AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕಷ್ಟದಲ್ಲಿ ಹೋಟೆಲ್ ಉದ್ಯಮ: ಜಿಎಸ್​ಟಿ ವಿನಾಯಿತಿ ಕೋರಿ ನಿರ್ಮಲಾ ಸೀತಾರಾಮನ್ ಮೊರೆ ಹೋದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ

ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಹೋಟೆಲ್ ಸೇವೆಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯದ ಕೊರತೆ ಮತ್ತು ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆಯಿಂದಾಗಿ ಉದ್ಯಮವು ನಷ್ಟದ ಹಾದಿಯಲ್ಲಿದ್ದು, ತೆರಿಗೆ ಕಡಿತದ ಮೂಲಕ ನೆರವಾಗುವಂತೆ ಹಣಕಾಸು ಸಚಿವರಿಗೆ ಪತ್ರ ಬರೆಯಲಾಗಿದೆ.

ಸಂಕಷ್ಟದಲ್ಲಿ ಹೋಟೆಲ್ ಉದ್ಯಮ: ಜಿಎಸ್​ಟಿ ವಿನಾಯಿತಿ ಕೋರಿ ನಿರ್ಮಲಾ ಸೀತಾರಾಮನ್ ಮೊರೆ ಹೋದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ
ಸಾಂದರ್ಭಿಕ ಚಿತ್ರImage Credit source: tv9
ಗಣಪತಿ ಶರ್ಮಾ
|

Updated on: May 12, 2026 | 8:49 AM

Share

ಬೆಂಗಳೂರು, ಮೇ 12: ಹೆಚ್ಚುತ್ತಿರುವ ಕಚ್ಚಾ ವಸ್ತುಗಳ (ಗ್ಯಾಸ್, ತರಕಾರಿ ಮತ್ತಿತರ ವಸ್ತುಗಳು) ಬೆಲೆ ಮತ್ತು ನಿರ್ವಹಣಾ ವೆಚ್ಚದಿಂದ ಕಂಗಾಲಾಗಿರುವ ಬೆಂಗಳೂರಿನ ಹೋಟೆಲ್ ಉದ್ಯಮವು ಈಗ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಹೋಟೆಲ್ ಕೊಠಡಿಗಳು ಮತ್ತು ರೆಸ್ಟೋರೆಂಟ್ ಸೇವೆಗಳ ಮೇಲಿನ ಜಿಎಸ್‌ಟಿ (GST) ದರವನ್ನು ತರ್ಕಬದ್ಧಗೊಳಿಸುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಸೌಲಭ್ಯದ ಕೊರತೆಯಿಂದಾಗಿ ಹೋಟೆಲ್ ಉದ್ಯಮವು ಭಾರಿ ಆರ್ಥಿಕ ಒತ್ತಡಕ್ಕೆ ಸಿಲುಕಿದೆ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.

ಮುಖ್ಯಾಂಶಗಳು

  • ಹೋಟೆಲ್ ಕೊಠಡಿ ಮತ್ತು ಆಹಾರ ಸೇವೆಗಳ ಮೇಲೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಸಹಿತ 5% ಜಿಎಸ್‌ಟಿ ವಿಧಿಸಲು ಬೇಡಿಕೆ.
  • ವಾಣಿಜ್ಯ ಎಲ್‌ಪಿಜಿ, ಕಟ್ಟಡ ಬಾಡಿಗೆ ಮತ್ತು ಕಿಚನ್ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು 18% ರಿಂದ 5% ಕ್ಕೆ ಇಳಿಸಲು ಮನವಿ.
  • ನಿರ್ವಹಣಾ ವೆಚ್ಚದಲ್ಲಿ ಶೇ. 40 ರಷ್ಟು ಪಾಲು ಹೊಂದಿರುವ ಎಲ್‌ಪಿಜಿ ಮತ್ತು ಬಾಡಿಗೆ ವೆಚ್ಚದಿಂದ ಉದ್ಯಮಕ್ಕೆ ಸಂಕಷ್ಟ.

ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗೆ ಒತ್ತಾಯ

ಹೋಟೆಲ್ ಮಾಲೀಕರ ಸಂಘವು ಸರ್ಕಾರಕ್ಕೆ ಎರಡು ಪ್ರಮುಖ ಆಯ್ಕೆಗಳನ್ನು ನೀಡಿದೆ. ಮೊದಲನೆಯದಾಗಿ, ಬೇಕರಿ ಮತ್ತು ಸಿಹಿ ತಿಂಡಿಗಳ ಮಾರಾಟಕ್ಕೆ ಇರುವಂತೆ ಹೋಟೆಲ್ ಕೊಠಡಿ ಮತ್ತು ಆಹಾರದ ಮೇಲೆ 5% ಜಿಎಸ್‌ಟಿ ವಿಧಿಸಿ, ಐಟಿಸಿ ಸೌಲಭ್ಯ ನೀಡಬೇಕು. ಒಂದು ವೇಳೆ ಐಟಿಸಿ ಸೌಲಭ್ಯ ನೀಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನ ಪ್ರಮುಖ ವೆಚ್ಚಗಳಾದ ವಾಣಿಜ್ಯ ಸಿಲಿಂಡರ್, ಬಾಡಿಗೆ ಮತ್ತು ಅಡುಗೆ ಸಲಕರಣೆಗಳ ಮೇಲಿನ ಜಿಎಸ್‌ಟಿಯನ್ನು ಶೇ 18 ರಿಂದ ಶೇ 5 ಕ್ಕೆ ಇಳಿಸಬೇಕು ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಒತ್ತಾಯಿಸಿದ್ದಾರೆ.

ಸಾಮಾಜಿಕ ಕೊಡುಗೆ ಮತ್ತು ಉದ್ಯೋಗ

‘ನಾವು ಲಕ್ಷಾಂತರ ಮಧ್ಯಮ ವರ್ಗದ ಜನರಿಗೆ ಉದ್ಯೋಗ ನೀಡುತ್ತಿದ್ದೇವೆ. ಅಷ್ಟೇ ಅಲ್ಲದೆ, ರೈತರಿಂದ ನೇರವಾಗಿ ಹಾಲು, ಹಣ್ಣು ಮತ್ತು ತರಕಾರಿಗಳನ್ನು ಖರೀದಿಸುವ ಮೂಲಕ ಕೃಷಿ ವಲಯಕ್ಕೂ ಬೆಂಬಲ ನೀಡುತ್ತಿದ್ದೇವೆ. ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯವನ್ನೂ ಒದಗಿಸುತ್ತಿದ್ದೇವೆ. ಇಷ್ಟೆಲ್ಲಾ ಸಾಮಾಜಿಕ ಕೊಡುಗೆ ನೀಡುತ್ತಿರುವ ಉದ್ಯಮಕ್ಕೆ ತೆರಿಗೆಯಲ್ಲಿ ರಿಯಾಯಿತಿ ನೀಡುವ ಅಗತ್ಯವಿದೆ’ ಎಂದು ಸಂಘವು ಮೇ 4 ರಂದು ಬರೆದ ಪತ್ರದಲ್ಲಿ ವಿವರಿಸಿದೆ.

ಗ್ರಾಹಕರ ಮೇಲೆ ಹೊರೆ ಬೀಳುವ ಭೀತಿ

ಐಟಿಸಿ ಸೌಲಭ್ಯವಿಲ್ಲದ ಕಾರಣ ಹೋಟೆಲ್‌ಗಳ ನಿರ್ವಹಣಾ ವೆಚ್ಚ ಗಗನಕ್ಕೇರುತ್ತಿದೆ. ಬಾಡಿಗೆ ಮತ್ತು ಗ್ಯಾಸ್ ದರವೇ ನಮ್ಮ ಒಟ್ಟು ವೆಚ್ಚದ ಶೇ 40 ರಷ್ಟಿದೆ. ಸರ್ಕಾರ ಜಿಎಸ್‌ಟಿ ದರವನ್ನು ಶೇ 5 ಕ್ಕೆ ಇಳಿಸಿದರೆ, ನಾವು ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕದೆ ಉದ್ಯಮವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಪಿ.ಸಿ. ರಾವ್ ಹೇಳಿದ್ದಾರೆ. ಹೋಟೆಲ್ ಉದ್ಯಮದ ಉಳಿವಿಗಾಗಿ ಕೇಂದ್ರ ಸರ್ಕಾರವು ಈ ಬಾರಿಯ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿ ಇರುವುದಾಗಿ ಬೆಂಗಳೂರಿನ ಹೋಟೆಲ್ ಮಾಲೀಕರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us