ಕೋಲಾರದಲ್ಲಿ ಬೆಚ್ಚಿಬೀಳಿಸೋ ಆಕ್ಸಿಡೆಂಟ್ ರಿಪೋರ್ಟ್: ಕೇವಲ 8 ತಿಂಗಳಲ್ಲಿ 274 ಜೀವಗಳು ಬಲಿ!
ಕೋಲಾರ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಮತ್ತು ಸಾವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ ಆಗುತ್ತಿದೆ. ಹೊಸ ಹೆದ್ದಾರಿ ನಿರ್ಮಾಣ, ರಸ್ತೆ ಸುಧಾರಣೆ ಹಾಗೂ ಹೆಲ್ಮೆಟ್ ಕಡ್ಡಾಯದಂತಹ ಬಿಗಿ ಸಂಚಾರ ನಿಯಮಗಳ ಹೊರತಾಗಿಯೂ ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗಳ ಅಂಕಿ-ಅಂಶಗಳನ್ನು ನೋಡಿದರೆ ಆತಂಕ ಮೂಡಿಸುವಂತಿದೆ.

ಕೋಲಾರ, ಸೆಪ್ಟೆಂಬರ್ 27: ಕೋಲಾರ ಜಿಲ್ಲೆಯಲ್ಲಿ ಸುಸಜ್ಜಿತ ಹೆದ್ದಾರಿಗಳು ನಿರ್ಮಾಣವಾಗುತ್ತಿದ್ದರೂ ಮತ್ತು ಪೊಲೀಸ್ ಇಲಾಖೆ ಸಂಚಾರಿ ನಿಯಮಗಳನ್ನು ಬಿಗಿಗೊಳಿಸುತ್ತಿದ್ದರೂ ರಸ್ತೆ ಅಪಘಾತಗಳ ಪ್ರಮಾಣ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಅಮಾಯಕ ಜೀವಗಳು ಬಲಿಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕಠಿಣ ನಿಯಮಗಳ ನಡುವೆಯೂ ನಿಲ್ಲದ ದುರಂತ
ಜಿಲ್ಲೆಯಲ್ಲಿ ಹೊಸದಾಗಿ ಚೆನೈ-ಬೆಂಗಳೂರು ಎಕ್ಸಪ್ರೆಕ್ಸ್ ವೇ ನಿರ್ಮಾಣ ಮಾಡಲಾಗಿದೆ. ಜೊತೆಗೆ ಹಳೆಯ ಹೆದ್ದಾರಿ ಅಗಲೀಕರಣ ಕಾರ್ಯ ನಡೆದಿದ್ದು, ಜೊತೆಗೆ ಹೈವೇಯಲ್ಲಿನ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಹೆದ್ದಾರಿಯನ್ನು ಸರಿಪಡಿಸುವ ಕೆಲಸಗಳೂ ನಡೆಯುತ್ತಿದೆ. ಅದೆಲ್ಲದರ ನಡುವೆ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳನ್ನು ಬಿಗಿಗೊಳಿಸುತ್ತಿದೆ.
ಇದನ್ನೂ ಓದಿ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ನಾಲ್ವರು ದುರ್ಮರಣ
ಕಳೆದ ಡಿಸೆಂಬರ್ನಿಂದ ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಮಯ ಜಾರಿಗೆ ತರಲಾಗಿದ್ದು, ಕಟ್ಟುನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಹೀಗಿದ್ದರು ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜೊತೆಗೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಾಗಾಗಿ ವಾಹನ ಸವಾರರು ರಸ್ತೆಗೆ ಇಳಿಯುವ ವೇಳೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಜೊತೆಗೆ ಜಾಗೃತಿಯನ್ನು ವಹಿಸಬೇಕು ಎನ್ನುವ ಮಾತು ಕೇಳಿ ಬರುತ್ತಿದೆ.
ಎಂಟೇ ತಿಂಗಳಲ್ಲಿ 274 ಮಂದಿ ಸಾವು
ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ ನಡೆದಿರುವ ಅಪಘಾತಗಳ ಅಂಕಿ-ಅಂಶಗಳು ಆತಂಕ ಮೂಡಿಸುವಂತಿದೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 259 ಅಪಘಾತಗಳು ಸಂಭವಿಸಿದ್ದು, ಭೀಕರ ದುರಂತಗಳಲ್ಲಿ ಬರೋಬ್ಬರಿ 274 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
- 2023ರಲ್ಲಿ: 257 ಮಂದಿ ಸಾವು
- 2024ರಲ್ಲಿ: 320 ಮಂದಿ ಸಾವು
- 2025ರಲ್ಲಿ: 305 ಮಂದಿ ಸಾವು
- ಆದರೆ ಪ್ರಸಕ್ತ ಸಾಲಿನಲ್ಲಿ ಕೇವಲ ಎಂಟು ತಿಂಗಳಲ್ಲೇ ಸಾವಿನ ಸಂಖ್ಯೆ 274ಕ್ಕೆ ತಲುಪಿದೆ.
ದ್ವಿಚಕ್ರ ವಾಹನ ಸವಾರರೇ ಹೆಚ್ಚು ಬಲಿ: ಪಾದಚಾರಿಗಳಿಗೂ ಸಂಚಕಾರ
ವರದಿಯ ಪ್ರಕಾರ, ಸಂಭವಿಸಿರುವ ಒಟ್ಟು ದುರಂತಗಳಲ್ಲಿ ಶೇ. 60 ರಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದವಾಗಿವೆ. ಶೇ 30ರಷ್ಟು ಅಪಘಾತಗಳು ಸ್ವಯಂ ತಪ್ಪಿನಿಂದ ನಡೆದರೆ, ಶೇ 22ರಷ್ಟು ಅಪಘಾತಗಳಲ್ಲಿ ಪಾದಾಚಾರಿಗಳು ಸಾವನ್ನಪ್ಪಿರುವುದು ಕೂಡ ತಿಳಿದುಬಂದಿದೆ. ಸದ್ಯ ಈ ಅಂಕಿ ಅಂಶಗಳನ್ನ ನೋಡಿದಾಗ ವಾಹನ ಸವಾರರಲ್ಲಿ ಸಂಯಮದ ಕೊರತೆ, ಅತಿಯಾದ ವೇಗ ಹಾಗೂ ಚಾಲನೆಯ ವೇಳೆ ತೋರುವ ನಿರ್ಲಕ್ಷ್ಯವೇ ಈ ಅಪಘಾತಗಳಿಗೆ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ‘ಜನರು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ವಾಹನ ಚಾಲನೆ ವೇಳೆ ಸಂಯಮ ಕಾಯ್ದುಕೊಂಡಾಗ ಮಾತ್ರ ಅಪಘಾತಗಳ ಪ್ರಮಾಣ ಕಡಿಮೆ ಆಗಲು ಸಾಧ್ಯ ಎನ್ನುವುದು ಎಸ್ಪಿ ಶಿವಾಂಶುರಜಪೂತ್ ಅವರ ಮಾತು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ: 7 ಮಂದಿ ಸಾವು
ಒಟ್ಟಾರೆ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜೊತೆಗೆ ಜನರು ಕೂಡ ವಾಹನ ಚಾಲನೆ ಮಾಡುವ ವೇಳೆ ಸಂಯಮ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




