Pink Line Metro: ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗವಾಗಲಿದೆ ಪಿಂಕ್ ಲೈನ್, ಬಿಎಂಆರ್​ಸಿಎಲ್ ಬಿಗ್ ಅಪ್​ಡೇಟ್

Namma Metro Pink Line Update: ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚಾರ ಶುರುವಾಗುತ್ತಿದ್ದಂತೆಯೇ ಬೆಂಗಳೂರಿನ ಬೇರೆಬೇರೆ ಭಾಗದಲ್ಲೂ ಮೆಟ್ರೋ ರೈಲು ಸಂಚಾರ ಮಾಡುವ ಸಾಧ್ಯತೆಗಳಿದ್ದು, ಇದೀಗ ನಗರದಲ್ಲೇ ಅತಿ ಉದ್ದದ ಮಾರ್ಗವನ್ನು ನಿರ್ಮಾಣ ಮಾಡಲು ಬಿಎಂಆರ್​ಸಿಎಲ್ ಮುಂದಾಗಿದೆ. ನೂತನ ಮೆಟ್ರೋ ಮಾರ್ಗ ಐಟಿಬಿಟಿ ಮತ್ತು ಇಂಡಸ್ಟ್ರಿಯಲ್ ಏರಿಯಾಗಳನ್ನು ಸಂಪರ್ಕ ಮಾಡಲಿದ್ದು, ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.

Pink Line Metro: ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗವಾಗಲಿದೆ ಪಿಂಕ್ ಲೈನ್, ಬಿಎಂಆರ್​ಸಿಎಲ್ ಬಿಗ್ ಅಪ್​ಡೇಟ್
ಪಿಂಕ್ ಲೈನ್ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ
Updated By: Ganapathi Sharma

Updated on: Aug 22, 2025 | 10:24 AM

ಬೆಂಗಳೂರು, ಆಗಸ್ಟ್ 22: ಆಗಸ್ಟ್ 10 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್.ವಿ.ರೋಡ್ ಹಾಗೂ ಬೊಮ್ಮಸಂದ್ರ ಮಧ್ಯೆ ಸಂಚರಿಸುವ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಟ್ರಾಫಿಕ್ ಹೆಚ್ಚಿರುವ ಮತ್ತು ಐಟಿಬಿಟಿ ಪಾರ್ಕ್​​ಗಳು, ಇಂಡಸ್ಟ್ರಿಯಲ್ ಟೌನ್​​ಗಳನ್ನು ಸಂಪರ್ಕಿಸುವಂತೆ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲು ಬಿಎಂಆರ್​ಸಿಎಲ್ (BMRCL) ಅಧಿಕಾರಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಪಿಂಕ್‌ ಲೈನ್ ಮೆಟ್ರೋ ಮಾರ್ಗದಲ್ಲಿ ಶೇ 90 ರಷ್ಟು ಕಾಮಗಾರಿ ಮುಗಿದಿದೆ. ಆರು ಎಲಿವೇಟೆಡ್ ಮೆಟ್ರೋ ಸ್ಟೇಷನ್​ಗಳನ್ನು ಮುಂದಿನ ವರ್ಷದಲ್ಲಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ. ಇದೀಗ ಈ ಮಾರ್ಗವನ್ನು ಕಾಡುಗೋಡಿ ಟ್ರೀ ಪಾರ್ಕ್ ವರೆಗೆ ವಿಸ್ತರಣೆ ಮಾಡಲು ಬಿಎಂಆರ್​ಸಿಎಲ್ ಮುಂದಾಗಿದೆ. ಈ ಮಾರ್ಗ ಓಪನ್ ಆದರೆ, ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗವಾಗಲಿದೆ.

ಎಲ್ಲೆಲ್ಲಿ ಸಂಚಾರ ಮಾಡಲಿದೆ ಪಿಂಕ್ ಲೈನ್ ಮೆಟ್ರೋ ?

ಪಿಂಕ್ ಲೈನ್ ಮೆಟ್ರೋ ಮಾರ್ಗವು ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಕಾಡುಗೋಡಿ ಟ್ರೀ ಪಾರ್ಕ್ (68 ಕಿ.ಮೀ) ಮಾರ್ಗದಲ್ಲಿ ಸಂಚಾರ ಮಾಡಲಿದೆ. ಈ ಮೆಟ್ರೋ ಮಾರ್ಗಕ್ಕಾಗಿ ಫೀಸಿಬಿಲಿಟಿ ಟೆಸ್ಟ್ ಮಾಡಲು ಬಿಎಂಆರ್​ಸಿಎಲ್ ಮುಂದಾಗಿದೆ‌.

ಪಿಂಕ್ ಲೈನ್ ಮೆಟ್ರೋ ಮೊದಲ ಹಂತ ಎಲ್ಲೆಲ್ಲಿ?

ಗಮನಿಸಬೇಕಿರುವ ಅಂಶವೇನೆಂದರೆ, ಸದ್ಯ ಕಾಮಗಾರಿ ನಡೆಯುತ್ತಿರುವುದು 21.3 ಕಿ.ಮೀ (ಕಾಳೇನ ಅಗ್ರಹಾರದಿಂದ ನಾಗವಾರ) ಮಾರ್ಗದ್ದಾಗಿದೆ. ಉಳಿದ ಮಾರ್ಗ ಪಿಂಕ್​ ಲೈನ್​ನ 2ನೇ ಹಂತದಲ್ಲಿ ನಡೆಯಲಿದೆ. ಈಗ ಕಾಮಗಾರಿ ನಡೆಯುತ್ತಿರುವ ಮಾರ್ಗದಲ್ಲಿ 7.5 ಕಿ.ಮೀ ಎಲಿವೇಟೆಡ್ ಹಾಗೂ 13.8 ಕಿ.ಮೀ ಅಂಡರ್​​ಗ್ರೌಂಡ್ ಹಳಿ ಇರಲಿದೆ.

ಪಿಂಕ್ ಲೈನ್ ಮೆಟ್ರೋ: ಎಷ್ಟಿರಲಿವೆ ನಿಲ್ದಾಣಗಳು?

ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಅಂದಾಜು 50 ಮೆಟ್ರೋ ಸ್ಟೇಷನ್​ಗಳನ್ನು ನಿರ್ಮಾಣ ಮಾಡಲು ಬಿಎಂಆರ್​​ಸಿಎಲ್ ಚಿಂತನೆ ನಡೆಸಿದೆ. ಫೀಸಿಬಿಲಿಟಿ ಟೆಸ್ಟ್ ರಿಪೋರ್ಟ್ ಕೈಸೇರುತ್ತಿದ್ದಂತೆಯೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬಿಎಂಆರ್​​ಸಿಎಲ್ ಮುಂದಾಗಲಿದೆ.

ಇತ್ತ ಅತ್ತಿಬೆಲೆ ಬಳಿ ಕೆಹೆಚ್​ಬಿ 90,000 ಸಾವಿರ ಆಸನಗಳ ಸಾಮರ್ಥ್ಯದ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದು, ಪಿಂಕ್‌ ಲೈನ್ ವಿಸ್ತರಿಸುವುದರಿಂದ ಪ್ರೇಕ್ಷಕರು ಬಂದು ಹೋಗಲು ಸಹಾಯ ಆಗಲಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೆಪಿ ನಗರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ರ್ಯಾಂಪ್​ಗೆ ವಿರೋಧ! ಕಾರಣ ಇಲ್ಲಿದೆ

ಒಟ್ಟಿನಲ್ಲಿ, ಈ ಮೆಟ್ರೋ ಮಾರ್ಗಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದರೆ ನಗರದ ಅತಿದೊಡ್ಡ ಟ್ರಾಫಿಕ್ ಸಾಗರವನ್ನು ಜನರು ನೀರು ಕುಡಿದಷ್ಟೇ ಸಲಿಸಾಗಿ ದಾಟಬಹುದು. ಸರಿಯಾದ ಸಮಯಕ್ಕೆ ಕಚೇರಿ ಮತ್ತು ಮನೆ ತಲುಪಲು ನೆರವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 am, Fri, 22 August 25