ಬೆಂಗಳೂರು, ಜುಲೈ 3: ಬೆಂಗಳೂರಿನ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಸಜ್ಜಾಗಿರುವ ಬಿಬಿಎಂಪಿ, ಶೀಘ್ರದಲ್ಲೇ ಕಾಮಗಾರಿ ಶುರು ಮಾಡಲು ತಯಾರಿ ನಡೆಸಿದೆ. ನಗರದ 43 ರಸ್ತೆಗಳಿಗೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ನಡೆಸೋಕೆ ತಯಾರಿ ನಡೆದಿದ್ದು, ಈ ಬಗ್ಗೆ ಬಿಬಿಎಂಪಿ ಸಭೆ ನಡೆಸಿದೆ. ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಪೈಪ್ ಲೈನ್, ಕೇಬಲ್ ಅಳವಡಿಕೆ ಇದ್ದರೆ ಕಾಮಗಾರಿಗೂ ಮೊದಲೇ ಮುಗಿಸುವಂತೆ ಬಿಡಿಎ, ಜಲಮಂಡಳಿ ಹಾಗೂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.
ಬಜೆಟ್ನಲ್ಲಿ ಘೋಷಣೆಯಾದ ಬಳಿಕ ಟೆಂಡರ್ ಆಹ್ವಾನ ಮಾಡಿದ್ದರೂ ಕೂಡ ಗುತ್ತಿಗೆದಾರರ ಅಲಭ್ಯತೆಯಿಂದ ಕಾಮಗಾರಿ ನಡೆಸಲು ಪಾಲಿಕೆ ವಿಳಂಬ ಮಾಡಿತ್ತು. ಇದೀಗ ವೈಟ್ ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ವಿಂಗಡಿಸಿ ಐದು ಗುತ್ತಿಗೆ ಕಂಪೆನಿಗಳಿಗೆ ಹಂಚಿ, ಕಾಮಗಾರಿ ನಡೆಸಲು ಮುಂದಾಗಿದೆ. ಈ ಪೈಕಿ 800 ಕೋಟಿ ರೂಪಾಯಿ ಕಾಮಗಾರಿಯನ್ನ ಬಿಬಿಎಂಪಿಯ ಯೋಜನಾ ವಿಭಾಗದ ಉಸ್ತುವಾರಿಯಲ್ಲಿ ನಡೆದರೆ, ಉಳಿದಂತೆ 900 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಿಂದ ನಡೆಸಲಿದೆ.
ಸದ್ಯ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿ ಕಂಟಕಕ್ಕೂ ವೈಟ್ ಟಾಪಿಂಗ್ನಿಂದ ಮುಕ್ತಿ ಸಿಗುವ ನಿರೀಕ್ಷೆಯಲ್ಲಿ ಸಿಟಿಜನ ಕಾದು ಕುಳಿತಿದ್ದಾರೆ.
ಇದನ್ನೂ ಓದಿ: ಡೆಂಗ್ಯೂ ಹೆಚ್ಚಳ ಪರಿಣಾಮ; ಬೆಂಗಳೂರಿನಲ್ಲಿ ಪ್ಲೇಟ್ಲೆಟ್ಗೆ ಹೆಚ್ಚಿದ ಬೇಡಿಕೆ
ಒಟ್ಟಿನಲ್ಲಿ ಗುಂಡಿ ಗಂಡಾಂತರಕ್ಕೆ ಪರಿಹಾರ ಕಂಡುಹಿಡಿಯಲು ಸುಸ್ತಾಗಿದ್ದ ಪಾಲಿಕೆ, ಇದೀಗ ರಾಜಧಾನಿಯ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಕೊನೆಗೂ ಸಿದ್ಧವಾಗಿದೆ. ಶುಕ್ರವಾರದಿಂದ ಕಾಮಗಾರಿಗಳಿಗೆ ಚಾಲನೆ ನೀಡಲು ಪಾಲಿಕೆ ಸಿದ್ಧತೆ ನಡೆಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ