AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡ ಕ್ರಮಗಳೇನು? ವಿವರ ನೀಡಲು ಜಿಬಿಎಗೆ ಹೈಕೋರ್ಟ್ ಸೂಚನೆ

Bangaluru potholes High Court: ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಯನ್ನು ಪರಿಹರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಗುಂಡಿ ಮುಚ್ಚುವ ಕ್ರಮಗಳ ಕುರಿತು ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ರಸ್ತೆ ಗುಂಡಿಗಳಿಂದ ಸಾವು-ನೋವುಗಳು ಸಂಭವಿಸುತ್ತಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ದೀರ್ಘಕಾಲೀನ ಪರಿಹಾರೋಪಾಯಗಳಿಗೆ ಒತ್ತು ನೀಡಿದ್ದು, ಗುತ್ತಿಗೆದಾರರ ಹೊಣೆಗಾರಿಕೆ ಮತ್ತು ವೈಜ್ಞಾನಿಕ ವಿಧಾನಗಳ ಅಳವಡಿಕೆಗೆ ನಿರ್ದೇಶಿಸಿದೆ.

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡ ಕ್ರಮಗಳೇನು? ವಿವರ ನೀಡಲು ಜಿಬಿಎಗೆ ಹೈಕೋರ್ಟ್ ಸೂಚನೆ
ರಸ್ತೆ ಗುಂಡಿ, ಹೈಕೋರ್ಟ್Image Credit source: google
ರಮೇಶ್​ ಎಮ್​.
| Edited By: |

Updated on:Aug 14, 2026 | 3:35 PM

Share

ಮುಖ್ಯಾಂಶಗಳು

  • ಏಪ್ರಿಲ್​ನಿಂದ ಈವರೆಗೆ 10,202 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ
  • ಪ್ರಮಾಣಪತ್ರದ ಮೂಲಕ ವಿವರ ನೀಡಲು ಜಿಬಿಎಗೆ ಹೈಕೋರ್ಟ್ ಸೂಚನೆ
  • ವಿಜಯನ್ ಮೆನನ್ ಎಂಬುವರು 2015ರಲ್ಲಿ ಪಿಐಎಲ್ ಅರ್ಜಿ ವಿಚಾರಣೆ

ಬೆಂಗಳೂರು, ಆಗಸ್ಟ್​​​ 14: ರಾಜಧಾನಿ ಬೆಂಗಳೂರಿನಲ್ಲಿ (Bangaluru) ವಾಹನ ಸವಾರರಿಗೆ ರಸ್ತೆ ಗುಂಡಿಗಳೇ ದೊಡ್ಡ ತಲೆನೋವು. ರಸ್ತೆ ಗುಂಡಿಗೆ (potholes) ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಏಪ್ರಿಲ್​ನಿಂದ ಈವರೆಗೆ 10,202 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಹಾಗಾಗಿ ರಸ್ತೆ ಗುಂಡಿಗಳು ಮುಚ್ಚಲು ಕೈಗೊಂಡಿರುವ ಕ್ರಮಗಳ ಕುರಿತು ಪ್ರಮಾಣಪತ್ರದ (ಅಫಿಡವಿಟ್) ಮೂಲಕ ಸಮಗ್ರ ವಿವರ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

ಬೆಂಗಳೂರಿನ ಪ್ರಮುಖ ಹಾಗೂ ಸಂಪರ್ಕ ರಸ್ತೆಗಳ ಗುಂಡಿಗಳನ್ನು ಮುಚ್ಚುವುದು ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕೋರಿ ವಿಜಯನ್ ಮೆನನ್ ಅವರು 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಮುಚ್ಚಲಾದ ರಸ್ತೆ ಗುಂಡಿಗಳ ಸಮಗ್ರ ವಿವರ ಕೇಳಿದ ಕೋರ್ಟ್

ರಸ್ತೆ ದುರಸ್ತಿಗಾಗಿ ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ಜಿಬಿಎಗೆ ಸೂಚಿಸಿದೆ. ರಸ್ತೆ ಗುಂಡಿಗಳ ಸಮಸ್ಯೆಯನ್ನು ನಿವಾರಿಸಲು ಪ್ರತಿವರ್ಷ ಕೈಗೊಳ್ಳುವ ಕ್ರಮಗಳು, ಹಾಳಾದ ರಸ್ತೆಗಳನ್ನು ಸರಿಪಡಿಸಲು ಹಾಗೂ ಅವುಗಳ ಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ತೆಗೆದುಕೊಂಡಿರುವ ಕ್ರಮಗಳು ಮತ್ತು ಇದುವರೆಗೆ ಗುರುತಿಸಿ ಮುಚ್ಚಲಾದ ಗುಂಡಿಗಳ ಸಮಗ್ರ ವಿವರಗಳನ್ನು ಈ ಅಫಿಡವಿಟ್‌ನಲ್ಲಿ ಸೇರಿಸಿರಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ

ಇದಲ್ಲದೆ, ರಸ್ತೆ ಗುಂಡಿಗಳಿಂದಾಗಿ ಸಂಭವಿಸಿದ ಸಾವು ಮತ್ತು ಗಾಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ಕುರಿತು ಮಾಹಿತಿ ಪಡೆದು ತಿಳಿಸುವಂತೆ ರಾಜ್ಯ ಸರ್ಕಾರದ ವಕೀಲರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ರಸ್ತೆ ಗುಂಡಿ ಮುಚ್ಚುವುದು ನಿರಂತರ ಪ್ರಕ್ರಿಯೆ ಎಂದ ಜಿಬಿಎ ಪರ ವಕೀಲರು

ರಸ್ತೆ ಗುಂಡಿಗಳನ್ನು ಮುಚ್ಚುವ ಕಾಲಮಿತಿಯ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದಾಗ, ‘ಇದು ನಿರಂತರ ಪ್ರಕ್ರಿಯೆ ಎಂದು ಜಿಬಿಎ ಪರ ವಕೀಲರು ಉತ್ತರಿಸಿದರು. ಈ ಹಿಂದೆ 2025ರ ಜೂನ್ 2 ರಂದೂ ಸಹ ಹೈಕೋರ್ಟ್, ಪಾದಚಾರಿಗಳು ಮತ್ತು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿಡಲು ಮತ್ತು ರಸ್ತೆ ಗುಂಡಿಗಳ ಸಮಸ್ಯೆಯನ್ನು ನಿಭಾಯಿಸಲು ಕೈಗೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸಲು ಸೂಚಿಸಿತ್ತು. ಕಳೆದ 2024ರ ಸೆಪ್ಟೆಂಬರ್‌ನಲ್ಲಿ ನಡೆದ ವಿಚಾರಣೆ ವೇಳೆ ಅರ್ಜಿದಾರರು ವಾದ ಮಂಡಿಸಿ, ರಸ್ತೆ ದುರಸ್ತಿಗೆ ಸಮಗ್ರ ನೀತಿಯ ಅಗತ್ಯವಿದೆ, ಜಿಬಿಎಯು ದಾಖಲೆಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ನೆಲಮಟ್ಟದಲ್ಲಿ ಅದನ್ನು ಜಾರಿಗೆ ತರುತ್ತಿಲ್ಲ’ ಎಂದು ವಾದಿಸಿದರು.

ಇದನ್ನೂ ಓದಿ: ಪಿಎಸ್‌ಐ ಮೇಲೆ ಪುತ್ರಿ ಕಪಾಳಮೋಕ್ಷ ಪ್ರಕರಣ: ಮಗಳ ಪರವಾಗಿ ಬಹಿರಂಗ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

ಬೆಂಗಳೂರು ನಗರದಲ್ಲಿ ರಸ್ತೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ಷೇಪಣೆಯೊಂದಿಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ನಗರದ ರಸ್ತೆ ಗುಂಡಿ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಅರ್ಜಿದಾರರು ಹಲವು ಮಹತ್ವದ ಮನವಿ ಮಾಡಿದ್ದಾರೆ. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆ ವಿವರಗಳನ್ನು ಜಿಬಿಎ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು, ದುರಸ್ತಿ ಕಾಮಗಾರಿಗೆ ಮುನ್ನ ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆಯಿಂದ ತಂತ್ರಜ್ಞಾನ ಮತ್ತು ಸಾಮಗ್ರಿಗಳ ಕುರಿತು ಶಿಫಾರಸು ಪಡೆಯುವುದು, ಗುತ್ತಿಗೆದಾರರ ಹಿಂದಿನ ಕಾಮಗಾರಿಯ ಗುಣಮಟ್ಟ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಆಧರಿಸಿ ಗುತ್ತಿಗೆ ನೀಡುವ ನೀತಿ ರೂಪಿಸುವುದು ಮತ್ತು ರಸ್ತೆ ಗುಂಡಿಗಳಿಂದಾಗಿ ಸಂಭವಿಸುವ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ಸೂಕ್ತ ಕಾರ್ಯವಿಧಾನವನ್ನು ರೂಪಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:27 pm, Fri, 14 August 26

Follow Us