
ಬೆಂಗಳೂರು, ಮೇ 25: ದೇಶದ ತಂತ್ರಜ್ಞಾನ ರಾಜಧಾನಿ, ಸಿಲಿಕಾನ್ ಸಿಟಿ ಎಂದೆಲ್ಲ ಖ್ಯಾತಿ ಪಡೆದಿರುವ ಬೆಂಗಳೂರು (Bengaluru) ಈಗ ಆರ್ಥಿಕ ಅಪರಾಧಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ! ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ‘ಕ್ರೈಮ್ ಇನ್ ಇಂಡಿಯಾ 2024’ ವರದಿಯ ಪ್ರಕಾರ, ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ (2022 ರಿಂದ 2024) ಪ್ರತಿ 2.5 ಗಂಟೆಗೆ ಸರಾಸರಿ ಒಂದರಂತೆ ಆರ್ಥಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ನಕಲಿ ದಾಖಲೆ ಸೃಷ್ಟಿ, ವಂಚನೆ, ಹಣಕಾಸು ಹಗರಣಗಳು ಮತ್ತು ವೈಟ್ ಕಾಲರ್ ಅಪರಾಧಗಳು ಸೇರಿ ಕಳೆದ 3 ವರ್ಷಗಳಲ್ಲಿ ಒಟ್ಟು 10,580 ಪ್ರಕರಣಗಳು ದಾಖಲಾಗಿವೆ. 2024ರ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ 3,477 ಆರ್ಥಿಕ ಅಪರಾಧಗಳು ದಾಖಲಾಗಿವೆ. ಇದರೊಂದಿಗೆ, ದೇಶದಲ್ಲೇ ಅತಿ ಹೆಚ್ಚು ಆರ್ಥಿಕ ವಂಚನೆ ನಡೆಯುವ ಟಾಪ್ 5 ಮಹಾನಗರಗಳ ಪಟ್ಟಿಗೆ ಬೆಂಗಳೂರು ಸೇರಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಬೆಂಗಳೂರಿನ ಅಪರಾಧದ ಸ್ವರೂಪವೇ ಬದಲಾಗುತ್ತಿರುವುದು ಸ್ಪಷ್ಟವಾಗಿದೆ. ಸಾಮಾನ್ಯ ಕಳ್ಳತನ, ದರೋಡೆ ಮತ್ತು ದೈಹಿಕ ದೌರ್ಜನ್ಯಗಳಿಗಿಂತಲೂ ಸಾರ್ವಜನಿಕರನ್ನು ಡಿಜಿಟಲ್ ಹಾಗೂ ಆರ್ಥಿಕವಾಗಿ ವಂಚಿಸುವ ಜಾಲಗಳು ಇಲ್ಲಿ ಹೆಚ್ಚಾಗುತ್ತಿವೆ. ನಗರದಲ್ಲಿ ದೊಡ್ಡ ಮಟ್ಟದ ಡಿಜಿಟಲ್ ಆರ್ಥಿಕತೆ, ಆನ್‌ಲೈನ್ ಬ್ಯಾಂಕಿಂಗ್ ಬಳಕೆ ಮತ್ತು ಹೂಡಿಕೆಯ ಸಂಸ್ಕೃತಿ ಹೆಚ್ಚಿರುವುದು ಖದೀಮರಿಗೆ ವರದಾನವಾಗಿದೆ. ನಕಲಿ ಹೂಡಿಕೆ ಪ್ಲಾಟ್‌ಫಾರ್ಮ್‌ಗಳು, ಕ್ರಿಪ್ಟೋಕರೆನ್ಸಿ ಹಗರಣಗಳು, ಲೋನ್ ಆಪ್ ಮುಖಾಂತರ ಬ್ಲ್ಯಾಕ್‌ಮೇಲ್ ಮಾಡುವುದು ಮತ್ತು ಟ್ರೇಡಿಂಗ್ ಆಪ್‌ಗಳ ಹೆಸರಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಂಡ್ಯ: ನಾಗಮಂಗಲ ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ
ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಈ ವಂಚಕ ಜಾಲಗಳು ನಕಲಿ ಬ್ಯಾಂಕ್ ಖಾತೆಗಳು, ತಾತ್ಕಾಲಿಕ ಸಿಮ್ ಕಾರ್ಡ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಆ್ಯಪ್‌ಗಳನ್ನು ಬಳಸುತ್ತಿರುವುದರಿಂದ ಪೊಲೀಸರಿಗೆ ಇವರನ್ನು ಪತ್ತೆ ಹಚ್ಚಿ ಹಣ ರಿಕವರಿ ಮಾಡುವುದು ಮತ್ತು ಚಾರ್ಜ್‌ಶೀಟ್ ಹಾಕುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ