AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಹೆಚ್1ಎನ್1 ಭೀತಿ: ಕಿಮ್ಸ್​​ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ; ಆತಂಕ ಬೇಡ ಎಂದ ವೈದ್ಯರು

Hubballi H1N1 Alert: ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ H1N1 ಸೋಂಕು ಹೆಚ್ಚುತ್ತಿದೆ. ಕಳೆದ ಎರಡು ತಿಂಗಳಲ್ಲಿ ಹುಬ್ಬಳ್ಳಿ ಕಿಮ್ಸ್‌ನಲ್ಲಿ 14 ಜನರಿಗೆ ಸೋಂಕು ದೃಢಪಟ್ಟಿದೆ. ಜ್ವರ, ನೆಗಡಿ, ಕೆಮ್ಮು ಪ್ರಮುಖ ರೋಗಲಕ್ಷಣಗಳಾಗಿವೆ. ವೈದ್ಯರ ಪ್ರಕಾರ, ಇದು ಕೋವಿಡ್‌ನಷ್ಟು ಗಂಭೀರವಲ್ಲ, ಆದರೆ ಮುಂಜಾಗ್ರತಾ ಕ್ರಮಗಳು ಅನಿವಾರ್ಯ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಹೆಚ್1ಎನ್1 ಭೀತಿ: ಕಿಮ್ಸ್​​ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ; ಆತಂಕ ಬೇಡ ಎಂದ ವೈದ್ಯರು
ಕಿಮ್ಸ್Image Credit source: tv9 kannada
ಸಂಜಯ್ಯಾ ಚಿಕ್ಕಮಠ
| Edited By: |

Updated on: Aug 27, 2026 | 6:55 PM

Share

ಹುಬ್ಬಳ್ಳಿ, ಆಗಸ್ಟ್​ 27: ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೆಚ್​ 1 ಎನ್ 1 (H1N1) ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಜ್ವರ, ನೆಗಡಿ, ಕಮ್ಮಿನಿಂದ ಹೆಚ್ಚಿನ ಜನರು ಇದೀಗ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿ (Hubballi) ಕಿಮ್ಸ್​ನಲ್ಲಿ ಪರೀಕ್ಷೆ ಮಾಡಿದವರ ಪೈಕಿ 14 ಜನರಿಗೆ ಹೆಚ್ 1 ಎನ್ 1 ಸೋಂಕು ಇರುವುದು ದೃಢವಾಗಿದೆ. ಇದು ಈ ಭಾಗದ ಜನರ ಆತಂಕವನ್ನು ಹೆಚ್ಚಿಸಿದೆ. ಸೋಂಕು ಹೆಚ್ಚಾದರು ಕೂಡ ಜನರು ಆತಂಕ ಪಡಬಾರದು, ಸ್ವಲ್ಪ ಮುಂಜಾಗ್ರತಾ ಕ್ರಮವಹಿಸಿದರೆ ಸಾಕು ಎನ್ನುತ್ತಿದ್ದಾರೆ ವೈದ್ಯರು.

ಕಿಮ್ಸ್‌ನಲ್ಲಿ 14 ಮಂದಿಗೆ ಸೋಂಕು ದೃಢ

ಕರ್ನಾಟಕ ಸೇರಿದಂತೆ ದೇಶದಲ್ಲಿ ಮತ್ತೆ ಹೆಚ್1 ಎನ್1 ಸೋಂಕು ತೀವ್ರವಾಗಿ ಹೆಚ್ಚಾಗುತ್ತಿದೆ. ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಂಕು ಹೆಚ್ಚಾಗುತ್ತಿದೆ. ಹುಬ್ಬಳ್ಳಿ ಕಿಮ್ಸ್​​ಗೆ ಪ್ರತಿನಿತ್ಯ ಜ್ವರ, ಕೆಮ್ಮು, ಮೈಕೈ ನೋವಿನಿಂದ ಬಳಲುತ್ತಿರವವರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ಅನೇಕ ಖಾಸಗಿ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಜ್ವರ, ಕೆಮ್ಮು, ಮೈಕೈ ನೋವು, ಸುಸ್ತಿನಿಂದ ಹೆಚ್ಚಿನ ರೋಗಿಗಳು ಬಳಲುತ್ತಿದ್ದಾರೆ. ಹುಬ್ಬಳ್ಳಿ ಕಿಮ್ಸ್​ಗೆ ಬರುವ ರೋಗಿಗಳು ಜ್ವರದಿಂದ ಬಳಲುತ್ತಿರುವವರಿಗೆ ಹೆಚ್1ಎನ್1 ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ ಕೆಲವರಿಗೆ ಪಾಜಿಟಿವ್ ಬಂದಿದೆ.

ಕಿಮ್ಸ್ ವೈದ್ಯರು ಹೇಳಿದ್ದಿಷ್ಟು

‘ಕಳೆದ ಜುಲೈನಲ್ಲಿ 29 ಜನರ ಸ್ಯಾಂಪಲ್ಸ್​ನಲ್ಲಿ ಐವರಿಗೆ ಸೋಂಕು ಇರುವುದು ದೃಢವಾಗಿತ್ತು. ಆಗಸ್ಟ್​ನಲ್ಲಿ 39 ಜನರ ಪರೀಕ್ಷೆ ಮಾಡಿದ್ದು ಅದರಲ್ಲಿ 9 ಜನರಿಗೆ ಸೋಂಕು ಇರುವುದು ದೃಢವಾಗಿದೆ. ಕಳೆದ ಎರಡು ತಿಂಗಳಲ್ಲಿ ಒಟ್ಟು ಹದಿನಾಲ್ಕು ಜನರಿಗೆ ಸೋಂಕು ದೃಢವಾಗಿದೆ. ಇನ್ನು ಹೆಚ್ಚಿನ ಪರೀಕ್ಷೆ ಮಾಡಿದರೆ ಹೆಚ್ಚಿನ ಸೋಂಕಿತರ ಸಂಖ್ಯೆ ಕಂಡು ಬರುವ ಸಾಧ್ಯತೆಯಿದೆ. ಇನ್ನು ಸೋಂಕಿತರ ಪೈಕಿ ಯಾರು ಕೂಡ ಒಳರೋಗಿಗಳಾಗಿ ದಾಖಲಾಗಿಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು, ಎಲ್ಲರೂ ಕೂಡ ಗುಣಮುಖರಾಗಿದ್ದಾರೆ’ ಎಂದು ವೈದ್ಯಕೀಯ ಅಧೀಕ್ಷಕ ಡಾ ಈಶ್ವರ್ ಹಸಬಿ ಮಾಹಿತಿ ನೀಡಿದ್ದಾರೆ.

ಹೆಚ್1 ಎನ್1 ಸೋಂಕಿನಿಂದ ರಕ್ಷಣೆ ಹೇಗೆ

ಇನ್ನು ಕೋವಿಡ್​ನಂತೆ ಹೆಚ್1 ಎನ್1 ಗಂಭೀರವಾದ ಸೋಂಕು ಅಲ್ಲ. ಆದರೆ ಇದು ಕೂಡ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದರೆ ಹೆಚ್ಚು ಪ್ರಾಣಾಪಾಯವಿಲ್ಲ ಅಂತಿದ್ದಾರೆ ವೈದ್ಯರು. ಈ ಸೋಂಕು ಪ್ರತಿ ಮಳೆಗಾಲದ ಸಂದರ್ಭದಲ್ಲಿ ಅಂದರೆ ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ನಂತರ ಅದು ಕಡಿಮೆಯಾಗುತ್ತದೆ. ಈ ಬಾರಿ ಕೂಡ ಸೋಂಕು ಹರಡುತ್ತಿದೆ. ಹೀಗಾಗಿ ಸೋಂಕಿತರು, ಮುಖಕ್ಕೆ ಮಾಸ್ಕ್ ಧರಿಸಬೇಕು, ಸೋಂಕು ಹರಡದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ಕರ್ನಾಟಕದಲ್ಲಿ 4 ಸಾವಿರ, ದೆಹಲಿಯಲ್ಲಿ 2.3 ಸಾವಿರ H1N1 ಕೇಸ್: ಶಾಲಾ ಮಕ್ಕಳಿಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್

ಇನ್ನು ಹೆಚ್ಚು ಜ್ವರ, ಮೈಕೈ ನೋವು, ನೆಗಡಿ ನಿಂರತರವಾಗಿ ನಾಲ್ಕೈದು ದಿನಗಳ ಕಾಲಕ್ಕೂ ಹೆಚ್ಚು ಇದ್ದರೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಗಾಗ ಕೈ ತೊಳೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದರಿಂದ ಸೋಂಕು ಬರದಂತೆ ತಡೆಯಬಹುದು ಎಂದು ಕಿಮ್ಸ್ ವೈದ್ಯರು ಹೇಳಿದ್ದಾರೆ.

ಹುಬ್ಬಳ್ಳಿ ಸೇರಿದಂತೆ ರಾಜ್ಯ ಮತ್ತು ದೇಶದಲ್ಲಿ ಸದ್ಯ ಈ ಸೋಂಕು ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಯಾರು ಆತಂಕ ಪಡಬಾರದು. ಸರಳ ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ಸೋಂಕು ಬರದಂತೆ ನೋಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜನರು ಹೆಚ್ಚು ಜಾಗೃತಿ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us