25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಯಲ್ಲೇ 350 ಕೋಟಿ ರೂ.ನಲ್ಲಿ ಫ್ಲೈಓವರ್

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಜಿಬಿಎ ₹350 ಕೋಟಿ ವೆಚ್ಚದಲ್ಲಿ 2.5 ಕಿ.ಮೀ ಮೇಲ್ಸೇತುವೆ ನಿರ್ಮಿಸಲು ಮುಂದಾಗಿದೆ. ಆದರೆ, ಇದೇ ರಸ್ತೆಯನ್ನು ಇತ್ತೀಚೆಗೆ 25 ಕೋಟಿ ರೂ. ನಲ್ಲಿ ವೈಟ್ ಟ್ಯಾಪಿಂಗ್ ಮಾಡಲಾಗಿತ್ತು. ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಈ ರಸ್ತೆಯನ್ನು ಅಗೆಯಬೇಕಾಗುವುದರಿಂದ ಸಾರ್ವಜನಿಕರ ಹಣ ಪೋಲಾಗುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜಿಬಿಎ ಸಮಜಾಯಿಷಿ ನೀಡಿದರೂ, ದೂರದೃಷ್ಟಿ ಕೊರತೆ ಎದ್ದು ಕಾಣುತ್ತಿದೆ.

25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಯಲ್ಲೇ 350 ಕೋಟಿ ರೂ.ನಲ್ಲಿ ಫ್ಲೈಓವರ್
ಸಾಂದರ್ಭಿಕ ಚಿತ್ರ
Edited By:

Updated on: Jun 25, 2026 | 12:49 PM

ಮುಖ್ಯಾಂಶಗಳು

  • 350 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ 2.5 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ
  • ಮುಂದಾಲೋಚನೆ ಇಲ್ಲದ ಯೋಜನೆಗಳಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ
  • ಸಾರ್ವಜನಿಕರ ಹಣ ಮಣ್ಣುಪಾಲಾಗುತ್ತಿದೆ ಎಂದು ನಾಗರಿಕರು ತೀವ್ರ ಆಕ್ರೋಶ

ಬೆಂಗಳೂರು, ಜೂ.25: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ನಗರದಲ್ಲಿ ಬರೋಬ್ಬರಿ 75 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ. ಇದರ ಭಾಗವಾಗಿ ನಗರದ ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್ ವರೆಗೆ 350 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ 2.5 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ (Flyover) ನಿರ್ಮಾಣ ಮಾಡಲು ಜಿಬಿಎ ಅಡಿಯ ‘ಬಿ ಸ್ಮೈಲ್’ ಯೋಜನೆ ಚಾಲನೆ ನೀಡಿದೆ. ಸಂಚಾರ ನಿಯಂತ್ರಿಸಲು ಫ್ಲೈಓವರ್ ಮಾಡುವುದು ಸ್ವಾಗತಾರ್ಹವಾದರೂ, ಅಧಿಕಾರಿಗಳ ಕನಿಷ್ಠ ಮುಂದಾಲೋಚನೆ ಇಲ್ಲದ ಯೋಜನೆಗಳಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವ ಆಘಾತಕಾರಿ ಸತ್ಯವೊಂದು ಈಗ ಬಯಲಾಗಿದೆ.

ಯಾವ ಜೆಸಿ ರಸ್ತೆಯಲ್ಲಿಈಗ 350 ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆಯೋ, ಅದೇ ರಸ್ತೆಯನ್ನು ಇತ್ತೀಚೆಗಷ್ಟೇ ಬರೋಬ್ಬರಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟೀಕರಣ (ವೈಟ್ ಟ್ಯಾಪಿಂಗ್) ಮಾಡಲಾಗಿತ್ತು. ಈಗ ಮತ್ತೆ ಅದೇ ಮಾರ್ಗದಲ್ಲಿ ಫ್ಲೈಓವರ್ ಕಾಮಗಾರಿ ಶುರುವಾದರೆ, ಬೃಹತ್ ಪಿಲ್ಲರ್‌ಗಳನ್ನು ಅಳವಡಿಸಲು ಈ ಹೊಸ ವೈಟ್ ಟ್ಯಾಪಿಂಗ್ ರಸ್ತೆಯನ್ನು ಅಗೆಯುವುದು ಬಹುತೇಕ ಖಚಿತ. ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಮಣ್ಣುಪಾಲಾಗುತ್ತಿದೆ ಎಂದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಮುಂದೆ ಫ್ಲೈಓವರ್ ಬರುತ್ತದೆ ಎಂದು ಗೊತ್ತಿದ್ದರೂ ಕೋಟಿ ಕೋಟಿ ಖರ್ಚು ಮಾಡಿ ವೈಟ್ ಟ್ಯಾಪಿಂಗ್ ಮಾಡಿದ್ದು ಯಾಕೆ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿ, ಗಲೀಜು: ಮಕ್ಕಳ ಆರೋಗ್ಯಕ್ಕೆ ಸಂಚಕಾರ

ಈ ದೊಡ್ಡ ವಿವಾದ ಹಾಗೂ ಸಾರ್ವಜನಿಕರ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಜಿಬಿಎ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು, “ಈಗಾಗಲೇ ನಿರ್ಮಿಸಲಾಗಿರುವ ವೈಟ್ ಟ್ಯಾಪಿಂಗ್ ರಸ್ತೆಗೆ ಯಾವುದೇ ರೀತಿಯ ಧಕ್ಕೆ ಅಥವಾ ಹಾನಿ ಉಂಟಾಗದ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಫ್ಲೈಓವರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು” ಎಂದು ಹೇಳುವ ಮೂಲಕ ಸಮಜಾಯಿಷಿ ನೀಡಿದ್ದಾರೆ. ಆದರೆ, ಕಣ್ಣೆದುರಗೇ ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲಾಗುವ ಲಕ್ಷಣಗಳು ಕಾಣಿಸುತ್ತಿರುವುದರಿಂದ, ಜಿಬಿಎ ಇಂಜಿನಿಯರ್‌ಗಳ ಇಂತಹ ದೂರದೃಷ್ಟಿ ಇಲ್ಲದ ಯಡ್ಬಟ್ಟು ಪ್ಲಾನ್‌ಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ಉಂಟಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Thu, 25 June 26

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us