
ಬೆಂಗಳೂರು, ಸೆಪ್ಟೆಂಬರ್ 29: ಕೆಲದಿನಗಳ ಹಿಂದೆ ಯುಕೆ ಇಂದ ಎಂ.ಟೆಕ್ ಮುಗಿಸಿಕೊಂಡು ಬಂದಿದ್ದ ಉನ್ನತ ಶಿಕ್ಷಣ ಪಡೆದ ವಾಕಾ ಭಾಸ್ಕರ್ ರೆಡ್ಡಿ ಎಂಬ ಯುವಕನೊಬ್ಬ ಹಣದ ಆಸೆಗೆ ಬಿದ್ದು ನೆರೆಮನೆಯ ಬಾಲಕನನ್ನೇ ಅಪಹರಿಸಿ ಹತ್ಯೆ ಮಾಡಿರುವ ಕ್ರೂರ ಘಟನೆ ನಡೆದಿತ್ತು. ಈ ಪ್ರಕರಣ ಸಂಬಂಧ ಆರೋಪಿಗಳಾದ ವಾಕಾ ಭಾಸ್ಕರ್ ರೆಡ್ಡಿ ಹಾಗೂ ಕೊಂಡಲರೆಡ್ಡಿಯನ್ನು ಬಂಧಿಸಿರುವ ಚಿಕ್ಕಜಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ವೇಳೆ ಭಾಸ್ಕರ್‌ನ ಮಾಸ್ಟರ್ ಪ್ಲಾನ್ ಬಯಲಾಗಿದೆ.
ವಿಚಾರಣೆ ವೇಳೆ ಆರೋಪಿ ಭಾಸ್ಕರ್ ಕೊಲೆಯ ಹಿಂದಿನ ಸಂಚಿನ ಬಗ್ಗೆ ಸಂಪೂರ್ಣವಾಗಿ ಬಾಯಿ ಬಿಟ್ಟಿದ್ದಾನೆ. ಆರೋಪಿ ಹೇಳಿರುವಂತೆ, ಅಪಹರಣಕ್ಕೂ ಮುನ್ನವೇ ಬಾಲಕ ಪ್ರಜ್ವಲ್‌ನಿಂದ ಎರಡು ಪ್ರತ್ಯೇಕ ವಿಡಿಯೋಗಳನ್ನು ರೆಕಾರ್ಡ್ ಮಾಡಿಸಲಾಗಿತ್ತು. ಒಂದರಲ್ಲಿ ಬಾಲಕ ರೋದಿಸುತ್ತಿರುವ ದೃಶ್ಯವಿದ್ದರೆ, ಮತ್ತೊಂದರಲ್ಲಿ “ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ, ಹಣ ಕೊಟ್ಟು ಕಾಪಾಡಿ” ಎಂದು ಬಾಲಕನಿಂದ ಹೇಳಿಸಲಾಗಿತ್ತು. ವಿಡಿಯೋ ರೆಕಾರ್ಡ್ ಮಾಡಿದ ತಕ್ಷಣವೇ ಭಾಸ್ಕರ್ ಮತ್ತು ಕೊಂಡಲರೆಡ್ಡಿ ಸೇರಿ ಬಾಲಕನನ್ನು ಹತ್ಯೆ ಮಾಡಿದ್ದರು.
ಶವವನ್ನು ಬಿಸಾಡಿ ಬಂದಿದ್ದ ಆರೋಪಿ ಭಾಸ್ಕರ್, ತಾನೂ ಪ್ರಜ್ವಲ್ಗಾಗಿ ಹುಡುಕಾಟ ನಡೆಸುವವನಂತೆ ನಟಿಸಿದ್ದ. ಪೊಲೀಸರಿಗೆ ಸುಳಿವು ಸಿಗದಂತೆ ಯಾವುದೇ ದಾಖಲೆಗಳಿಲ್ಲದೆ ಮೆಜೆಸ್ಟಿಕ್‌ನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದು, ಅದರ ಮೂಲಕ ಈ ವಿಡಿಯೋಗಳನ್ನು ಪೋಷಕರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲು ಸ್ಕೆಚ್ ಹಾಕಲಾಗಿತ್ತು.
ಯುಕೆ ಇಂದ ಎಂ.ಟೆಕ್ ಮುಗಿಸಿಕೊಂಡು ಬಂದಿದ್ದ ಉನ್ನತ ಶಿಕ್ಷಣ ಪಡೆದ ವಾಕಾ ಭಾಸ್ಕರ್ ರೆಡ್ಡಿ ಎಂಬ ಯುವಕ, ಇತ್ತೀಚೆಗೆ ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸಲು ಹಾಗೂ ಸುಲಭವಾಗಿ ಹಣ ಸಂಪಾದಿಸಲು ಯೋಜಿಸಿದ ಆತ, ತನಗೆ ಪರಿಚಯವಿದ್ದ ನೆರೆಮನೆಯ ಬಾಲಕನನ್ನೇ ಟಾರ್ಗೆಟ್ ಮಾಡಿದ್ದ. ಘಟನೆಯ ದಿನ ಬಾಲಕನಿಗೆ ಆಮಿಷ ಒಡ್ಡಿ ಕರೆದೊಯ್ದ ಆರೋಪಿ, ತಕ್ಷಣವೇ ಆತನನ್ನು ಹತ್ಯೆ ಮಾಡಿದ್ದಾನೆ. ಬಾಲಕ ಜೀವಂತವಾಗಿದ್ದರೆ ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಮೊದಲೇ ಕೊಲೆ ಮಾಡಿ, ಆ ನಂತರ ಬಾಲಕನ ಕುಟುಂಬಸ್ಥರಿಗೆ ಕರೆ ಮಾಡಿ ಭಾರಿ ಮೊತ್ತದ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ