ಬೆಂಗಳೂರು: ನಗರದ ಹಲವೆಡೆ ಬಲಿಗಾಗಿ ಕಾಯುತ್ತಿವೆ ಬೃಹತ್ ಮರಗಳು, ಹದಿನೈದು ದಿನದಲ್ಲಿ ಏಳು ಜನರ ಮೇಲೆ ಬಿದ್ದ ಮರ
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ಮರವೊಂದು ಜನರ ಬಲಿಗಾಗಿ ಕಾಯುತ್ತಿದೆ. ಜೋರು ಮಳೆಗೋ ಗಾಳಿಗೋ ಮರ ಬುಡ ಸೇಮತ ಜನರ ಮೇಲೆ ಬೀಳುವ ಹಂತಕ್ಕೆ ಬಂದಿದೆ. ಈ ಆಸ್ಪತ್ರೆ ಬಳಿಯಷ್ಟೇ ಇಂತಹ ಪರಿಸ್ಥಿತಿ ಇಲ್ಲ. ನಗರದ ಸಾಕಷ್ಟು ರಸ್ತೆಗಳಲ್ಲಿ ಇಂತಹದ್ದೇ ಅಪಾಯಕರ ಒಣಗಿದ ಮರಗಳಿದ್ದು ಈ ಬಗ್ಗೆ ‘ಟಿವಿ9’ ಗ್ರೌಂಡ್ ರಿಪೋರ್ಟ್ ಮಾಡಿದೆ.
ಬೆಂಗಳೂರು, ಆಗಸ್ಟ್ 20: ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಒಂದಲ್ಲ ಒಂದು ಕಡೆ ಮರ ಧರೆಗೆ ಬೀಳುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಕಳೆದ ವಾರ ಮಳೆ ಬಂದು ಮಾರುತಿ ಸೇವಾನಗರದಲ್ಲಿ 6 ಜನ ಆಸ್ಪತ್ರೆ ಸೇರಿದ್ದರು. ವಿಜಯನಗರದ ಆಟೋ ಚಾಲಕ ಶಿವರುದ್ರಯ್ಯ ಎಂಬವರು ಮರ ಬಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದರು. ಇಷ್ಟಾದರೂ ಒಣಗಿದ ಮರಗಳ ತೆರವು ಕಾರ್ಯಚಾರಣೆ ಮಾತ್ರ ಇನ್ನೂ ಆರಂಭವಾಗಿಲ್ಲ.
ನಗರದ ಕೇಂದ್ರ ಭಾಗದಲ್ಲಿರುವ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಹೊಸ ಓಪಿಡಿ ಕಟ್ಟಡ ಪಾರ್ಕಿಂಗ್ ಜಾಗದಲ್ಲಿ ಹಳೆಯ ಮರವೊಂದು ಸಂಪೂರ್ಣವಾಗಿ ಒಣಗಿದೆ. ಇಡೀ ಮರದಲ್ಲಿ ಒಂದೇ ಒಂದು ಎಲೆ ಇಲ್ಲ, ಬುಡವನ್ನು ಕೂಡ ಗೆದ್ದಲು ತಿಂದಿದ್ದು, ಯಾವಾಗ ನೆಲಕ್ಕೆ ಬೀಳುತ್ತದೆಯೋ ಗೊತ್ತಿಲ್ಲ. ಈ ಬಗ್ಗೆ ಸ್ಥಳೀಯ ನಿವಾಸಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಮಾತ್ರವಲ್ಲದೆ, ಆರ್ವಿ ರೋಡ್ ಬಳಿಯಿರುವ ಬೃಹತ್ ಮರದಲ್ಲಿ ಕೂಡ ಒಣಗಿರುವ ದೊಡ್ಡ ಕೊಂಬೆ ಇದ್ದು, ಯಾವ ಕ್ಷಣದಲ್ಲಿ ಬೇಕಾದರೂ ಬೀಳುವ ಸಾಧ್ಯತೆ ಇದೆ. ಜಯನಗರದ ರಾಘವೇಂದ್ರ ಸ್ವಾಮಿ ಮಠದ ಬಳಿ ಕೂಡ ಮೂರು ಹಳೆಯ ಮರಗಳು ಇದ್ದು, ಮಳೆ ಬಂದರೆ ಧರಾಶಾಯಿಯಾಗುವ ಭೀತಿ ಇದೆ.
ಇಷ್ಟು ಒಣಗಿರುವ ಮರವನ್ನು ಅದ್ಯಾವ ಕಾರಣಕ್ಕೆ ಇನ್ನೂ ತೆರವು ಮಾಡಿಲ್ಲವೋ ಗೊತ್ತಿಲ್ಲ. ಬೌರಿಂಗ್ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಮರದ ಬಳಿಯೇ ವಾಹನ ನಿಲ್ಲಿಸುತ್ತಾರೆ. ಆಸ್ಪತ್ರೆಗೆ ಈ ಮಾರ್ಗದ ಮೂಲಕವೇ ಸಾವಿರಾರು ಜನರು ಸಂಚಾರ ಮಾಡುತ್ತಾರೆ. ಪಕ್ಕದಲ್ಲೇ ಚಾಂದೀನಿ ಚೌಕ್ ರೋಡ್ ಕೂಡ ಇದ್ದು, ಶಾಪಿಂಗ್ ಮಾಡಲೂ ಜನರು ಬರುತ್ತಾರೆ.
ಇದನ್ನೂ ಓದಿ: ಬೆಂಗಳೂರು: ಹೆಚ್ಚಿದ ಬೀದಿ ನಾಯಿ ಕಾಟ, ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಳ
ಮರ ಬಿದ್ದರೆ ಆಸ್ಪತ್ರೆಯೋನೋ ಪಕ್ಕದಲೇ ಇದೆ. ಅದರೆ ಅದರಿಂದ ಆಗುವ ಹಾನಿಯ ಹೊಣೆ ಯಾರದ್ದು? ಮರವನ್ನು ಕೂಡಲೇ ತೆರವು ಮಾಡಿ ಎಂದು ಆಸ್ಪತ್ರೆಗೆ ಬರುವ ಸಾರ್ವಜನಿಕರು ಬಿಬಿಎಂಪಿಯನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತಾನಾಡಿದ ಬೌರಿಂಗ್ ಆಸ್ಪತ್ರೆ ಸೂಪರಿಂಟೆಂಡೆಂಟ್ ಕೆಂಪರಾಜು ಈಗಾಗಲೇ ನಾವು ಬಿಬಿಎಂಪಿ ಅರಣ್ಯ ಇಲಾಖೆಗೆ ಈ ಮರ ತೆರವು ಮಾಡಲು ಮೂರು ಬಾರಿ ಮನವಿ ಮಾಡಿದ್ದೇವೆ. ಆದರೆ ಇನ್ನೂ ತೆರವು ಮಾಡಿಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ