ದಾಖಲೆ ಬರೆದ ಬೆಂಗಳೂರು ಕೃಷಿ ಮೇಳ: ಒಂದೇ ದಿನ 7 ಲಕ್ಷ ಜನ ಭೇಟಿ
ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಲಕ್ಷಕ್ಕೂ ಹೆಚ್ಚು ಜನರು ಕೃಷಿ ಮೇಳದಲ್ಲಿ ಪಾಲ್ಗೊಂಡು ಸ್ಟಾಲ್ಗಳನ್ನು ಕಣ್ತುಂಬಿಕೊಂಡಿದ್ದಾರೆ.
ಬೆಂಗಳೂರು: ಯಲಹಂಕ ಸಮೀಪದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (Gandhi Krishi Vigyana Kendra – GKVK) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳವು ಈ ಬಾರಿ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಲಕ್ಷಕ್ಕೂ ಹೆಚ್ಚು ಜನರು ಕೃಷಿ ಮೇಳದಲ್ಲಿ ಪಾಲ್ಗೊಂಡು ಸ್ಟಾಲ್ಗಳನ್ನು ಕಣ್ತುಂಬಿಕೊಂಡಿದ್ದಾರೆ. ನಿನ್ನೆ (ನ 5) ಒಂದೇ ದಿನ ಬರೋಬ್ಬರಿ 7.16 ಜನರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಪ್ರಸಕ್ತ ಸಾಲಿನ ಕೃಷಿ ಮೇಳವು ಕಳೆದ ಗುರುವಾರದಿಂದ (ನ 3) ಕೃಷಿ ಮೇಳವು ನಡೆಯುತ್ತಿದೆ. ಕೊವಿಡ್ ಬಳಿಕ ಇದೇ ಮೊದಲ ಬಾರಿಗೆ ಕೃಷಿ ಮೇಳಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು (ನ 6) ಕೃಷಿ ಮೇಳದ ಕೊನೆಯ ದಿನವಾಗಿದ್ದು, ಸುಮಾರು 9 ಲಕ್ಷ ಜನರು ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಮೊದಲ ದಿನ 1.60 ಲಕ್ಷ, ಎರಡನೇ ದಿನ 2.45 ಲಕ್ಷ ಜನರು ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದರು.
ಬಹೂಪಯೋಗಿ ಡ್ರೋಣ್: ಕೃಷಿ ವಿವಿ ಹಳೇ ವಿದ್ಯಾರ್ಥಿಗಳ ಆವಿಷ್ಕಾರ
ಕೃಷಿ ಚಟುವಟಿಕೆಗೆ ಬಳಸಬಹುದಾದ ಬಹೂಪಯೋಗಿ ಡ್ರೋಣ್ಗಳು ಕೃಷಿ ಮೇಳದಲ್ಲಿ ರೈತರನ್ನು ಆಕರ್ಷಿಸಿತು. ಡ್ರೋಣ್ಗಳನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ ರೈತರ ಶ್ರಮ, ಸಮಯ, ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಸಾಧ್ಯವಿದೆ. ಈ ಡ್ರೋಣ್ಗಳಿಗೆ ₹ 7 ಲಕ್ಷ ಖರ್ಚಾಗಿದೆ ಎಂದು ಜಿಕೆವಿಕೆಯ ಹಳೆಯ ವಿದ್ಯಾರ್ಥಿಗಳಾದ ಹವ್ಯಾಸ್ ಮತ್ತು ನಿತಿನ್ ಸಿಂಗ್ ಹೇಳಿದರು. ಈ ವಿದ್ಯಾರ್ಥಿಗಳೇ ಈಗ ‘ಬಿಗಿಲ್ ಅಗ್ರಿಟೆಕ್’ ಎಂಬ ಕಂಪನಿಯನ್ನು ಸ್ಥಾಪಿಸಿ ಡ್ರೋಣ್ ಅಭಿವೃದ್ಧಿಪಡಿಸಿದ್ದಾರೆ.
₹ 2.01 ಲಕ್ಷಕ್ಕೆ ಬನ್ನೂರು ಕುರಿ ಮಾರಾಟ
ರೈತ ಬೋರೇಗೌಡ ಅವರು ತಂದಿದ್ದ 5 ವರ್ಷದ ಬನ್ನೂರು ಕುರಿ ₹ 2.01 ಲಕ್ಷಕ್ಕೆ ಮಾರಾಟವಾಯಿತು. ಮೂಲ ಬನ್ನೂರು ತಳಿಯ ಕುರಿಗಳು ಅಳಿವಿನಂಚಿನಲ್ಲಿದ್ದು, ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಸುಮಾರು 2,500 ಕುರಿಗಳಿವೆ ಎಂದು ಹೇಳಲಾಗುತ್ತಿದೆ. ಕೃಷಿಮೇಳಕ್ಕೆ ಬೋರೇಗೌಡ ಅವರು 3 ತಿಂಗಳ ಕುರಿಮರಿ ಸೇರಿದಂತೆ 22 ಕುರಿಗಳನ್ನು ತಂದಿದ್ದರು. ಈ ತಳಿಯು ಏಳು ಉಪ ವಿಧಗಳನ್ನು ಹೊಂದಿದ್ದು, ಎಲ್ಲವೂ ಅಳಿವಿನಂಚಿನಲ್ಲಿವೆ ಎಂದು ಅವರು ತಿಳಿಸಿದರು.
ಒಂದೇ ವರ್ಷಕ್ಕೆ ಫಸಲು ಕೊಡುವ ಹಲಸು
ನೆಟ್ಟ ಒಂದೇ ವರ್ಷದಲ್ಲಿ ಹಣ್ಣು ಕೊಡುವ ನೆದರ್ಲೆಂಡ್ನ ಸರ್ವಋತು ಹಲಸು ಈ ವರ್ಷದ ಕೃಷಿಮೇಳದಲ್ಲಿ ಎಲ್ಲರನ್ನೂ ಆಕರ್ಷಿಸಿತು. ಹಲಸಿನ ಮರಗಳು ಸಾಮಾನ್ಯವಾಗಿ ಎತ್ತರಕ್ಕೆ ಬೆಳೆಯುತ್ತವೆ. ಆದರೆ, ಈ ಹಲಸು ಕಡಿಮೆ ಎತ್ತರದಲ್ಲಿ ಪೊದೆಯಾಕಾರದಲ್ಲಿ ಹರಡಿಕೊಳ್ಳುತ್ತದೆ. ಬಹುಬೇಗನೇ ಕಾಯಿ ಬಿಡಲು ಆರಂಭಿಸುತ್ತದೆ. ಅಂಟು ರಹಿತ ತೊಳೆಗಳು ಈ ಹಲಸಿನ ಮತ್ತೊಂದು ವೈಶಿಷ್ಟ್ಯ ಎಂದು ಪುತ್ತೂರಿನ ಸಸಿ ಮಾರಾಟಗಾರ ಫಯಾಜ್ ಹೇಳಿದರು.