ರಿಹ್ಯಾಬ್‌ನಿಂದ ತಪ್ಪಿಸಿಕೊಂಡ ಯುವಕರಿಂದ ಆಟೋ ಚಾಲಕನ ದರೋಡೆ; ಮದ್ಯ ಮತ್ತು ಸಿಗರೆಟ್​​ಗಾಗಿ ಕೃತ್ಯ!

ಬೆಂಗಳೂರಿನ ಹೊರವಲಯದಲ್ಲಿ, ಮಾದಕ ವ್ಯಸನಕ್ಕೆ ದಾಸರಾಗಿದ್ದ ಇಬ್ಬರು ಯುವಕರು ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು, ಆಟೋ ಚಾಲಕನಿಗೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ಚಾಲಕನಿಗೆ ಹೊಡೆದು, 28,000 ರೂ. ನಗದು, ಮೊಬೈಲ್‌ ಮತ್ತು ಆಟೋವನ್ನು ಕದ್ದಿದ್ದು, ಬಂಧಿತ ಆರೋಫಿಗಳು ಕದ್ದ ಹಣವನ್ನು ಮದ್ಯ ಮತ್ತು ಸಿಗರೇಟ್‌ಗೆ ಖರ್ಚು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ರಿಹ್ಯಾಬ್‌ನಿಂದ ತಪ್ಪಿಸಿಕೊಂಡ ಯುವಕರಿಂದ ಆಟೋ ಚಾಲಕನ ದರೋಡೆ; ಮದ್ಯ ಮತ್ತು ಸಿಗರೆಟ್​​ಗಾಗಿ ಕೃತ್ಯ!
ರಿಹ್ಯಾಬ್‌ನಿಂದ ತಪ್ಪಿಸಿಕೊಂಡ ಯುವಕರಿಂದ ಆಟೋ ಚಾಲಕನ ದರೋಡೆ; ಮದ್ಯ ಮತ್ತು ಸಿಗರೆಟ್​​ಗಾಗಿ ಕೃತ್ಯ!

Updated on: Apr 05, 2026 | 11:23 AM

ಬೆಂಗಳೂರು, ಏಪ್ರಿಲ್ 05: ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದ ಇಬ್ಬರು ಯುವಕರು ಅಪರಾಧ (Crime) ಕೃತ್ಯಕ್ಕೆ ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 21 ವರ್ಷದ ಯುವಕ ಹಾಗೂ 17 ವರ್ಷದ ಅಪ್ರಾಪ್ತ ಸಹಚರನು ಸುಮಾರು ಒಂದು ತಿಂಗಳ ಹಿಂದೆ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು, ವ್ಯಸನದ ಬೇಸರದಿಂದ ದರೋಡೆ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್​ಲೈನ್​ನಲ್ಲಿ ಆಟೋ ಬುಕ್ ಮಾಡಿ, ಗಂಟೆಗಳ ಕಾಲ ಅಲೆದಾಟ

ಈ ಪ್ರಕರಣವು ಮಾರ್ಚ್ 5ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿಯ ರಾಯಸಂದ್ರ ನಿವಾಸಿಯಾದ ಆಟೋ ಚಾಲಕ ದರ್ಶನ ಸಿ.ಆರ್ ಅವರು ನೀಡಿದ ದೂರಿನ ಪ್ರಕಾರ, ಮಾರ್ಚ್ 1ರಂದು ಆರೋಪಿಗಳಿಬ್ಬರೂ ಆ್ಯಪ್​ ಮೂಲಕ ಆಟೋವನ್ನು ಬುಕ್ ಮಾಡಿದ್ದರು. ಅದನ್ನು ಸ್ವೀಕರಿಸಿದ ಚಾಲಕ ಹುಸ್ಕೂರಿನಿಂದ ಇಬ್ಬರು ಪ್ರಯಾಣಿಕರನ್ನು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಬುದಿಗೆರೆ ಕ್ರಾಸ್ ಬಳಿ ಅವರು ಮಾರ್ಗ ಬದಲಾಯಿಸಲು ಹೇಳಿ, ಸ್ನೇಹಿತನ ಮನೆಗೆ ಹೋಗಬೇಕೆಂದು ತಿಳಿಸಿದ್ದಾರೆ. ಕೆಲವು ಗಂಟೆಗಳ ಕಾಲ ಅಲೆದಾಡಿದ ಬಳಿಕ, ಜನರ ಸಂಚಾರವಿಲ್ಲದ ಪ್ರದೇಶದಲ್ಲಿ ವಾಹನ ನಿಲ್ಲಿಸಲು ಸೂಚಿಸಿದ್ದಾರೆ.

ನಂತರ ಚಾಲಕ 1,080 ರೂ. ಪ್ರಯಾಣ ದರ ಕೇಳಿದಾಗ ಸ್ನೇಹಿತನು ಹಣ ಕೊಡುತ್ತಾನೆ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಚಾಲಕ ಹಣಕ್ಕಾಗಿ ಒತ್ತಾಯಿಸಿದರು. ಈ ವೇಳೆ ಅಪ್ರಾಪ್ತ ಬಾಲಕ ಮಾತಿಗಿಳಿದು ಗಮನ ಬೇರೆಡೆಗೆ ಸೆಳೆದಾಗ, ಕನೀಶ್ ಕಲ್ಲಿನಿಂದ ದರ್ಶನ್ ತಲೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ನಿರಂತರವಾಗಿ ಹಲ್ಲೆ ನಡೆಸಿ ಅವರ ನಾಲ್ಕು ಹಲ್ಲುಗಳನ್ನು ಮುರಿದಿದ್ದಾನೆ. ನಂತರ ಇಬ್ಬರೂ ಆಟೋದಲ್ಲಿದ್ದ 28,000 ರೂ. ನಗದು, ಎರಡು ಮೊಬೈಲ್ ಫೋನ್‌ಗಳು ಹಾಗೂ ಆಟೋವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆರೀಪಿಸಲಾಗಿದೆ.

ಈ ಹಿನ್ನೆಲೆ ಇನ್ಸ್‌ಪೆಕ್ಟರ್ ಅಶೋಕ್ ನೇತೃತ್ವದ ತನಿಖಾ ತಂಡ ಮಾರ್ಚ್ 25ರಂದು ಹಾರ್ಲೂರು ಸಮೀಪದ ಪುನರ್ವಸತಿ ಕೇಂದ್ರದಲ್ಲಿ ಕನೀಶ್ನನ್ನು ಬಂಧಿಸಿದೆ. ತನಿಖೆ ವೇಳೆಪುನರ್ವಸತಿ ಕೇಂದ್ರದ ಮಾಲೀಕರ ಮೊಬೈಲ್ ಕದ್ದುಕೊಂಡು ಅದರಿಂದಲೇ ಆಟೋ ಬುಕ್ ಮಾಡಿದ್ದಾಗಿ ಕನೀಶ್ ಒಪ್ಪಿಕೊಂಡಿದ್ದಾನೆ. ಹಣವಿಲ್ಲದ ಕಾರಣ ಚಾಲಕನನ್ನು ದರೋಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾನೆ.

ಇದನ್ನೂ ಓದಿ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್​​: ಪ್ರೀತಿ ಹೆಸರಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ; ದೂರು ದಾಖಲು

ಮದ್ಯ, ಸಿಗರೇಟಿಗೆ ಹಣ ವ್ಯಯ

ಕದ್ದ ಆಟೋವನ್ನು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 5,000 ರೂ.ಗೆ ಮಾರಾಟ ಮಾಡಿದ್ದ ಆರೋಪಿ, ಅದು ತನ್ನ ತಂದೆಯದ್ದು ಎಂದು ಸುಳ್ಳು ಹೇಳಿ, ತಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನಂಬಿಸಿದ್ದ. ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ರೋಗಿಯ ಫೋಟೋವನ್ನೂ ತೋರಿಸಿ ತುರ್ತು ಪರಿಸ್ಥಿತಿ ಎಂದು ಹೇಳಿ ದಾಖಲೆಗಳನ್ನು ನಂತರ ನೀಡುವುದಾಗಿ ಭರವಸೆ ನೀಡಿದ್ದ. ನಂತರ ಕದ್ದ ಹಣ ಮತ್ತು ಆಟೋ ಮಾರಾಟದ ಹಣವನ್ನು ಆರೋಪಿಗಳಿಬ್ಬರೂ ಮದ್ಯ ಹಾಗೂ ಸಿಗರೇಟುಗಳಿಗೆ ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಿಸಿಟಿವಿ ದೃಶ್ಯಗಳು ಹಾಗೂ ಡಿಜಿಟಲ್ ಟ್ರ್ಯಾಕಿಂಗ್ ಆಧಾರವಾಗಿ ತನಿಖೆ ನಡೆಸಿದ ಪೊಲೀಸರು, ಕನೀಶ್ ಪುನಃ ರಿಹ್ಯಾಬ್ ಕೇಂದ್ರಕ್ಕೆ ಮರಳಿದ್ದನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅಪ್ರಾಪ್ತ ಸಹಚರ ಇನ್ನೂ ಪರಾರಿಯಾಗಿದ್ದಾನೆ. ವ್ಯಾಪಾರಿಯ ಮಗನಾದ ಕನೀಶ್ ವ್ಯಸನದ ಕಾರಣ ಕಾಲೇಜು ಬಿಟ್ಟಿದ್ದ. ದಿನಕ್ಕೆ ಕನಿಷ್ಠ ಒಂದು ಸಿಗರೇಟು ಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದ. ರಿಹ್ಯಾಬ್ ಕೇಂದ್ರದಲ್ಲಿ ಸಿಗರೇಟು ಸೇವನೆಗೆ ಅವಕಾಶ ನೀಡದ ಕಾರಣ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದು ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us