ಬಿಸಿಲ ಬೇಗೆಗೆ ಬೆಂದ ಬೆಂಗಳೂರು: ಎಸಿ, ಕೂಲರ್ ಹಾಗೂ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್!

ಬೆಂಗಳೂರಿನಲ್ಲಿ ದಾಖಲೆ ಮಟ್ಟದ ತಾಪಮಾನ ಏರಿಕೆಯಾಗಿದ್ದು, ಸಾರ್ವಜನಿಕರು ಸೆಕೆಯಿಂದ ತಪ್ಪಿಸಿಕೊಳ್ಳಲು ಎಸಿ, ಕೂಲರ್ ಮತ್ತು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಹಲವೆಡೆ ಸ್ಟಾಕ್ ಕೊರತೆ ಎದುರಾಗಿದೆ. ವ್ಯಾಪಾರಸ್ಥರ ಮುಖದಲ್ಲಿ ಲಾಭದ ಮಂದಹಾಸ ಮೂಡಿದೆ.

ಬಿಸಿಲ ಬೇಗೆಗೆ ಬೆಂದ ಬೆಂಗಳೂರು: ಎಸಿ, ಕೂಲರ್ ಹಾಗೂ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್!
ಎಸಿ, ಕೂಲರ್ ಹಾಗೂ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್!

Updated on: Apr 28, 2026 | 10:09 AM

ಬೆಂಗಳೂರು, ಏಪ್ರಿಲ್ 28: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಪ್ರತಾಪ (Weather) ಹೆಚ್ಚಾಗುತ್ತಿದ್ದು, ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಸುಡುವ ಬಿಸಿಲಿನಿಂದ ಹೈರಾಣಾಗಿರುವ ನಗರದ ಜನತೆ ಈಗ ‘ಕೂಲ್’ ಆಗಿರಲು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಮಣ್ಣಿನ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಏಪ್ರಿಲ್ ತಿಂಗಳ ಆರಂಭದಲ್ಲೇ ಸೆಕೆ ತಾಳಲಾರದೆ ಜನರು ಎಸಿ, ಕೂಲರ್ ಮತ್ತು ಮಣ್ಣಿನ ಮಡಿಕೆಗಳನ್ನು ಖರೀದಿಸಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.

ಶೋರೂಮ್‌ಗಳಲ್ಲಿ ಸ್ಟಾಕ್ ಖಾಲಿ

ನಗರದ ಎಲೆಕ್ಟ್ರಾನಿಕ್ ಶೋರೂಮ್‌ಗಳಲ್ಲಿ ಎಸಿ ಮತ್ತು ಕೂಲರ್‌ಗಳಿಗೆ ಹಿಂದೆಂದೂ ಇಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಮನೆಯೊಳಗೆ ಫ್ಯಾನ್ ಇದ್ದರೂ ಬೆವರಿನಿಂದ ಮುಕ್ತಿ ಸಿಗದ ಕಾರಣ, ಗ್ರಾಹಕರು ಬಜೆಟ್‌ಗೆ ತಕ್ಕಂತೆ ಕೂಲರ್ ಅಥವಾ ಎಸಿ ಖರೀದಿಸಲು ಮುಗಿಬೀಳುತ್ತಿದ್ದಾರೆ. ಆದರೆ, ಬೇಡಿಕೆ ವಿಪರೀತವಾಗಿರುವ ಕಾರಣ ಹಲವು ಕಡೆಗಳಲ್ಲಿ ಸ್ಟಾಕ್ ಖಾಲಿಯಾಗಿದ್ದು, ಹೊಸ ಉಪಕರಣಗಳಿಗಾಗಿ ಗ್ರಾಹಕರು ಒಂದು ವಾರ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಹಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ

ಬಡವರ ಫ್ರಿಡ್ಜ್‌ಗೆ ಭರ್ಜರಿ ಬೇಡಿಕೆ

ಒಂದೆಡೆ ಆಧುನಿಕ ಉಪಕರಣಗಳ ಹವಾ ಇದ್ದರೆ, ಇನ್ನೊಂದೆಡೆ ಪರಿಸರ ಸ್ನೇಹಿ ‘ಮಣ್ಣಿನ ಮಡಿಕೆ’ಗಳ ವ್ಯಾಪಾರವೂ ಚೇತರಿಸಿಕೊಂಡಿದೆ. ‘ಬಡವರ ಫ್ರಿಡ್ಜ್’ ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಗಳು, ಜಗ್ಗುಗಳು ಹಾಗೂ ಬಾಟಲಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿರುವ ಕಾರಣ ಜನರು ಮಡಿಕೆ ನೀರನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲವಾದರೂ, ಕುಂಬಾರರು ಮತ್ತು ವ್ಯಾಪಾರಿಗಳ ಮುಖದಲ್ಲಿ ಲಾಭದ ಮಂದಹಾಸ ಮೂಡಿದೆ.

ವರದಿ: ಅರುಣ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us