ಬೆಂಗಳೂರಿನಲ್ಲಿ ಬೀದಿನಾಯಿಗಳಿಂದಾಗುವ ಅಪಾಯ ತಡೆಯಲು ಬಿಬಿಎಂಪಿ ಹೊಸ ಪ್ಲಾನ್
ಬೆಂಗಳೂರು ಮಹಾನಗರ ಪಾಲಿಕೆ ಬೀದಿನಾಯಿಗಳಿಗೆ ಸಂಯೋಜಿತ ಲಸಿಕೆ ಅಭಿಯಾನ ಆರಂಭಿಸಿದೆ. 4.98 ಕೋಟಿ ರೂ. ವೆಚ್ಚದ ಈ ಯೋಜನೆಯು ರೇಬೀಸ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಗುರಿ ಹೊಂದಿದೆ. ನಾಯಿಗಳಿಂದ ಮಾನವರಿಗೆ ಹರಡುವ ರೋಗಗಳನ್ನು ತಡೆಯಲು ಸಹಾಯವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 14: ನಗರದಲ್ಲಿ ಬೀದಿನಾಯಿಗಳ ವಿಚಾರದಲ್ಲಿ ಸದಾ ಒಂದಿಲ್ಲೊಂದು ಹೊಸ ಹೊಸ ಪ್ರಯೋಗ ಮಾಡೋಕೆ ಹೊರಟಿರೋ ಪಾಲಿಕೆ (BBMP) ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ರಾಜಧಾನಿಯ ಬೀದಿನಾಯಿಗಳಿಗೆ ರೋಗಗಳು ಹರಡದಂತೆ ಕ್ರಮವಹಿಸೋಕೆ ಹೊರಟಿರೋ ಪಾಲಿಕೆ ಬರೋಬ್ಬರಿ 4.98 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಬೈನ್ಡ್ ವ್ಯಾಕ್ಸಿನ್ ಕೊಡಿಸೋಕೆ ಹೊರಟಿದೆ. ಇತ್ತ ಬೀದಿನಾಯಿಗಳಿಗೆ ಈ ಲಸಿಕೆ ಕೊಡೋಕೆ ಮುಂದಾಗಿದ್ದು ಲಸಿಕೆ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ.
4.98 ಕೋಟಿ ರೂ ಖರ್ಚು
ಬೆಂಗಳೂರಿನ ಬೀದಿನಾಯಿಗಳಿಂದ ಹರಡುವ ರೋಗಗಳಿಗೆ ಕಡಿವಾಣ ಹಾಕಲು ಹೊರಟಿರೋ ಪಾಲಿಕೆ ಇದೀಗ ಹೊಸ ಪ್ಲಾನ್ ಜಾರಿ ಮಾಡೋಕೆ ಹೊರಟಿದೆ. ಪಾಲಿಕೆ ವ್ಯಾಪ್ತಿಯ 1.84 ಲಕ್ಷ ಬೀದಿನಾಯಿಗಳಿಗೆ ಕಂಬೈನ್ಡ್ ವ್ಯಾಕ್ಸಿನ್ ನೀಡೋಕೆ ಹೊರಟಿರೋ ಪಾಲಿಕೆ, ಇದಕ್ಕಾಗಿ ಬರೋಬ್ಬರಿ 4.98 ಕೋಟಿ ರೂಪಾಯಿ ಖರ್ಚು ಮಾಡೋಕೆ ಮುಂದಾಗಿದೆ.
ಇದನ್ನೂ ಓದಿ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ BBMPಯಿಂದ 4 ವರ್ಷದಲ್ಲಿ 40 ಕೋಟಿ ರೂ. ಖರ್ಚು
ಸದ್ಯ ಪಾಲಿಕೆ ವ್ಯಾಪ್ತಿಯ ಬೀದಿನಾಯಿಗಳಿಗೆ ಊಟ ನೀಡುವ ಕೆಲಸ ಶುರುಮಾಡಿರುವ ಪಾಲಿಕೆ ಇದೀಗ ಬೀದಿನಾಯಿಗಳಿಗೆ ರೋಗ ಹರಡದಂತೆ ನಿಗಾ ಇಡುವುದಕ್ಕೆ ಹೊರಟಿದೆ. ಸದ್ಯ ಬಿಬಿಎಂಪಿಯ ಈ ಹೊಸ ಯೋಜನೆಗೆ ಇಂದು ಚಾಲನೆ ನೀಡಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ಪ್ಲಾನ್ ನಿಂದ ನಾಯಿಗಳಿಗೆ ಹರಡುವ ರೋಗ ಹಾಗೂ ನಾಯಿಗಳಿಂದ ಮನುಷ್ಯರಿಗೆ ಹರಡುವ ರೋಗಗಳಿಗೆ ಈ ಲಸಿಕೆ ಬ್ರೇಕ್ ಹಾಕಲಿದೆ ಅಂದಿದ್ದಾರೆ.
ರೋಗಗಳು ತಡೆಗಟ್ಟುವಿಕೆ ಲಸಿಕೆ ಕಾರ್ಯಕ್ರಮ
ಇನ್ನು ರೇಬೀಸ್ ಲಸಿಕೆ ಹೊರತು ಪಡಿಸಿ ಬೀದಿನಾಯಿಗಳಲ್ಲಿ ಹಲವು ಮಾರಾಣಾಂತಿಕ ಸಾಂಕ್ರಾಮಿಕ ರೋಗಗಳನ್ನು ಹಾಗೂ ಮನುಷ್ಯರಿಗೆ ನಾಯಿಗಳಿಂದ ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಸಂಯುಕ್ತ ಲಸಿಕೆ ಕಾರ್ಯಕ್ರಮವನ್ನ ಜಾರಿಮಾಡಲು ಹೊರಟಿದ್ದು, ಈ ಪ್ಲಾನ್ ಮೂಲಕ ಇಡೀ ದೇಶದಲ್ಲೇ ಮೊದಲ ಬಾರಿಗೆ ಬೀದಿನಾಯಿಗಳಿಗೆ ಸಂಯುಕ್ತ ಲಸಿಕೆ ನೀಡಿದ ಮೊದಲ ಸ್ಥಳೀಯ ಸಂಸ್ಥೆ ಅನ್ನೋ ಕೀರ್ತಿ ಪಡೆಯೋಕೆ ಪಾಲಿಕೆ ತಯಾರಿ ನಡೆಸಿದೆ. ಸದ್ಯ ಸಾಂಕೇತಿಕವಾಗಿ ಇಂದು ಬೀದಿನಾಯಿಗಳಿಗೆ ಲಸಿಕೆ ನೀಡಿರೋ ಪಾಲಿಕೆ, ರಾಜಧಾನಿಯ ಎಂಟು ವಲಯಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸೋಕೆ ಸಜ್ಜಾಗಿದೆ.
ಇದನ್ನೂ ಓದಿ: ನಾಯಿಗಳ ದಾಳಿ: ಕರ್ನಾಟಕದಲ್ಲಿ ಈವರೆಗೂ 12ಕ್ಕೂ ಹೆಚ್ಚು ಜನರು ರೇಬಿಸ್ಗೆ ಬಲಿ!
ಒಟ್ಟಿನಲ್ಲಿ ಬೀದಿನಾಯಿಗಳನ್ನ ನಿಯಂತ್ರಣ ಮಾಡುವ ವಿಚಾರದಲ್ಲಿ ಪದೇ ಪದೇ ಸಿಟಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಲಿಕೆ, ಇದೀಗ ಪ್ರಾಣಿಪ್ರಿಯರ ಮನವೊಲಿಸೋ ಕಾರ್ಯಕ್ರಮಗಳನ್ನ ಜಾರಿ ಮಾಡೋ ಮೂಲಕ ಬೀದಿನಾಯಿಗಳ ಹೆಸರಲ್ಲಿ ಕೋಟಿ ಕೋಟಿ ಹಣ ಮೀಸಲಿಡೋಕೆ ಸಜ್ಜಾಗಿನಿಂತಿದೆ. ಸದ್ಯ ಈಗಾಗಲೇ ರಾಜಧಾನಿಯಲ್ಲಿ ಹಲವೆಡೆ ಬೀದಿನಾಯಿಗಳ ಕಾಟ ಇನ್ನೂ ಜೀವಂತವಾಗಿದ್ದು, ಇದೀಗ ಕೋಟಿ ಕೋಟಿ ವೆಚ್ಚದಲ್ಲಿ ವ್ಯಾಕ್ಸಿನ್ ಕೊಡ್ತೀವೆ ಅಂತಾ ಹೊರಟಿರೋ ಪಾಲಿಕೆ ಎಷ್ಟರಮಟ್ಟಿಗೆ ಬೀದಿನಾಯಿಗಳನ್ನ ನಿಯಂತ್ರಣ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.