
ಬೆಂಗಳೂರು, ಸೆಪ್ಟೆಂಬರ್ 28: 2026ರ ಆಗಸ್ಟ್‌ನಲ್ಲಿ ಪ್ರತಿದಿನ ಸುಮಾರು 2,500 ಹೊಸ ವಾಹನಗಳು ಬೆಂಗಳೂರಲ್ಲಿ ರಸ್ತೆಗಿಳಿದಿದ್ದು, ಅವುಗಳಲ್ಲಿ ಸುಮಾರು 430 ಎಲೆಕ್ಟ್ರಿಕ್ ವಾಹನಗಳು (EV) ಸೇರಿವೆ. ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಈ ತಿಂಗಳಲ್ಲಿ ಕರ್ನಾಟಕದಲ್ಲಿ ನೋಂದಣಿಯಾದ ಒಟ್ಟು ಎಲೆಕ್ಟ್ರಿಕ್ ವಾಹನಗಳ ಪೈಕಿ ಅರ್ಧದಷ್ಟು ಬೆಂಗಳೂರಿನಲ್ಲೇ ಆಗಿವೆ. ಆ ಮೂಲಕ ರಾಜ್ಯದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಬೆಂಗಳೂರಿನ ಪ್ರಾಬಲ್ಯ ಮುಂದುವರಿದಿದೆ.
ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಒಟ್ಟು 76,508 ಹೊಸ ವಾಹನಗಳು ನೋಂದಣಿಯಾಗಿದ್ದು, ಅವುಗಳಲ್ಲಿ 13,389 ಎಲೆಕ್ಟ್ರಿಕ್ ವಾಹನಗಳಾಗಿವೆ. ಅಂದರೆ, ತಿಂಗಳಲ್ಲಿ ನಗರದಲ್ಲಿ ನೋಂದಣಿಯಾದ ಒಟ್ಟು ಹೊಸ ವಾಹನಗಳ ಪೈಕಿ ಶೇ.17.5ರಷ್ಟು ಎಲೆಕ್ಟ್ರಿಕ್ ವಾಹನಗಳಾಗಿವೆ. ಸರಿಸುಮಾರು ಪ್ರತಿ ಆರು ಹೊಸ ವಾಹನಗಳಲ್ಲಿ ಒಂದು ಎಲೆಕ್ಟ್ರಿಕ್ ವಾಹನವಾಗಿದೆ. ಇವುಗಳಲ್ಲಿ 9,453 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹಾಗೂ 1,258 ಎಲೆಕ್ಟ್ರಿಕ್ ಕಾರುಗಳು ಸೇರಿವೆ. ಅಂದರೆ, ಬೆಂಗಳೂರಿನ ರಸ್ತೆಗಳಿಗೆ ಪ್ರತಿದಿನ ಸರಾಸರಿ 300 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು 40 ಎಲೆಕ್ಟ್ರಿಕ್ ಕಾರುಗಳು ಸೇರ್ಪಡೆಯಾಗಿವೆ. ಇದರ ಜೊತೆಗೆ ಇತರ ವರ್ಗಗಳಿಗೆ ಸೇರಿದ ಸುಮಾರು 90 ಎಲೆಕ್ಟ್ರಿಕ್ ವಾಹನಗಳು ಪ್ರತಿದಿನ ನೋಂದಣಿಯಾಗಿವೆ.
ಇದನ್ನೂ ಓದಿ: ಫೇಸ್‌ಬುಕ್ ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!
ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನೋಂದಣಿಯಾದ ಒಟ್ಟು ಎಲೆಕ್ಟ್ರಿಕ್ ವಾಹನಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾಲು ಶೇ.71ರಷ್ಟಿದ್ದು, ಎಲೆಕ್ಟ್ರಿಕ್ ಕಾರುಗಳ ಪಾಲು ಶೇ.9ರಷ್ಟಿದೆ. ಕರ್ನಾಟಕದಲ್ಲಿ ಆಗಸ್ಟ್‌ನಲ್ಲಿ ಒಟ್ಟು 26,636 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಬೆಂಗಳೂರಿನಲ್ಲಿ 13,389 ವಾಹನಗಳು ನೋಂದಣಿಯಾಗಿವೆ. ಇದು ರಾಜ್ಯದ ಒಟ್ಟು EV ನೋಂದಣಿಗಳ ಶೇ.50.3ರಷ್ಟಾಗಿದೆ. ಬೆಂಗಳೂರಿನ ಒಟ್ಟಾರೆ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲೂ ನಗರದ ಪ್ರಾಬಲ್ಯ ಮುಂದುವರಿದಿದೆ. ಆಗಸ್ಟ್ 30ರ ವೇಳೆಗೆ ಬೆಂಗಳೂರಿನಲ್ಲಿ 4.9 ಲಕ್ಷಕ್ಕೂ ಹೆಚ್ಚು ನೋಂದಾಯಿತ ಎಲೆಕ್ಟ್ರಿಕ್ ವಾಹನಗಳಿದ್ದರೆ, ಕರ್ನಾಟಕದಲ್ಲಿ ಈ ಸಂಖ್ಯೆ ಸುಮಾರು 8.9 ಲಕ್ಷದಷ್ಟಿತ್ತು. ಅಂದರೆ, ರಾಜ್ಯದ ಒಟ್ಟು ಎಲೆಕ್ಟ್ರಿಕ್ ವಾಹನಗಳ ಪೈಕಿ ಸುಮಾರು ಶೇ.56ರಷ್ಟು ಬೆಂಗಳೂರಿನಲ್ಲಿವೆ.
ಆಗಸ್ಟ್ ವೇಳೆಗೆ ಬೆಂಗಳೂರಿನಲ್ಲಿ 3.8 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು 46,596 ಎಲೆಕ್ಟ್ರಿಕ್ ಕಾರುಗಳಿದ್ದವು. ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಪೈಕಿ 9,922 ಮೋಟಾರ್ ಕ್ಯಾಬ್‌ಗಳು, 6,855 ಪ್ರಯಾಣಿಕರ ತ್ರಿಚಕ್ರ ವಾಹನಗಳು ಹಾಗೂ 9,876 ಸರಕು ಸಾಗಣೆ ತ್ರಿಚಕ್ರ ವಾಹನಗಳು ಸೇರಿವೆ. ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಒಟ್ಟು 2,009 ಎಲೆಕ್ಟ್ರಿಕ್ ಬಸ್‌ಗಳು ನೋಂದಣಿಯಾಗಿವೆ. 2025-26ರಲ್ಲಿ ವಾರ್ಷಿಕ ಎಲೆಕ್ಟ್ರಿಕ್ ವಾಹನ ನೋಂದಣಿಯ ಸಂಖ್ಯೆ 2019-20ರ ಮಟ್ಟಕ್ಕಿಂತ 32 ಪಟ್ಟು ಹೆಚ್ಚಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.