
ಬೆಂಗಳೂರು, ಏಪ್ರಿಲ್ 27: ನಗರದ ಕಬ್ಬನ್ ಪಾರ್ಕ್‌ನಲ್ಲಿ ಕಳೆದ 20 ದಿನಗಳ ಹಿಂದೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದ ಕಬ್ಬನ್ ಪಾರ್ಕ್ ಪೊಲೀಸರು ಕೊನೆಗೂ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದಾರೆ. ಮೃತ ವ್ಯಕ್ತಿಯನ್ನು ರಾಜಸ್ಥಾನದ ಸುರೇಶ್ ಕುಮಾರ್ ಪುರೋಹಿತ್ ಎಂದು ಗುರುತಿಸಲಾಗಿದ್ದು, ಈತನದ್ದು ಮಾಮೂಲಿ ಆತ್ಮಹತ್ಯೆ ಅಲ್ಲ. ಬದಲಾಗಿ ಹೊಡೆದು, ಬಡಿದಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದ ಕಾರಣ ಮನನೊಂದು ಸುರೇಶ್ ಕುಮಾರ್ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿರೋದು ತನಿಖೆ ವೇಳೆ ಗೊತ್ತಾಗಿದೆ.
ಮೃತ ಸುರೇಶ್ ಕುಮಾರ್ ಕುಟುಂಬ ಮೂಲತಃ ರಾಜಸ್ಥಾನದವರಾಗಿದ್ದು, ಅಲ್ಲಿ ಜಬರರಾಮ್ ಎಂಬಾತನ ಜೊತೆಗೆ ಈತ ಜಗಳ ಮಾಡಿಕೊಂಡಿದ್ದ. ಜಗಳ ವಿಕೋಪಕ್ಕೆ ಹೋಗಿ ಜಬರರಾಮ್ ಮತ್ತು ಸುರೇಶ್ ಪರಸ್ಪರ ಹಲ್ಲೆ ಕೂಡ ನಡೆಸಿದ್ದರು. ಬಳಿಕ ಬೆಂಗಳೂರಿನ ಸ್ನೇಹಿತರಿಂದ ಪಾಠ ಕಲಿಸೋದಾಗಿ ಜಬರರಾಮ್ ಸುರೇಶ್ಗೆ ಬೆದರಿಕೆ ಕೂಡ ಹಾಕಿದ್ದ. ಅದಾದ ಬಳಿಕ ತನ್ನ ಊರಿನಿಂದ ಸುರೇಶ್ ಕುಮಾರ್ ಬೆಂಗಳೂರಿಗೆ ಬಂದಿದ್ದರೆ, ಮಾರ್ಚ್ ಕೊನೆಯ ವಾರದಲ್ಲಿ ಜಬರರಾಮ್ ಕೂಡ ನಗರಕ್ಕೆ ಆಗಮಿಸಿದ್ದ. ಈತ ಸ್ನೇಹಿತರ ಬಳಿ ಸುರೇಶ್ ಕುಮಾರ್ ಮೇಲೆ ಹಲ್ಲೆ ನಡೆಸುವಂತೆ ತಿಳಿಸಿದ್ದ. ಪ್ರವೀಣ್, ಭಾವೇಶ್, ನಿತೇಶ್ ಮತ್ತು ಮುಖೇಶ್ ಎಂಬುವವರಿಗೆ ಈ ಬಗ್ಗೆ ಸೂಚಿಸಿದ್ದ. ಆ ಬಗ್ಗೆ ಮಾಹಿತಿ ತಿಳಿದ ಸುರೇಶ್ ಕುಮಾರ್ ವಿಚಾರವನ್ನ ಸಹೋದರನಿಗೆ ಕರೆಮಾಡಿ ಹೇಳಿದ್ದ. ಹೋಟೆಲ್ನಲ್ಲಿ ಊಟ ಮುಗಿಸಿ ಸುರೇಶ್ ಹೊರಟಿದ್ದ ವೇಳೆ ಆರೋಪಿಗಳು ಹಲ್ಲೆ ಮಾಡಿರೋದಾಗಿ ದೂರು ಕೂಡ ದಾಖಲಾಗಿತ್ತು.
ಇದನ್ನೂ ಓದಿ: ಎಂಗೇಜ್ಮೆಂಟ್ ಆದ ರಾತ್ರಿಯೇ ಯುವತಿ ಪ್ರಿಯತಮನೊಂದಿಗೆ ಪರಾರಿ! ಲವ್ ಜಿಹಾದ್ ಶಂಕೆ
ಇನ್ನು ಇದೇ ವಿಚಾರವಾಗಿ ಮನನೊಂದು ಸುರೇಶ್ ಕುಮಾರ್ ಪುರೋಹಿತ್ ಆತ್ಮಹತ್ಯೆಗೆ ಶರಣಾಗಿರೋದಾಗಿ ಆತನ ಸಹೋದರ ವಾಸನರಾಮ್ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸುರೇಶ್ ಕುಮಾರ್ ಆತ್ಮಹತ್ಯೆ ಸಂಬಂಧ ಐದು ಜನರ ವಿರುದ್ಧ FIR ದಾಖಲಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಶುರುವಾದ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾಗಿದ್ದು, ಕಬ್ಬನ್ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ವ್ಯಕ್ತಿ ಶರಣಾಗಿದ್ದೇಕೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.