
ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆಯಾಗಿದೆ. ಮಿನರ್ವ್ ಸರ್ಕಲ್‌ನಲ್ಲಿರುವ ‘ಕೃಪಾ ಹೆಲ್ತ್‌ಕೇರ್’ ಮೇಲೆ ವಿಶೇಷ ತನಿಖಾ ತಂಡ (SIT) ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿದ್ದು, ನಕಲಿ ಔಷಧಿಗಳ ಭಾರಿ ಸಂಗ್ರಹ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಹೆಲ್ತ್‌ಕೇರ್ ಮಾಲೀಕ ವೀರೇಶ್‌ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾನ್ಸರ್ ಮಾತ್ರೆಗಳು, ಜೀವ ರಕ್ಷಕ ಔಷಧಿಗಳು ಹಾಗೂ ಐಸಿಯುನಲ್ಲಿ ಬಳಸುವ ಇಂಜೆಕ್ಷನ್‌ಗಳನ್ನೂ ನಕಲಿ ಮಾಡಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ಈ ಔಷಧಿಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎಂದು ತನಿಖಾ ತಂಡ ಶಂಕಿಸಿದೆ.
ಕಳೆದ ಆಗಸ್ಟ್ 18ರಂದು ರಾಮನಗರದ ಬಿಡದಿ ಹಾಗೂ ದೊಡ್ಡೇರಿ ಭಾಗದಲ್ಲಿರುವ ಫಾರ್ಮ್‌ಹೌಸ್‌ವೊಂದರ ಮೇಲೆ ನಡೆದ ದಾಳಿಯ ವೇಳೆ ನಕಲಿ ಔಷಧ ಜಾಲದ ಸುಳಿವು ಮೊದಲ ಬಾರಿಗೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ಸುಮಾರು ₹4.91 ಕೋಟಿಯಿಂದ ₹5 ಕೋಟಿ ಮೌಲ್ಯದ ನಕಲಿ ಔಷಧಿಗಳು, ನಕಲಿ ಬಿಲ್‌ಗಳು, ಇಂಜೆಕ್ಷನ್ ತುಂಬುವ ಯಂತ್ರಗಳು ಹಾಗೂ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಜಾಲವು ರಾಜ್ಯದ ಹೊರಗೂ ವಿಸ್ತರಿಸಿರುವ ಅನುಮಾನ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲಾಗಿತ್ತು.
ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದ ಎಸ್‌ಐಟಿ ತಂಡ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿವೆ.
ಈ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರಿನ ಮಿನರ್ವ್ ಸರ್ಕಲ್‌ನಲ್ಲಿರುವ ಕೃಪಾ ಹೆಲ್ತ್‌ಕೇರ್ ಕಚೇರಿ ಹಾಗೂ ಗೋಡೌನ್ ಮೇಲೂ ದಾಳಿ ನಡೆದಿದೆ. ವೀರೇಶ್‌ಕುಮಾರ್ ಮನೆ ಮತ್ತು ಕಚೇರಿಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ.
2021ರಲ್ಲಿ ಕೃಪಾ ಹೆಲ್ತ್‌ಕೇರ್ ಸಂಸ್ಥೆಯನ್ನು ಸ್ಥಾಪಿಸಿದ್ದ ವೀರೇಶ್‌ಕುಮಾರ್, ನಕಲಿ ಔಷಧಿ ಜಾಲದ ಪ್ರಮುಖ ಆರೋಪಿ ಪ್ರಶಾಂತ್ ಹಾಗೂ ಆತನ ಸಹಚರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ವೀರೇಶ್‌ಕುಮಾರ್ ಮತ್ತು ಪ್ರಶಾಂತ್ ಉದ್ಯಮದ ಪಾಲುದಾರಿಕೆಯನ್ನು ಹೊಂದಿದ್ದರು ಎಂಬ ಮಾಹಿತಿಯ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸಿದೆ. ಇದರ ಬೆನ್ನಲ್ಲೇ ವೀರೇಶ್ಕುಮಾರ್ನನ್ನು ಬಂಧಿಸಲಾಗಿದೆ.
ಕೃಪಾ ಹೆಲ್ತ್‌ಕೇರ್ ಮೇಲೆ ನಡೆದ ದಾಳಿಯಲ್ಲಿ ನಕಲಿ ಔಷಧಿಗಳ ಭಾರಿ ಸಂಗ್ರಹ ಪತ್ತೆಯಾಗಿದೆ. ಇದರೊಂದಿಗೆ ನಕಲಿ ಔಷಧಿಗಳ ಸಾಗಣೆ ಮತ್ತು ವಿತರಣೆಗೆ ಸಂಬಂಧಿಸಿದ ದಾಖಲೆಗಳು, ನಕಲಿ ಬಿಲ್‌ಗಳು ಹಾಗೂ ಇತರೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ಔಷಧಿಗಳ ಬ್ಯಾಚ್ ಸಂಖ್ಯೆಗಳೂ ಪತ್ತೆಯಾಗಿದ್ದು, ಅವುಗಳ ಆಧಾರದ ಮೇಲೆ ಇನ್ನಷ್ಟು ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳಿಗೆ ಔಷಧಿ ಪೂರೈಕೆಯಾಗಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಕಡಿಮೆ ಬೆಲೆಯ ರೀ-ಬ್ರ್ಯಾಂಡಿಂಗ್ ಔಷಧಿಗಳನ್ನು ಖರೀದಿಸಿ, ಅವುಗಳನ್ನು ಬೇರೆ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅವಧಿ ಮುಗಿದ ಔಷಧಿಗಳನ್ನು ಸಂಗ್ರಹಿಸಿ, ಹೊಸ ಬಾಟಲಿಗಳಿಗೆ ತುಂಬಲಾಗುತ್ತಿತ್ತು. ಬಳಿಕ ನಕಲಿ ಲೇಬಲ್‌ಗಳು ಮತ್ತು ಪ್ಯಾಕಿಂಗ್ ಸಾಮಗ್ರಿಗಳನ್ನು ಬಳಸಿ ಮರುಪ್ಯಾಕ್ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಫೈಜರ್‌ನಂತಹ ಪ್ರತಿಷ್ಠಿತ ಕಂಪನಿಗಳ ಔಷಧಿಗಳಿಗೂ ನಕಲಿ ಲೇಬಲ್‌ಗಳನ್ನು ಅಂಟಿಸಲಾಗುತ್ತಿತ್ತು. ಇಂತಹ ಔಷಧಿಗಳು ಮಿನರ್ವ್ ಸರ್ಕಲ್‌ನಲ್ಲಿರುವ ಗೋಡೌನ್‌ಗೆ ಬರುತ್ತಿದ್ದವು. ಅಲ್ಲಿಂದ ಬೆಂಗಳೂರು ಸುತ್ತಮುತ್ತಲಿನ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಕೃಪಾ ಹೆಲ್ತ್‌ಕೇರ್ ಮೂಲಕ ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ನಕಲಿ ಔಷಧಿಗಳನ್ನು ಪೂರೈಸಲಾಗುತ್ತಿತ್ತು. ಇವುಗಳಲ್ಲಿ ಜೀವ ರಕ್ಷಕ ಔಷಧಿಗಳು, ಕ್ಯಾನ್ಸರ್ ಮಾತ್ರೆಗಳು ಹಾಗೂ ಐಸಿಯುನಲ್ಲಿ ಬಳಸುವ ಇಂಜೆಕ್ಷನ್‌ಗಳೂ ಸೇರಿದ್ದವು ಎಂಬ ಆರೋಪವಿದೆ. ಆಸ್ಪತ್ರೆಗಳಿಗೆ ನಕಲಿ ಔಷಧಿಗಳನ್ನು ಸುಮಾರು ಶೇ 50ರಷ್ಟು ರಿಯಾಯಿತಿಯಲ್ಲಿ ನೀಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ನಕಲಿ ಔಷಧಿಗಳ ಮಾರಾಟ ಮತ್ತು ವಿತರಣೆಗೆ ಪ್ರತ್ಯೇಕ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿತ್ತು. 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳ ತಂಡದ ಮೂಲಕ ಔಷಧಿಗಳನ್ನು ವಿವಿಧ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ತಲುಪಿಸಲಾಗುತ್ತಿತ್ತು. ಈ ಜಾಲವು ಕರ್ನಾಟಕದ ಹೊರತಾಗಿ ಮಹಾರಾಷ್ಟ್ರ ಮತ್ತು ಗುಜರಾತ್‌ಗೂ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದೆ.
ವಶಪಡಿಸಿಕೊಂಡಿರುವ ಔಷಧಿಗಳ ರಾಸಾಯನಿಕ ಸಂಯೋಜನೆ ಹಾಗೂ ಗುಣಮಟ್ಟವನ್ನು ಪರಿಶೀಲಿಸಲು ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಕಲಿ ಎಂದು ಶಂಕಿಸಲಾಗಿರುವ ಔಷಧಿಗಳ ಬ್ಯಾಚ್ ಸಂಖ್ಯೆಗಳನ್ನು ಕರ್ನಾಟಕ ಎಫ್‌ಡಿಎ ಪೋರ್ಟಲ್‌ನಲ್ಲಿ ಬ್ಲಾಕ್ ಮಾಡಲಾಗಿದೆ.
ಮುಂದೆ ಈ ಬ್ಯಾಚ್‌ಗಳ ಔಷಧಿಗಳು ಮಾರಾಟವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾವ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ಈ ಔಷಧಿಗಳು ಪೂರೈಕೆಯಾಗಿವೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಈ ನಕಲಿ ಔಷಧಿ ಜಾಲದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಪ್ರಶಾಂತ್ ಸದ್ಯ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಬಂಧನದ ಬಳಿಕ ಜಾಲದ ಕಾರ್ಯವೈಖರಿ, ಹಣಕಾಸಿನ ವ್ಯವಹಾರಗಳು ಹಾಗೂ ಔಷಧಿ ಪೂರೈಕೆಯ ಕುರಿತು ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ರಾಮನಗರ ನಕಲಿ ಔಷಧ ಜಾಲ: ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿ 6 ರಾಜ್ಯಗಳ 10 ಕಡೆ ಕರ್ನಾಟಕ ಎಸ್‌ಐಟಿ ದಾಳಿ
ನಕಲಿ ಔಷಧಿಗಳ ಬಳಕೆಯಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ, ತನಿಖಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ