AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈತುಂಬಾ ಸಂಬಳ ಬರುತ್ತಿದ್ದರೂ ವಂಚನೆಗಿಳಿದ ಟೆಕ್ಕಿಗಳು: ಡೇಟಿಂಗ್ ಆ್ಯಪ್​ನಲ್ಲಿ​ ಡಿಂಗ್ ಡಿಂಗ್ ಮಾಡಿ ಸಿಕ್ಕಿಬಿದ್ದ ಜೋಡಿ

ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐಷಾರಾಮಿ ಜೀವನಕ್ಕಾಗಿ ಹಣದಾಸೆಗೆ ಬಿದ್ದ ಐಟಿ ಉದ್ಯೋಗಿಗಳ ಜೋಡಿ, ಡೇಟಿಂಗ್ ಆ್ಯಪ್ ಮೂಲಕ ಕಳ್ಳತನವೆಸಗಿದ್ದಾರೆ. ಓರ್ವ ಯುವಕನಿಗೆ ಪ್ರಜ್ಞೆ ತಪ್ಪಿಸಿ 6.89 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಐಟಿ ಉದ್ಯೋಗಿಗಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಕೈತುಂಬಾ ಸಂಬಳ ಬರುತ್ತಿದ್ದರೂ ವಂಚನೆಗಿಳಿದ ಟೆಕ್ಕಿಗಳು: ಡೇಟಿಂಗ್ ಆ್ಯಪ್​ನಲ್ಲಿ​ ಡಿಂಗ್ ಡಿಂಗ್ ಮಾಡಿ ಸಿಕ್ಕಿಬಿದ್ದ ಜೋಡಿ
ಬಂಧಿತ ಐಟಿ ಕಂಪನಿ ಉದ್ಯೋಗಿಗಳು
ಗಂಗಾಧರ​ ಬ. ಸಾಬೋಜಿ
|

Updated on:Nov 17, 2025 | 6:24 PM

Share

ಬೆಂಗಳೂರು, ನವೆಂಬರ್​ 17: ಅವರಿಬ್ಬರೂ ಐಟಿ ಕಂಪನಿಯ (IT company) ಉದ್ಯೋಗಿಗಳು. ಒಳ್ಳೆಯ ಕೆಲಸ, ಕೈ ತುಂಬಾ ಸಂಬಳ ಇದ್ದರೂ, ಅಡ್ಡದಾರಿಯಲ್ಲಿ ದುಡ್ಡು ಮಾಡುವ ಚಟ ಇಬ್ಬರಿಗೂ ಇತ್ತು. ವೀಕೆಂಡ್ ಪಾರ್ಟಿ ಮೋಜು ಮಸ್ತಿ ಅಂತ ಎಂಜಾಯ್ ಮಾಡುತ್ತಿದ್ದ ಆ ಜೋಡಿ ಹಣದ (money) ದುರಾಸೆಗೆ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಡೇಟಿಂಗ್ ಆ್ಯಪ್ ಮೂಲಕ ವಂಚನೆ

ಡೇಟಿಂಗ್ ಆ್ಯಪ್ ಮೂಲಕ ಯುವಕನಿಗೆ ವಂಚಿಸಿ, ಹಣ ಮತ್ತು ಚಿನ್ನ ದೋಚಿದ್ದ ಖತರ್ನಾಕ್ ಜೋಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮಿಳುನಾಡು ಮೂಲದ ಕವಿಪ್ರಿಯಾ ಹಾಗೂ ಆಕೆಯ ಬಾಯ್‌ಫ್ರೆಂಡ್ ಹರ್ಷವರ್ಧನ ನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಕೂಡ ತಮಿಳುನಾಡು ಮೂಲದವರಾಗಿದ್ದು, ನಗರದ ಸಾಪ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಡೇಟಿಂಗ್ ಆ್ಯಪ್​ನಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದ ಈ ಜೋಡಿ ನಗರದ ಯುವಕನಿಗೆ ಡೇಟಿಂಗ್ ಆ್ಯಪ್​ನಲ್ಲೇ ಬಲೆ ಬೀಸಿದ್ದರು.

ಇದನ್ನೂ ಓದಿ: ಬೆಂಗಳೂರು: ಶಾಂತಿ ನಗರದಲ್ಲಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ, ಆಘಾತಕಾರಿ ವಿಡಿಯೋ ವೈರಲ್

ಯುವಕ ಕೂಡ ಸಾಪ್ಟ್ವೇರ್ ಇಂಜಿನಿಯರ್ ಆಗಿದ್ದು, ಕೈ ತುಂಬ ಸಂಬಳ ಪಡೆಯುತ್ತಿದ್ದ. ಯುವಕನ ಮಾಹಿತಿ ಸಂಗ್ರಹಿಸಿದ ಯುವತಿ ಆತನ ಜೊತೆ ಫ್ರೆಂಡ್ ಶಿಫ್​ ಮಾಡಿದ್ದಳು. ಇಬ್ಬರು ಕೂಡ ಒಂದು ತಿಂಗಳಿಂದ ಪರಿಚಿತರಾಗಿದ್ದು, ನವೆಂಬರ್ ಹನ್ನೊಂದರಂದು ಇಂದಿರಾನಗರದ ಲಾಡ್ಜ್​ವೊಂದರಲ್ಲಿ‌ ಭೇಟಿಯಾಗಿದ್ದರು. ಇಬ್ಬರು ಒಟ್ಟಿಗೆ ಪಾರ್ಟಿ ಮಾಡಿ ಊಟ ಮಾಡಿದ್ದಾರೆ. ನಂತರ ಸ್ವಲ್ಪ ಹೊತ್ತಿಗೆ ಯುವಕ ಪ್ರಜ್ನೆ ತಪ್ಪಿ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಕವಿಪ್ರಿಯಾ ಮತ್ತು ಆತನ ಲವರ್ ಯುವಕನ ಮೇಲಿದ್ದ ಬ್ರಾಸ್ ಲೈಟ್, ಚೈನ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

6.89 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ 

ಸುಮಾರು 6.89 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 12 ಸಾವಿರ ರೂ. ಮೌಲ್ಯದ ಹೆಡ್‌ಸೆಟ್ ಮತ್ತು 10 ಸಾವಿರ ರೂ. ನಗದು ದೋಚಿದ್ದ ಜೋಡಿ ಬ್ರಾಸ್ ಲೈಟ್​​ನ್ನು ನಗರದಲ್ಲಿ ಆಡ ಇಟ್ಟು ತಮಿಳುನಾಡು ಸೇರಿದ್ದರು. ಇಂದಿರಾನಗರ ಪೊಲೀಸರು ಕೇಸ್ ದಾಖಲಿಸಿ ತಮಿಳುನಾಡಿನಲ್ಲಿ ಈ ಜೋಡಿಯನ್ನ ಬಂಧಿಸಿ ಕರೆ ತಂದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಹೈ‌ಫೈ ಲೈಫ್ ಲೀಡ್ ಮಾಡಲು ಇದ್ದಬದ್ಧ ಹಣ ಖರ್ಚು ಮಾಡಿದ್ದ ಈ ಜೋಡಿ, ಪುನಃ ಹಣ ಹೊಂದಿಸಲು ಡೇಟಿಂಗ್ ಆ್ಯಪ್ ಮೊರೆ ಹೋಗಿ ಅಮಾಯಕ ಯುವಕರಿಗೆ ಗಾಳ ಹಾಕುತ್ತಿದ್ದರಂತೆ.

ಇದನ್ನೂ ಓದಿ: ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ ಬೈಕ್ ಕದ್ದು ಎಸ್ಕೇಪ್ ಆದ ಕಳ್ಳ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಸದ್ಯ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನ ಬಂಧಿಸಿದ್ದಾರೆ. ಚೆನ್ನೈನಲ್ಲಿ ಒಂದು ಆಭರಣ ಆಡವಿಟ್ಟಿದ್ದು, ಜಪ್ತಿ ಮಾಡಲು ತೆರಳಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕವಿಪ್ರಿಯಾ ತನ್ನ ಬಾಯ್‌ಫ್ರೆಂಡ್ ಹರ್ಷವರ್ಧನನೊಂದಿಗೆ ಸೇರಿ ಈ ಹನಿಟ್ರ್ಯಾಪ್ ಅನ್ನು ಯೋಜಿಸಿರುವುದು ಬೆಳಕಿಗೆ ಬಂದಿದೆ. ಕೈ ತುಂಬ ಸಂಬಳ ಬರ್ತಿದ್ರು, ಮೋಜು ಮಸ್ತಿ ದುರಾಸೆಯಿಂದ ಇಬ್ಬರು ಟೆಕ್ಕಿಗಳು ಈಗ ಜೈಲು ಸೇರುವಂತಾಗಿದೆ.

ವರದಿ: ವಿಕಾಸ್, tv9,ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:22 pm, Mon, 17 November 25