
ಬೆಂಗಳೂರು, ಅಕ್ಟೋಬರ್ 30: ನಮ್ಮ ಮೆಟ್ರೋ ರೈಲುಗಳು ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಮತ್ತು ತಾಂತ್ರಿಕ ದೋಷದಿಂದ ಪ್ರಯಾಣ ವಿಳಂಬವಾಗುತ್ತಿರುವ ಪ್ರಕರಣಗಳು ಹೆಚ್ಚಿರುವ ಸಂದರ್ಭದಲ್ಲೇ ಮತ್ತೊಂದು ಅಂತಹ ಘಟನೆ ವರದಿಯಾಗಿದೆ. ಪರ್ಪಲ್ ಲೈನ್ ಮೆಟ್ರೋ ರೈಲು ಶುಕ್ರವಾರ ಬೆಳಗಿನ ಜಾವ 9:30 ರ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಸುಮಾರು 10 ನಿಮಿಷ ಕಾಲ ನಿಂತಲ್ಲೇ ನಿಂತಿದೆ. ತಾಂತ್ರಿಕ ಕಾರಣಗಳಿಂದ ಪ್ರಯಾಣ ವಿಳಂಬವಾಗುತ್ತಿದೆ. ಅಡಚಣೆಗಾಗಿ ವಿಷಾದಿಸುತ್ತಿದ್ದೇವೆ ಎಂದು ರೈಲಿನಲ್ಲಿ ಅನೌನ್ಸ್ಮೆಂಟ್ ಮಾಡಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ. ಈ ಕುರಿತು ಬಿಎಂಆರ್ಸಿಎಲ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಆಗಿದೆ ಎಂದಿದೆ.
ಬೆಳಗ್ಗೆ ಸುಮಾರು 09:22ಕ್ಕೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಹಳಿಗೆ ಇಳಿದ ಪರಿಣಾಮ, ತುರ್ತು ಟ್ರಿಪ್ ವ್ಯವಸ್ಥೆ (ETS) ಮತ್ತು ತುರ್ತು ನಿಲುಗಡೆ ಬಟನ್ (ESP) ಸಕ್ರಿಯಗೊಂಡವು. ಬಳಿಕ ಪ್ರಯಾಣಿಕನನ್ನು ರಕ್ಷಿಸಲಾಯಿತು. ಈ ಘಟನೆಯಿಂದಾಗಿ ನೇರಳೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವಿಳಂಬವಾಯಿತು. ಅಲ್ಲದೆ, ಕೆಂಪೇಗೌಡ ಮೆಜೆಸ್ಟಿಕ್ ಇಂಟರ್ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಹಸಿರು ಮಾರ್ಗದಲ್ಲಿಯೂ ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಿಸಲಾಯಿತು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಚಲ್ಲಘಟ್ಟದಿಂದ ವೈಟ್ಫೀಲ್ಡ್ ಕಡೆಗೆ ಸಂಚರಿಸುತ್ತಿದ್ದ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ನಿಂತಿದ್ದು, ಸುಮಾರು 10 ನಿಮಿಷಗಳ ನಂತರ ಹೊರಟಿದೆ. ಪೀಕ್ ಅವರ್ನಲ್ಲೇ ರೈಲು ವಿಳಂಬವಾದ ಕಾರಣ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಅತಿಯಾಗಿತ್ತು. ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಟ ಬಳಿಕವೂ ಪ್ರತಿ ನಿಲ್ದಾಣದಲ್ಲಿ ನಿಲ್ಲುವ ಅವಧಿ ಹೆಚ್ಚಾಗಿತ್ತು. ಇದರಿಂದಾಗಿ ಗಮ್ಯ ತಲುಪುವುದು ಸುಮಾರು 20 ರಿಂದ 25 ನಿಮಿಷ ತಡವಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Fri, 30 October 26