುಳ್ಳಿ ವ್ಯಾಪಾರಿ!

ಕಳುವಾಗಿರೋದು ಸುಮಾರು 725 ಗ್ರಾಂ ಚಿನ್ನಾಭರಣಗಳು ಎನ್ನಲಾಗಿದ್ದು, ದೂರುದಾರರಿಗೆ ಪರಿಚಿತರಾದವರು ಅಥವಾ ಕುಟುಂಬದವರಲ್ಲಿ ಯಾರಾದರೂ ಕೃತ್ಯ ಎಸಗಿರಬಹುದೆಂಬ ಶಂಕೆಯೂ ಇದೆ. ಹೀಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಜೊತೆಗೆ ಕೊಠಡಿಗೆ ಪ್ರವೇಶ ಹೊಂದಿದ್ದವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮದುವೆ ಮಂಟಪದ ಸಿಬ್ಬಂದಿ ಪಾತ್ರ ಇಲ್ಲ ಎಂದು ಮಂಟಪ ವ್ಯವಸ್ಥಾಪಕ ಪ್ರಭು ಅವರು ತಿಳಿಸಿದ್ದು, ಬಾಗಿಲು ಲಾಕ್ ಆಗಿತ್ತು. ಕೀಲಿ ಕೂಡ ದೂರುದಾರರಲ್ಲೇ ಇತ್ತು ಎಂದು ಹೇಳಿದ್ದಾರೆ. ಅಲ್ಲದೆ ಘಟನೆ ಸಂಬಂಧ ನಾವು ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದೇವೆ ಎಂದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಆದಾವತ್ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More