ಕೊರೊನಾ ನಿಯಂತ್ರಿಸಲು ಬಿಬಿಎಂಪಿ ಯಾವ ಕ್ರಮ ಬೇಕಿದ್ದರೂ ಜರುಗಿಸಬಹುದು; ಸಂಪೂರ್ಣ ಸ್ವಾತಂತ್ರ್ಯ ನೀಡಿದ ರಾಜ್ಯ ಸರ್ಕಾರ

ಕೊರೊನಾ ನಿಯಂತ್ರಿಸಲು ಬಿಬಿಎಂಪಿ ಯಾವ ಕ್ರಮ ಬೇಕಿದ್ದರೂ ಜರುಗಿಸಬಹುದು; ಸಂಪೂರ್ಣ ಸ್ವಾತಂತ್ರ್ಯ ನೀಡಿದ ರಾಜ್ಯ ಸರ್ಕಾರ
ಪ್ರಾತಿನಿಧಿಕ ಚಿತ್ರ

ಈ ಹಿಂದೆ ಕೊವಿಡ್ ನಿಯಮಾವಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಬಿಬಿಎಂಪಿ ಪಾಲನೆ ಮಾಡಬೇಕಿತ್ತು. ಸರ್ಕಾರದ ಗಮನಕ್ಕೆ ತಂದ ನಂತರ ಅಧಿಕೃತ ಅನುಮತಿ ಅಥವಾ ಆದೇಶಕ್ಕೆ ಕಾಯಬೇಕಿತ್ತು. ಆದರೆ ಈಗ ಬಿಬಿಎಂಪಿಗೆ ಸ್ವತಂತ್ರ ಅಧಿಕಾರ ನೀಡಲಾಗಿದೆ.

TV9kannada Web Team

| Edited By: Skanda

Aug 01, 2021 | 8:56 AM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ (Corona Cases) ಸಂಖ್ಯೆ ದಿನೇ ದಿನೇ ಉಲ್ಬಣಿಸುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು (Karnataka Government) ಬಿಬಿಎಂಪಿಗೆ (BBMP) ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಬೆಂಗಳೂರಿನಲ್ಲಿ ಕೊವಿಡ್ ನಿಯಂತ್ರಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಯಾವ ಕ್ರಮಬೇಕಾದರೂ ತೆಗೆದುಕೊಳ್ಳಬಹುದು. ಕಂಟೈನ್ಮೆಂಟ್, ಸೀಲ್‌ಡೌನ್, ಕರ್ಫ್ಯೂ ಸೇರಿದಂತೆ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಜರುಗಿಸಲು ಬಿಬಿಎಂಪಿ ಸ್ವತಂತ್ರವಾಗಿ ನಿಲುವು ತೆಗೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದೆ.

ಈ ಹಿಂದೆ ಕೊವಿಡ್ ನಿಯಮಾವಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಬಿಬಿಎಂಪಿ ಪಾಲನೆ ಮಾಡಬೇಕಿತ್ತು. ಸರ್ಕಾರದ ಗಮನಕ್ಕೆ ತಂದ ನಂತರ ಅಧಿಕೃತ ಅನುಮತಿ ಅಥವಾ ಆದೇಶಕ್ಕೆ ಕಾಯಬೇಕಿತ್ತು. ಆದರೆ ಈಗ ಬಿಬಿಎಂಪಿಗೆ ಸ್ವತಂತ್ರ ಅಧಿಕಾರ ನೀಡಲಾಗಿದ್ದು, ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಬೇಕಿದ್ದರೂ ಜಾರಿಗೆ ತರಬಹುದು ಎಂದು ಸರ್ಕಾರ ಹೇಳಿದೆ.

ಬಿಬಿಎಂಪಿ ಈಗ ಏನು ಮಾಡಬಹುದು? ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವುದರಿಂದ ಸೋಂಕಿತರು ಹೆಚ್ಚಾಗಿ ಪತ್ತೆಯಾಗುವ ಏರಿಯಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗುವ ಸಾಧ್ಯತೆ ಇದೆ. ಒಂದು ಮನೆಯಲ್ಲಿ ಮೂರಕ್ಕಿಂತ ಹೆಚ್ಚು ಜನ ಸೋಂಕಿತರು ಪತ್ತೆಯಾದರೆ ಇಡೀ ಮನೆ ಸೀಲ್​ಡೌನ್ ಮಾಡಬಹುದು. ಮನೆಯೊಳಗೆ, ಹೊರಗೆ ಯಾರೂ ಬರುವಂತಿಲ್ಲ, ಹೋಗುವಂತಿಲ್ಲ. ಒಂದು ಮನೆ ಅಥವಾ ಒಂದೇ ಜಾಗದಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ  100 ಮೀಟರ್ ಪ್ರದೇಶವನ್ನ ಸೀಲ್​ಡೌನ್ ಮಾಡಬೇಕು. ರಸ್ತೆ, ಅಕ್ಕಪಕ್ಕದ ಮನೆಗಳನ್ನು ಬ್ಯಾರಿಕೇಡ್, ಕೆಂಪು ಟೇಪ್​ ಮೂಲಕ ಸೀಲ್​ಡೌನ್ ಮಾಡಬಹುದು. ಇನ್ನು ಈ ವೇಳೆ ಅಗತ್ಯ ವಸ್ತುಗಳ ಸರಬರಾಜು ಮಾಡುವ ಹೊಣೆಯನ್ನು ಬಿಬಿಎಂಪಿ ಹೊರಬಹುದು.

ಏತನ್ಮಧ್ಯೆ, ವಿಕೇಂಡ್ ಕರ್ಫ್ಯೂ ಹಾಗೂ ಹಾಫ್ ಡೇ ಕರ್ಫ್ಯೂ ಜಾರಿಗೆ ಬಿಬಿಎಂಪಿ ಯೋಚಿಸಿದೆ. ವಾರಾಂತ್ಯದ ದಿನ‌ಗಳಲ್ಲಿ ಪಾರ್ಟಿಗಳ ಸಂಖ್ಯೆ ಹೆಚ್ಚಿದ್ದು, ಪಬ್​ಗಳು ಅನುಮತಿ‌ ಇಲ್ಲದಿದ್ದರೂ ತೆರೆಯುತ್ತಿವೆ. ಇದು ಜನರು ಒಂದೆಡೆ ಸೇರುವುದಕ್ಕೆ ದಾರಿಯಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೂ ಮಾತ್ರ ಜನರ ಓಡಾಟಕ್ಕೆ ಅವಕಾಶ ನೀಡಿ. ವಾರಾಂತ್ಯದಲ್ಲಿ ಸಂಜೆ 5 ಗಂಟೆಯಿಂದ ‌ಕರ್ಫ್ಯೂ ಜಾರಿಗೆ ಯೋಚಿಸಲಾಗಿದ್ದು, ಸಿಎಂ ಜತೆ ಬಿಬಿಎಂಪಿ ಅಧಿಕಾರಿಗಳು ಚರ್ಚೆ ನಡೆಸಿದ ಬಳಿಕ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ, ಸೋಂಕು ತಡೆಯುವುದಕ್ಕಾಗಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶದ ಮಾರುಕಟ್ಟೆ, ಮದುವೆ ಹಾಲ್, ಹೋಟೆಲ್​ ಬಂದ್ ಮಾಡುವ ಆಲೋಚನೆಯೂ ಇದ್ದು, ಸಾರ್ವಜನಿಕರು ಸಾಮೂಹಿಕವಾಗಿ ಸೇರುವ ಪ್ರದೇಶಗಳಿಗೆ ನಿರ್ಬಂಧ ವಿಧಿಸಬಹುದು ಎನ್ನಲಾಗುತ್ತಿದೆ. ಹೆಚ್ಚು ಸೋಂಕಿತರು ಇರುವ ಪ್ರದೇಶದಲ್ಲಿ 7 ದಿನಗಳ‌ ಕಾಲ ಯಾವುದೇ ಕಾರ್ಯಕ್ರಮಗಳು ನಡೆಯುವಂತಿಲ್ಲ ಎಂದು ಆದೇಶ ಹೊರಡಿಸುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಆತಂಕ; ಚೆಕ್‌ಪೋಸ್ಟ್ ನಿರ್ಮಾಣ, ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ 

Corona Virus: ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಸೂತ್ರ; ಮುಖ್ಯಾಂಶಗಳು ಇಲ್ಲಿದೆ

(BBMP can take decision independently to control Covid 19 in Bengaluru new guidelines likely to be imposed soon)

Follow us on

Related Stories

Most Read Stories

Click on your DTH Provider to Add TV9 Kannada