
ಬೆಂಗಳೂರು, ಆಗಸ್ಟ್ 29: ಬೆಂಗಳೂರಿನ (Bengaluru) ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧೆಡೆ ಕಾಣಿಸಿಕೊಳ್ಳುವ ಧೂಳು ಹಾಗೂ ವಾಹನಗಳ ಹೊಗೆಯಿಂದ ವಾಯುಮಾಲಿನ್ಯ (Air pollution) ಹೆಚ್ಚಾಗುತ್ತಿದೆ. ಇದರ ಪರಿಣಾಮ ಶ್ವಾಸಕೋಶ ಮತ್ತು ಹೃದಯದ ಆರೋಗ್ಯದ ಮೇಲಷ್ಟೇ ಅಲ್ಲದೆ, ಚರ್ಮ ಹಾಗೂ ಕೂದಲಿನ ಆರೋಗ್ಯದ ಮೇಲೂ ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನಿರಂತರವಾಗಿ ಧೂಳು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಳ್ಳುವವರು ಕೂದಲು ಹಾಗೂ ನೆತ್ತಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯವಾಗಿದೆ.
ಕೂದಲು ಉದುರುವಿಕೆಗೆ ಜೆನೆಟಿಕ್ಸ್, ಹಾರ್ಮೋನ್‌ಗಳ ಬದಲಾವಣೆ ಹಾಗೂ ಒತ್ತಡ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ ‘ಅಲೋಪೆಸಿಯಾ ಏರಿಯಾಟಾ’ ಎಂಬ ಆಟೋಇಮ್ಯೂನ್ ಕಾಯಿಲೆಗೆ ಪರಿಸರದ ಕೆಲವು ಅಂಶಗಳು ಪ್ರಚೋದಕವಾಗುವ ಸಾಧ್ಯತೆಯಿದೆ. ಈ ಕಾಯಿಲೆಯಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯೇ ತಪ್ಪಾಗಿ ಕೂದಲಿನ ಕಿರುಚೀಲಗಳ ಮೇಲೆ ದಾಳಿ ಮಾಡುವುದರಿಂದ ಕೂದಲು ಉದುರುವ ಸಾಧ್ಯತೆ ಇದೆ ಎಂದು ಚರ್ಮರೋಗ ತಜ್ಞೆ ಡಾ. ಸವಿತಾ ಸೋಮಯ್ಯ ಹೇಳಿದ್ದಾರೆ.
ವಾಯುಮಾಲಿನ್ಯದಿಂದ ಉಂಟಾಗುವ ಆಕ್ಸಿಡೇಟಿವ್ ಸ್ಟ್ರೆಸ್ ಕೂಡ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಈಗಾಗಲೇ ಜೆನೆಟಿಕ್ ಆಗಿ ಸೂಕ್ಷ್ಮವಾಗಿರುವವರಲ್ಲಿ ಮಾಲಿನ್ಯವು ಸಮಸ್ಯೆಯನ್ನು ಮತ್ತಷ್ಟು ಪ್ರಚೋದಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರತಿದಿನ ಧೂಳು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಳ್ಳುವವರು ಕೂದಲು ಹಾಗೂ ಸ್ಕಾಲ್ಪ್ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಉತ್ತಮ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ಸೂಕ್ತ ಕೂದಲಿನ ಆರೈಕೆಯ ಜತೆಗೆ ಕೂದಲು ಉದುರುವಿಕೆ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.
ಧೂಳು ಮತ್ತು ಮಾಲಿನ್ಯದಿಂದ ಚರ್ಮ ಹಾಗೂ ಕೂದಲಿನ ಸಮಸ್ಯೆ ಎದುರಾಗುತ್ತಿದೆ ಎಂಬ ಅನುಭವವನ್ನು ಬೆಂಗಳೂರಿನ ಕೆಲವರು ಹಂಚಿಕೊಂಡಿದ್ದಾರೆ. ಹೊರಗೆ ಹೋದಾಗ ತಲೆಕೂದಲು ಮತ್ತು ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಮನೆಯಲ್ಲಿದ್ದಾಗ ಅಂತಹ ಸಮಸ್ಯೆ ಕಂಡುಬರುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಾಯುಗುಮಟ್ಟ ಸಾಧಾರಣ
ಒಟ್ಟಿನಲ್ಲಿ, ಬೆಂಗಳೂರಿನ ಧೂಳು, ಸಿಮೆಂಟ್ ಕಣಗಳು ಹಾಗೂ ವಾಹನಗಳ ಹೊಗೆಯಿಂದ ಶ್ವಾಸಕೋಶವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಚರ್ಮ ಮತ್ತು ಕೂದಲಿನ ಆರೋಗ್ಯದ ಬಗ್ಗೆಯೂ ಅಷ್ಟೇ ಗಮನ ಹರಿಸುವುದು ಅಗತ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ