ಮೂರು ತಿಂಗಳಿಂದ ನಮ್ಮ ಕ್ಲಿನಿಕ್ ಸಿಬ್ಬಂದಿಗಿಲ್ಲ ಸಂಬಳ: ಬಂದ್ ಎಚ್ಚರಿಕೆ ನೀಡಿದ ವೈದ್ಯರು, ನರ್ಸ್‌ಗಳು

ಬೆಂಗಳೂರಿನ ಬಡವರು ಮತ್ತು ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಆರಂಭವಾದ ‘ನಮ್ಮ ಕ್ಲಿನಿಕ್’ ಯೋಜನೆ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅನುದಾನದ ಹಗ್ಗಜಗ್ಗಾಟದಿಂದಾಗಿ ಕಳೆದ ಮೂರು ತಿಂಗಳಿಂದ ವೈದ್ಯರು, ನರ್ಸ್‌ಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಸಂಬಳ ಸಿಕ್ಕಿಲ್ಲ.

ಮೂರು ತಿಂಗಳಿಂದ ನಮ್ಮ ಕ್ಲಿನಿಕ್ ಸಿಬ್ಬಂದಿಗಿಲ್ಲ ಸಂಬಳ: ಬಂದ್ ಎಚ್ಚರಿಕೆ ನೀಡಿದ ವೈದ್ಯರು, ನರ್ಸ್‌ಗಳು
ನಮ್ಮ ಕ್ಲಿನಿಕ್
Image Credit source: tv9

Updated on: Jul 03, 2026 | 7:31 AM

ಮುಖ್ಯಾಂಶಗಳು

  • ಮೂರು ತಿಂಗಳಿಂದ ಸಿಬ್ಬಂದಿಗೆ ಸಿಗದ ಸಂಬಳ
  • 1,000ಕ್ಕೂ ಹೆಚ್ಚು ಸಿಬ್ಬಂದಿ ಬೀದಿಗೆ ಬೀಳುವ ಭೀತಿ
  • ವೇತನ ನೀಡದಿದ್ದರೆ ಕ್ಲಿನಿಕ್ ಬಂದ್ ಎಚ್ಚರಿಕೆ

ಬೆಂಗಳೂರು, ಜುಲೈ 3: ಬೆಂಗಳೂರಿನ (Bengaluru) ಬಡ ಜನರಿಗೆ ಉಚಿತ ಹಾಗೂ ಗುಣಮಟ್ಟದ ಪ್ರಾಥಮಿಕ ವೈದ್ಯಕೀಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯ ‘ನಮ್ಮ ಕ್ಲಿನಿಕ್ (Namma Clinic)’ ಯೋಜನೆ ಈಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಜಿಬಿಎ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕ್ಲಿನಿಕ್‌ಗಳ ವೈದ್ಯರು, ನರ್ಸ್‌ಗಳು ಹಾಗೂ ಲ್ಯಾಬ್ ತಂತ್ರಜ್ಞರು ಕಳೆದ ಮೂರು ತಿಂಗಳಿಂದ ವೇತನವಿಲ್ಲದೆ ಪರದಾಡುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅನುದಾನ ಹಂಚಿಕೆಯ ಗೊಂದಲದಿಂದಾಗಿ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸುವ ಸಿಬ್ಬಂದಿ ಈಗ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ತಿಂಗಳ ಅಂತ್ಯದೊಳಗೆ ಬಾಕಿ ಸಂಬಳ ನೀಡದಿದ್ದರೆ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಅನುದಾನದ ಹಗ್ಗಜಗ್ಗಾಟಕ್ಕೆ ಸಿಬ್ಬಂದಿ ಬಲಿ

ಬೆಂಗಳೂರಿನಾದ್ಯಂತ ಸುಮಾರು 240ಕ್ಕೂ ಹೆಚ್ಚು ನಮ್ಮ ಕ್ಲಿನಿಕ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಕಾಯಕ ಜೀವಿಗಳಾಗಿ ದುಡಿಯುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇಕಡಾ 50ರಷ್ಟು ಅನುದಾನವನ್ನು ಹಂಚಿಕೊಳ್ಳಬೇಕಿದೆ. ಆದರೆ, ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ, ಕೇಂದ್ರ ಸರ್ಕಾರದಿಂದ ಬರಬೇಕಾದ ತನ್ನ ಪಾಲಿನ ಹಣವೂ ಬಂದಿಲ್ಲ, ಇತ್ತ ರಾಜ್ಯ ಸರ್ಕಾರವೂ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೇಂದ್ರದ ಕಡೆಗೆ ಕೈ ತೋರಿಸಿ ಜಾರಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಾಡಿಗೆ ಪಾವತಿ ಮಾಡಲಾಗದೆ, ಜೀವನ ನಿರ್ವಹಣೆ ಮಾಡಲಾಗದೆ ಸಿಬ್ಬಂದಿ ಕಣ್ಣೀರು ಹಾಕುತ್ತಿದ್ದಾರೆ.

ತಾಂತ್ರಿಕ ಕಾರಣ, ಶೀಘ್ರವೇ ಕ್ರಮ ಎಂದ ಜಿಬಿಎ ಆಯುಕ್ತರು

ನಮ್ಮ ಕ್ಲಿನಿಕ್ ಸಿಬ್ಬಂದಿಯ ವೇತನದ ತೀವ್ರ ಬಿಕ್ಕಟ್ಟು ಮತ್ತು ಆಕ್ರೋಶದ ಕುರಿತು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇರಿಂಗ್ ಫಂಡ್ (ಅನುದಾನ ಹಂಚಿಕೆ) ಪ್ರಕ್ರಿಯೆಯಲ್ಲಿ ಸ್ವಲ್ಪ ತಾಂತ್ರಿಕ ವಿಳಂಬವಾಗಿದೆ ಅಷ್ಟೆ. ಇದರಿಂದಾಗಿ ವೇತನ ಬಿಡುಗಡೆ ತಡವಾಗಿದೆ. ಯಾವುದೇ ಸಿಬ್ಬಂದಿ ಆತಂಕಗೊಂಡು ಕೆಲಸ ನಿಲ್ಲಿಸುವ ಅಗತ್ಯವಿಲ್ಲ. ಮುಂಬರುವ ದಿನಗಳಲ್ಲಿ ಬಾಕಿ ಇರುವ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ನಮ್ಮ ಕ್ಲಿನಿಕ್ ಬಂದ್ ಎಚ್ಚರಿಕೆ ನೀಡಿದ ಸಿಬ್ಬಂದಿ

ಆದಾಗ್ಯೂ, ಭರವಸೆಗಳಿಂದ ಸುಸ್ತಾಗಿರುವ ಸಿಬ್ಬಂದಿಯ ತಾಳ್ಮೆ ಕೆಟ್ಟಿದ್ದು, ತಕ್ಷಣವೇ ವೇತನ ಸಿಗದಿದ್ದರೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬಡವರ ಸಂಜೀವಿನಿ ಎನಿಸಿಕೊಂಡಿರುವ ಈ ಉಚಿತ ಆರೋಗ್ಯ ಸೇವೆ ಸಂಪೂರ್ಣ ಬಂದ್ ಆಗುವ ಆತಂಕ ಎದುರಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us