ಬೆಂಗಳೂರಿನ ರಸ್ತೆ ಗುಂಡಿಗೆ ಹೊಸ ಉಪಾಯ: 6 ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಎಂದ ಕೃಷ್ಣಬೈರೇಗೌಡ

ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಹೈವೋಲ್ಟೇಜ್ ಜಿಬಿಎ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದಾರೆ. ಅಧಿಕಾರಿಗಳ ಜೊತೆಗಿನ ಸುದೀರ್ಘ ಚರ್ಚೆ ಬಳಿಕ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಕುರಿತಾಗಿ ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು. ಅದರಲ್ಲಿ ಪ್ರಮುಖವಾಗಿ ಆರು ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿಗೆ ಹೊಸ ಉಪಾಯ: 6 ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಎಂದ ಕೃಷ್ಣಬೈರೇಗೌಡ
ಸಚಿವ ಕೃಷ್ಣಬೈರೇಗೌಡ
Image Credit source: tv9 kannada
Edited By:

Updated on: Aug 27, 2026 | 8:48 PM

ಬೆಂಗಳೂರು, ಆಗಸ್ಟ್​ 27: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ (Krishna Byre Gowda) ಅವರು ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಪ್ರಗತಿ ಪರಿಶೀಲನೆ ಸಭೆ ಮಾಡಿದರು. ಮಧ್ಯಾಹ್ನ 2 ಗಂಟೆಗೆ ಶುರುವಾಗಿದ್ದ ಹೈವೋಲ್ಟೇಜ್ ಸಭೆಯಲ್ಲಿ ಐದೂ ನಗರ ಪಾಲಿಕೆಗಳು, ಬಿ-ಸ್ಮೈಲ್ ಹಾಗೂ BSWML ವಿಭಾಗಗಳ ಅಧಿಕಾರಿಗಳ ಕಾರ್ಯವೈಖರಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸಚಿವರು, 6 ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದಿದ್ದಾರೆ.

ಸಚಿವ ಕೃಷ್ಣಬೈರೇಗೌಡರಿಂದ ಹೈವೋಲ್ಟೇಜ್ ಸಭೆ

GBA ಅಧಿಕಾರಿಗಳ ಜೊತೆಗಿನ ಸುದೀರ್ಘ ಚರ್ಚೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ‘ಜಿಬಿಎ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳು, ಬಿ ಸ್ಮೈಲ್ ಹಾಗೂ BSWML ಸಂಸ್ಥೆಗಳ ಕಾರ್ಯವೈಖರಿ ನಿರಂತರವಾಗಿ ಪರಿಶೀಲನೆಗೆ ಒಳಪಡಲಿದೆ. ಇನ್ನು ಮುಂದೆ ತಿಂಗಳಿಗೆ ಕನಿಷ್ಠ ಎರಡು ಬಾರಿ ಪರಿಶೀಲನಾ ಸಭೆಗಳು ನಡೆಯಲಿವೆ. ಸಾರ್ವಜನಿಕರ ಸಮಸ್ಯೆಗಳು ಸಚಿವರ ಬಳಿ ಬರುವ ಬದಲು ನೇರವಾಗಿ ಆಡಳಿತ ಯಂತ್ರಕ್ಕೇ ತಲುಪಿ ಶೀಘ್ರವಾಗಿ ಬಗೆಹರಿಯಬೇಕು. ಆನ್‌ಲೈನ್ ಮೂಲಕ ದಾಖಲಾದ 75,152 ಸಾರ್ವಜನಿಕ ದೂರುಗಳಲ್ಲಿ ಈಗಾಗಲೇ 73,000 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸಮಸ್ಯೆ ನಿಜವಾಗಿಯೂ ಪರಿಹಾರವಾಗಿದೆಯೇ ಎಂಬುದನ್ನು ಹಿರಿಯ ಅಧಿಕಾರಿಗಳು ಖುದ್ದು ಖಾತ್ರಿಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

7600 ಕೋಟಿ ರೂ ಅನುದಾನ ಮೀಸಲು

‘ರಸ್ತೆ ಗುಂಡಿ, ಕಸ ವಿಲೇವಾರಿ, ಬೀದಿ ದೀಪ ಸಮಸ್ಯೆ ಹೆಚ್ಚಾಗಿ ಕೇಳಿಬರುತ್ತಿವೆ. ಹಾಗಾಗಿ ಕ್ಯಾಮೆರಾಗಳ ಮೂಲಕ ಸರ್ವೇ ಮಾಡಿಸಿ ಸೆಪ್ಟೆಂಬರ್ ಒಳಗೆ ಗುಂಡಿ ಮುಚ್ಚುತ್ತೇವೆ. ಜನರ ದೂರು ಕೊಡಲಿ, ಅದರೂ ನಾವೇ ಸರ್ವೇ ಮಾಡಿ ಗುಂಡಿ ಮುಚ್ಚುತ್ತೇವೆ. ಮುಖ್ಯ ರಸ್ತೆ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ಅಭಿಯಾನದ ರೀತಿ ಗುಂಡಿ ಮುಚ್ಚುತ್ತೇವೆ. ಬೀದಿ ದೀಪ ಸಮಸ್ಯೆ ಆದರೆ ಗುತ್ತಿಗೆದಾರರಿಗೆ ದಂಡ ಬೀಳುತ್ತೆ. ಮುಂದಿನ 6 ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ನಡೆಯಲಿದ್ದು, 7600 ಕೋಟಿ ರೂ ಅನುದಾನ ಮೀಸಲು ಇಟ್ಟಿದ್ದೇವೆ’ ಎಂದು ತಿಳಿಸಿದರು.

ಇದನ್ನೂ ಓದಿ: ಪರ-ವಿರೋಧ ನಡುವೆ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಮುಂದುವರಿಕೆ: ಈವರೆಗೆ ಎಷ್ಟು ಕ್ಲಿಯರ್?

‘ಒಟ್ಟಾರೆಯಾಗಿ 8 ಸಾವಿರ ಕೋಟಿ ರೂ ಬಂಡವಾಳದಲ್ಲಿ 2,500 ಕಿ.ಮೀ ರಸ್ತೆಗಳ ಡಾಂಬರೀಕರಣ ಹಾಗೂ ವೈಟ್‌ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ 250 ಕಿ.ಮೀ ರಸ್ತೆ ಅಭಿವೃದ್ಧಿ ಪೂರ್ಣಗೊಂಡಿದೆ’ ಎಂದರು.

2,000 ಕೋಟಿ ರೂ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ

‘ಮಳೆಗಾಲದಲ್ಲಿ ನಗರದಲ್ಲಿ ಸೃಷ್ಟಿಯಾಗುವ ಪ್ರವಾಹ ಮತ್ತು ಅವಾಂತರಗಳನ್ನು ತಡೆಯಲು ಬೃಹತ್ ಯೋಜನೆ ರೂಪಿಸಲಾಗಿದೆ. ನಗರದ ಒಟ್ಟು 860 ಕಿ.ಮೀ ಉದ್ದದ ರಾಜಕಾಲುವೆಗಳ ಅಭಿವೃದ್ಧಿಗೆ 2,000 ಕೋಟಿ ರೂ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಸಿಎಂ ಡಿಕೆ ಶಿವಕುಮಾರ್​ ಇದಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಸೂಚಿಸಲಾಗಿದೆ. ಇನ್ನು ಖಾತೆಗಳ ವಿಲೇವಾರಿ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ತಾಂತ್ರಿಕ ಕಾರಣಗಳಿಂದಾದ ವಿಳಂಬ ಸರಿಪಡಿಸಿ ಮುಂದೆ ಮತ್ತಷ್ಟು ವೇಗ ನೀಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us