Corona Virus: ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಸೂತ್ರ; ಮುಖ್ಯಾಂಶಗಳು ಇಲ್ಲಿದೆ

Corona Virus: ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಸೂತ್ರ; ಮುಖ್ಯಾಂಶಗಳು ಇಲ್ಲಿದೆ
ಸಾಂಕೇತಿಕ ಚಿತ್ರ

Covid19: ಜನ್ ಪೂರೈಕೆ, ಔಷಧಿ ಲಭ್ಯತೆ, ಮುನ್ನೆಚ್ಚರಿಕೆ ಕ್ರಮಗಳು, ಗಡಿ ಭಾಗಗಳಲ್ಲಿ ತಪಾಸಣೆ ಮೊದಲಾದ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಕೈಗೊಂಡ ನಿರ್ಣಯಗಳು, ಗಡಿಭಾಗದಲ್ಲಿ ವಿಶೇಷ ಮುತುವರ್ಜಿ ಇತ್ಯಾದಿ ಸೂಚನೆಗಳ ಮುಖ್ಯಾಂಶ ಇಲ್ಲಿದೆ.

TV9kannada Web Team

| Edited By: Skanda

Aug 01, 2021 | 6:58 AM

ಬೆಂಗಳೂರು: ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಗಡಿಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಪಕ್ಕದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊವಿಡ್19 ಸೋಂಕಿತರ ಸಂಖ್ಯೆ ಇಳಿಕೆ ಆಗಿಲ್ಲ. ಬದಲಾಗಿ ತೀವ್ರವಾಗಿ ಏರಿಕೆ ಕಾಣುತ್ತಿದೆ. ಈ ಕಾರಣದಿಂದಾಗಿ ಕೇರಳ ಗಡಿಭಾಗವಾದ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಕೂಡ ಆತಂಕ ಹೆಚ್ಚಾಗಿದೆ. ಹೀಗಾಗಿ, ಕೊವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗಿರುವ ಜಿಲ್ಲೆಗಳ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಸಿಎಂ ಬೊಮ್ಮಾಯಿ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದರು. ಆಕ್ಸಿಜನ್ ಪೂರೈಕೆ, ಔಷಧಿ ಲಭ್ಯತೆ, ಮುನ್ನೆಚ್ಚರಿಕೆ ಕ್ರಮಗಳು, ಗಡಿ ಭಾಗಗಳಲ್ಲಿ ತಪಾಸಣೆ ಮೊದಲಾದ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಕೈಗೊಂಡ ನಿರ್ಣಯಗಳು, ಗಡಿಭಾಗದಲ್ಲಿ ವಿಶೇಷ ಮುತುವರ್ಜಿ ಇತ್ಯಾದಿ ಸೂಚನೆಗಳ ಮುಖ್ಯಾಂಶ ಇಲ್ಲಿದೆ.

 • ಕೊವಿಡ್ ಎರಡನೇ ಅಲೆಯನ್ನು ಕಠಿಣ ಪರಿಶ್ರಮದಿಂದ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ನಿಯಂತ್ರಿಸಲಾಗಿದೆ. ಈಗ ಮತ್ತೆ ಪ್ರಕರಣಗಳು ಹೆಚ್ಚಳವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
 • ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಆರ್.ಟಿ.ಪಿ.ಸಿ.ಆರ್ ನೆಗೆಟಿವ್, ಎರಡೂ ಡೋಸ್ ವ್ಯಾಕ್ಸಿನ್ ಕಡ್ಡಾಯ.
 • ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಬಿಗಿ ಮಾಡಿ. ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ. ಡಿವೈಎಸ್​ಪಿ, ಉಪ ವಿಭಾಗಾಧಿಕಾರಿ, ವೈದ್ಯರು, ಮತ್ತು ಇತರ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು.
 • ಜಿಲ್ಲಾಧಿಕಾರಿಗಳು, ಎಸ್​ಪಿ ಪ್ರತಿ ಎರಡು ದಿನಕ್ಕೊಮ್ಮೆ ಭೇಟಿ ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಬೇಕು.
 • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಹೇಳಲಾಗಿದೆ.
 • ಜೊತೆಗೆ ರೈಲು ನಿಲ್ದಾಣದಲ್ಲಿಯೂ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಬಂದರುಗಳಲ್ಲಿಯೂ ಕಟ್ಟೆಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.
 • ಕೇರಳದಿಂದ ಶಿಕ್ಷಣ, ಉದ್ಯೋಗಕ್ಕೆಂದು ಪ್ರತಿದಿನ ಪ್ರಯಾಣಿಸುವವರಿಗೆ ಒಂದು ವಾರದ ಅವಧಿಗೆ ಪಾಸ್ ನೀಡುವ ವ್ಯವಸ್ಥೆ ಹಾಗೂ ಅವರಿಗೆ ಪ್ರತಿ ವಾರ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
 • ಹೊರ ರಾಜ್ಯದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿಯೇ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ.
 • ಚಿಕಿತ್ಸಾ ಸೌಲಭ್ಯದಲ್ಲಿ, ಆಮ್ಲಜನಕ, ಔಷಧ ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು.
 • ಆರೋಗ್ಯ ಸೌಲಭ್ಯಕ್ಕೆ ಅಗತ್ಯವಿರುವ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಅವುಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
 • ಜಿಲ್ಲೆಗಳಿಗೆ ಹಂಚಿಕೆ ಮಾಡಿರುವ ಪಿಎಸ್ಎ ಘಟಕಗಳನ್ನು ತ್ವರಿತವಾಗಿ ಅಳವಡಿಸಲು ಸೂಚಿಸಲಾಯಿತು.
 • ಪಿ.ಎಸ್.ಎ ಘಟಕಗಳಿಗೆ ಅಗತ್ಯ ಸಾಮರ್ಥ್ಯದ ವಿದ್ಯುತ್ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
 • ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಪಿಎಸ್ಎ ಘಟಕ ಒಂದು ವಾರದೊಳಗೆ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
 • ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗಳ ಪ್ರಮಾಣ ಹೆಚ್ಚಿಸುವಂತೆ ಸೂಚಿಸಿದರು. ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಕಾರಣ, ಹೋಮ್ ಸ್ಟೇಗಳು, ರೆಸಾರ್ಟ್ ಗಳಲ್ಲಿ ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ.
 • ಲಸಿಕೆ ಕಾರ್ಯಕ್ರಮವನ್ನು ತೀವ್ರಗೊಳಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
 • ಸಂಪರ್ಕಿತರ ಪತ್ತೆ ತೀವ್ರಗೊಳಿಸಲು ಸೂಚಿಸಲಾಗಿದೆ. ಗಡಿ ಪ್ರದೇಶದಲ್ಲಿ RAT ಪರೀಕ್ಷೆ ಹೆಚ್ಚಿಸಬೇಕು ಎಂದು ಹೇಳಲಾಗಿದೆ.
 • ಮೈಕ್ರೋ ಕಂಟೇನ್​ಮೆಂಟ್ ಝೋನ್​ಗಳನ್ನು ಮಾಡಿ ಕೊವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
 • ಮಾಸ್ಕ್ ಧಾರಣೆ ಕಡ್ಡಾಯಗೊಳಿಸಬೇಕು.
 • ರೆಸಾರ್ಟ್​ಗಳಲ್ಲಿ ಅತಿಥಿಗಳಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ವರದಿ ಕಡ್ಡಾಯಗೊಳಿಸಬೇಕು.
 • ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಜನ ಗುಂಪುಗೂಡದಂತೆ ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ರಾತ್ರಿ ಕರ್ಫ್ಯೂ 15 ದಿನ ಮುಂದುವರಿಕೆ; ಚಿತ್ರಮಂದಿರಗಳಲ್ಲಿ ಶೇಕಡಾ 50 ಜನರಿಗೆ ಮಾತ್ರ ಅವಕಾಶ: ಬಸವರಾಜ ಬೊಮ್ಮಾಯಿ

(CM Basavaraj Bommai on controlling Karnataka Covid19 Coronavirus in Border Districts details here)

Follow us on

Related Stories

Most Read Stories

Click on your DTH Provider to Add TV9 Kannada