Bengaluru: ನನ್ನ ಗರ್ಲ್ಫ್ರೆಂಡ್ಗಾಗಿ ಆಟೋ ಓಡಿಸುತ್ತೇನೆ; ಬೆಂಗಳೂರಿನ 74 ವರ್ಷದ ನಿವೃತ್ತ ಇಂಗ್ಲಿಷ್ ಲೆಕ್ಚರರ್ ಕತೆಯಿದು
Inspiring Story: ನನ್ನ ಮತ್ತು ಹೆಂಡತಿಯ ಖರ್ಚಿಗಾಗಿ ನಿವೃತ್ತಿಯ ನಂತರ ಆಟೋ ಓಡಿಸಲು ಶುರು ಮಾಡಿದೆ. ಈಗ ನನಗೆ ನಾನೇ ಬಾಸ್, ರಸ್ತೆಗೆ ನಾನೇ ರಾಜ ಎಂದು ಬೆಂಗಳೂರಿನ ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಪಟ್ಟಾಭಿ ರಾಮನ್ ತಮ್ಮ ಕತೆ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು: ಭಾರತದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಎಷ್ಟೋ ವಿದ್ಯಾವಂತರು ಕೂಡ ಕೂಲಿ ಕೆಲಸ, ಆಟೋ ಓಡಿಸುವುದು ಮುಂತಾದ ಕೆಲಸಗಳನ್ನು ಮಾಡುವಂತಾಗಿದೆ. ಬೆಂಗಳೂರಿನಲ್ಲಿ ನೀವೊಮ್ಮೆ ಕಣ್ಣಾಡಿಸಿದರೆ ಸಾವಿರಾರು ಆಟೋಗಳು ಕಾಣಸಿಗುತ್ತವೆ. ಆದರೆ, 74 ವರ್ಷದ ನಿವೃತ್ತ ಇಂಗ್ಲಿಷ್ ಪ್ರೊಫೆಸರ್ ಒಬ್ಬರು ಆಟೋ ಚಲಾಯಿಸಿ ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿನ (Bangalore) ಈ ವೃದ್ಧ ಪಟಪಟನೆ ಇಂಗ್ಲಿಷ್ ಮಾತನಾಡುತ್ತಾ ಆಟೋ ಓಡಿಸುವ ಪಟ್ಟಾಭಿ ರಾಮನ್ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲಿಷ್ ಉಪನ್ಯಾಸಕರಾಗಿ 60ನೇ ವಯಸ್ಸಿನಲ್ಲಿ ನಿವೃತ್ತರಾದ ಇವರು 14 ವರ್ಷಗಳಿಂದ ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ.
ನಿಕಿತಾ ಅಯ್ಯರ್ ಆಟೋದಲ್ಲಿ ತೆರಳುವಾಗ 45 ನಿಮಿಷಗಳ ಪಟ್ಟಾಭಿ ರಾಮನ್ ಅವರೊಂದಿಗೆ ಇಂಗ್ಲಿಷ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಸುಶಿಕ್ಷಿತ ಆಟೋ ಡ್ರೈವರ್‌ನೊಂದಿಗಿನ ವಿಡಿಯೋವನ್ನು ಲಿಂಕ್ಡ್ಇನ್ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಇದಾದ ನಂತರ ಪಟ್ಟಾಭಿ ರಾಮನ್ ಕಥೆ ಬೆಳಕಿಗೆ ಬಂದಿತು. ಈ ಆಟೋ ಡ್ರೈವರ್‌ನ ನಿರರ್ಗಳವಾದ ಇಂಗ್ಲಿಷ್‌ನಿಂದ ನಿಕಿತಾ ಮೊದಲು ಅಚ್ಚರಿಗೊಳಗಾಗಿದ್ದರು. ಇದೇ ಕಾರಣಕ್ಕೆ ಅವರು ವಿಡಿಯೋ ಮಾಡಿಕೊಂಡರು. ನಂತರ ಅವರು ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಎಂಬುದು ಆಕೆಗೆ ತಿಳಿಯಿತು.
ಕ್ಯಾಬ್, ಆಟೋ ಸಿಗದ ಕಾರಣದಿಂದ ಆಫೀಸ್‌ಗೆ ತಡವಾಗಿ ಹೋಗುತ್ತಿರುವ ಬಗ್ಗೆ ಚಿಂತಿಸುತ್ತಿದ್ದ ನಿಕಿತಾ, ಬೆಂಗಳೂರಿನ ಇನ್ನೊಂದು ತುದಿಯಲ್ಲಿರುವ ತನ್ನ ಕಛೇರಿಯನ್ನು ತಲುಪಲು ಸಹಾಯ ಮಾಡಿ ಎಂದು ಪಟ್ಟಾಭಿ ರಾಮನ್ ಅವರ ಆಟೋವನ್ನು ಅಡ್ಡ ಹಾಕಿದ್ದಳು. ಅದಕ್ಕೆ ಉತ್ತರಿಸಿದ ಅವರು “ದಯವಿಟ್ಟು ಬನ್ನಿ ಮೇಡಂ, ನಿಮಗೆ ಎಷ್ಟು ಬೇಕೋ ಅಷ್ಟನ್ನು ನೀವು ಪಾವತಿ ಮಾಡಿ” ಎಂದು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಹೇಳಿದ್ದನ್ನು ಕೇಳಿ ಕುತೂಹಲಗೊಂಡ ನಿಕಿತಾ ಅವರ ವಿಡಿಯೋ ಮಾಡಿಕೊಂಡಿದ್ದಾರೆ.
ಪಟ್ಟಾಭಿ ರಾಮನ್ ಅವರು ಕಳೆದ 14 ವರ್ಷಗಳಿಂದ ಆಟೋ ಓಡಿಸುತ್ತಿದ್ದ ಬಗ್ಗೆ ಬಹಳ ಮನೋಜ್ಞವಾಗಿ ಮಾತನಾಡಿದ್ದಾರೆ. ಅದಕ್ಕೂ ಮುನ್ನ ಮುಂಬೈನ ಪೊವಾಯಿಯ ಕಾಲೇಜಿನಲ್ಲಿ ಅವರು ಸುಮಾರು 20 ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಅವರು ಕರ್ನಾಟಕದಲ್ಲಿ ತಮ್ಮ ಹುಟ್ಟೂರಿನಲ್ಲಿ ಕೆಲಸ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಂದರ್ಶನಕ್ಕೆ ಹೋದಾಗ ತಮ್ಮ ಜಾತಿಯ ಬಗ್ಗೆಯೇ ಪ್ರಶ್ನೆ ಕೇಳುತ್ತಿದ್ದುದರಿಂದ ಅವರು ರೋಸಿಹೋಗಿದ್ದರು. ಈ ಬಗ್ಗೆ ಅವರು ವಿಡಿಯೋದಲ್ಲಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡಿದ್ದರಿಂದ ಪಿಂಚಣಿ ಹಣ ಸಿಗಲಿಲ್ಲ. ಇದರಿಂದ ಅವರು ಕರ್ನಾಟಕಕ್ಕೆ ಹಿಂತಿರುಗಬೇಕಾಯಿತು. ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ನಂತರ ಅವರು ದಿನನಿತ್ಯದ ಖರ್ಚುಗಳನ್ನು ಪೂರೈಸಲು ಬೆಂಗಳೂರಿನಲ್ಲಿ ಆಟೋ ಓಡಿಸಲು ಪ್ರಾರಂಭಿಸಿದರು. ಪ್ರಸ್ತುತ 72 ವರ್ಷದ ಪತ್ನಿಯೊಂದಿಗೆ ಅವರು ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದಾರೆ.
‘ನಾನು ಶಿಕ್ಷಕನಾಗಿದ್ದಾಗಲೂ ಸರಿಯಾಗಿ ಸಂಬಳ ಸಿಗುತ್ತಿರಲಿಲ್ಲ. ಖಾಸಗಿ ಕಾಲೇಜಾದ್ದರಿಂದ 10ರಿಂದ 15 ಸಾವಿರ ರೂ. ಸಂಬಳ ಸಿಗುತ್ತಿತ್ತು. ಖಾಸಗಿ ಸಂಸ್ಥೆಯಾಗಿದ್ದರಿಂದ ನನಗೆ ಪಿಂಚಣಿಯೂ ಸಿಗಲಿಲ್ಲ. ಆಟೋ ರಿಕ್ಷಾ ಓಡಿಸುವುದರಿಂದ ನನಗೆ ದಿನಕ್ಕೆ ಕನಿಷ್ಠ 700-1500 ರೂ. ಸಿಗುತ್ತದೆ. ಇದು ನನಗೆ ಮತ್ತು ನನ್ನ ಗರ್ಲ್ಫ್ರೆಂಡ್ (ನಾನು ನನ್ನ ಹೆಂಡತಿಯನ್ನು ಈಗಲೂ ಗರ್ಲ್ಫ್ರೆಂಡ್ ಎಂದೇ ಕರೆಯುವುದು)ಗೆ ಸಾಕು’ ಎಂದು ಪಟ್ಟಾಭಿ ರಾಮನ್ ನಕ್ಕು ತಮ್ಮ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.
74ನೇ ವಯಸ್ಸಿನಲ್ಲೂ ದಿನಕ್ಕೆ 9ರಿಂದ 10 ಗಂಟೆಗಳ ಕಾಲ ಕೆಲಸ ಮಾಡುವ ಪಟ್ಟಾಭಿ ರಾಮನ್ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಹೆಂಡತಿಯ ಬಗ್ಗೆ ಮಾತನಾಡುತ್ತಾ, ತನ್ನ ಹಳೆಯ ಕತೆಯನ್ನು ಹೇಳುತ್ತಾ ಖುಷಿಖುಷಿಯಾಗಿರುವ ಅವರನ್ನು ನೋಡಿದರೆ ಎಂಥವರಿಗೂ ಜೀವನೋತ್ಸಾಹ ಹೆಚ್ಚುತ್ತದೆ. ಪಟ್ಟಾಭಿರಾಮನ್ ಅವರಿಗೆ ಮಗ ಕೂಡ ಇದ್ದರೂ ಅವರು ತಮ್ಮ ಮಕ್ಕಳ ಮೇಲೆ ಅವಲಂಬಿತರಾಗಲು ಇಷ್ಟಪಡದೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
“ನಾನು ನನ್ನ ರಸ್ತೆಯ ರಾಜ, ನಾನು ಯಾವಾಗ ಬೇಕಾದರೂ ನನ್ನ ಆಟೋವನ್ನು ರಸ್ತೆಗೆ ಇಳಿಸಬಹುದು. ಸಾಕಾಯಿತೆಂದರೆ ಮನೆಗೆ ಹೋಗಬಹುದು. ನನಗೆ ಈಗ ಯಾರೂ ಬಾಸ್ ಇಲ್ಲ. ನನಗೆ ನಾನೇ ಬಾಸ್” ಎಂದು ಪಟ್ಟಾಭಿ ರಾಮನ್ ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ: Inspiring Story: ಸಾಫ್ಟ್ವೇರ್ ಉದ್ಯೋಗ ಬಿಟ್ಟು ಭಾರತೀಯ ಸೇನೆ ಸೇರಿದ ಬೆಂಗಳೂರಿನ ಇಂಜಿನಿಯರ್
Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ