ಬಿಸಿಲಿನ ಬೇಗೆಗೆ ಕೋಲ್ಡ್ ಬಿಯರ್​ಗೆ ಭಾರಿ ಬೇಡಿಕೆ! ಬೆಂಗಳೂರಿನಲ್ಲಿ ಸ್ಟಾಕ್ ಕೊರತೆ

ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಬಿಯರ್ ಮಾರಾಟದಲ್ಲಿ ಶೇ 50 ರಷ್ಟು ಭಾರಿ ಏರಿಕೆ ಕಂಡಿದೆ. ಮದ್ಯಪ್ರಿಯರು ಹಾರ್ಡ್ ಡ್ರಿಂಕ್ಸ್ ಬಿಟ್ಟು ಕೋಲ್ಡ್ ಬಿಯರ್ ಮೊರೆ ಹೋಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬಿಯರ್ ಸ್ಟಾಕ್ ಕೊರತೆ ಎದುರಾಗಿದೆ. ನಗರದ ಕೆಲವು ಔಟ್​ಲೆಟ್​​ಗಳಲ್ಲಿ ಪ್ರತಿ ದಿನ ಮಾರಾಟವಾಗುವ ಬಿಯರ್ ಸಂಖ್ಯೆ ಇದೀಗ ದುಪ್ಪಟ್ಟಾಗಿದೆ.

ಬಿಸಿಲಿನ ಬೇಗೆಗೆ ಕೋಲ್ಡ್ ಬಿಯರ್​ಗೆ ಭಾರಿ ಬೇಡಿಕೆ! ಬೆಂಗಳೂರಿನಲ್ಲಿ ಸ್ಟಾಕ್ ಕೊರತೆ
ಸಾಂದರ್ಭಿಕ ಚಿತ್ರ (ಎಐ)
Image Credit source: Google Gemini
Edited By:

Updated on: Apr 28, 2026 | 8:13 AM

ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಪ್ರತಾಪ ಹೆಚ್ಚುತ್ತಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಈ ಬೇಸಿಗೆಯ ಹೊಡೆತಕ್ಕೆ ಮದ್ಯಪ್ರಿಯರು ಆಯ್ಕೆಯನ್ನು ಬದಲಿಸಿಕೊಂಡಿದ್ದು, ಹಾರ್ಡ್ ಡ್ರಿಂಕ್ಸ್ ಅಥವಾ ಮದ್ಯ (Liquor) ಬದಿಗಿಟ್ಟು ಚಿಲ್ಡ್ ಬಿಯರ್ (Chilled Beer) ಮೊರೆ ಹೋಗಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ (Beer Sales) ಶೇ 50 ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ (Beer Supply Shortage) ಆಗದಿರುವುದು ಮದ್ಯ ಮಾರಾಟಗಾರರ ಆತಂಕಕ್ಕೆ ಕಾರಣವಾಗಿದೆ.

ಬಿಯರ್ ಹವಾ, ಐಎಂಎಲ್ ಡೌನ್

ಬೆಂಗಳೂರಿನಲ್ಲಿ ತಾಪಮಾನವು ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಜನರು ತಂಪು ಪಾನೀಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮದ್ಯದ ವಿಚಾರಕ್ಕೆ ಬಂದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಐಎಂಎಲ್ (IML) ಅಥವಾ ಹಾರ್ಡ್ ಡ್ರಿಂಕ್ಸ್ ವ್ಯಾಪಾರವು ಶೇ 20 ರಷ್ಟು ಕುಸಿತ ಕಂಡಿದೆ. ಇದಕ್ಕೆ ವಿರುದ್ಧವಾಗಿ ಬಿಯರ್ ಮಾರಾಟ ದುಪ್ಪಟ್ಟಾಗಿದೆ. ಈ ಹಿಂದೆ ದಿನಕ್ಕೆ 100 ಬಿಯರ್ ಬಾಟಲಿಗಳು ಮಾರಾಟವಾಗುತ್ತಿದ್ದ ಮಳಿಗೆಗಳಲ್ಲಿ ಈಗ 200ಕ್ಕೂ ಹೆಚ್ಚು ಬಿಯರ್ ಬಾಟಲಿಗಳು ಖಾಲಿಯಾಗುತ್ತಿವೆ.

ಬಿಯರ್ ಪೂರೈಕೆಯಲ್ಲಿ ಸಮಸ್ಯೆ

ಬಿಯರ್ ಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದರೂ, ಮದ್ಯದಂಗಡಿಗಳಿಗೆ ಸರಿಯಾದ ಸಮಯಕ್ಕೆ ಸ್ಟಾಕ್ ತಲುಪುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ. ‘ಬಿಸಿಲಿನಿಂದಾಗಿ ಜನರು ಹಾಟ್ ಡ್ರಿಂಕ್ಸ್ ಬಿಟ್ಟು ಬಿಯರ್ ಕೇಳುತ್ತಿದ್ದಾರೆ, ಆದರೆ ಸಪ್ಲೈ ಸರಿಯಾಗಿಲ್ಲದಿದ್ದರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ’ ಎಂದು ಮದ್ಯ ಮಾರಾಟಗಾರರಾದ ರಾಮಕೃಷ್ಣ ಅಳಲು ತೋಡಿಕೊಂಡಿದ್ದಾರೆ. ಇತ್ತ ಮದ್ಯಪ್ರಿಯರು ಕೂಡ ‘ಬಿಸಿಲಿನ ತಾಪಕ್ಕೆ ದಿನಕ್ಕೆರಡು ಚಿಲ್ಡ್ ಬಿಯರ್ ಕುಡಿದರಷ್ಟೇ ಸಮಾಧಾನ’ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ 5ನೇ ಬಾರಿ ಶಾಕ್: ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ!

ಒಟ್ಟಾರೆಯಾಗಿ, ಈ ಬಾರಿಯ ಕಡು ಬೇಸಿಗೆಯು ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದರೂ, ರಾಜ್ಯ ಸರ್ಕಾರದ ಖಜಾನೆಗೆ ಮಾತ್ರ ಬಿಯರ್ ಮಾರಾಟದ ಮೂಲಕ ಭರ್ಜರಿ ಆದಾಯವನ್ನು ತಂದುಕೊಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us