AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಷನಲ್​​ ಲಾ ಸ್ಕೂಲ್​​ ಆಫ್ ಇಂಡಿಯಾದ 34ನೇ ವಾರ್ಷಿಕ ಘಟಿಕೋತ್ಸವ ರದ್ದು: ಕಾರಣ ಇಲ್ಲಿದೆ

ಬೆಂಗಳೂರಿನ ಎನ್‌ಎಲ್‌ಎಸ್‌ಐಯು ವಿಶ್ವವಿದ್ಯಾಲಯದ 34ನೇ ವಾರ್ಷಿಕ ಘಟಿಕೋತ್ಸವ ರದ್ದಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭಾಗವಹಿಸುವಿಕೆಗೆ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.

ನ್ಯಾಷನಲ್​​ ಲಾ ಸ್ಕೂಲ್​​ ಆಫ್ ಇಂಡಿಯಾದ 34ನೇ ವಾರ್ಷಿಕ ಘಟಿಕೋತ್ಸವ ರದ್ದು: ಕಾರಣ ಇಲ್ಲಿದೆ
ನ್ಯಾಷನಲ್​​ ಲಾ ಸ್ಕೂಲ್​​ ಆಫ್ ಇಂಡಿಯಾ
ಪ್ರಸನ್ನ ಹೆಗಡೆ
|

Updated on: Aug 27, 2026 | 6:44 PM

Share

ಬೆಂಗಳೂರು, ಆಗಸ್ಟ್​​ 27: ಬೆಂಗಳೂರಿನ ನ್ಯಾಷನಲ್​​ ಲಾ ಸ್ಕೂಲ್​​ ಆಫ್ ಇಂಡಿಯಾ ವಿಶ್ವವಿದ್ಯಾಲಯ(NLSIU)ದ 2026ರ ಬ್ಯಾಚ್‌ನ 34ನೇ ವಾರ್ಷಿಕ ಘಟಿಕೋತ್ಸವ ಅನಿವಾರ್ಯ ಕಾರಣಗಳಿಂದ ರದ್ದಾಗಿದೆ. ಸೆಪ್ಟೆಂಬರ್ 12ರಂದು ಘಟಿಕೋತ್ಸವ ನಡೆಯಲಿದೆ ಎಂದು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ತಿಳಿಸಿದ್ದ ಕೆಲವೇ ವಾರಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಮಾಣಪತ್ರಗಳನ್ನು ಕೊರಿಯರ್ ಮೂಲಕ ಪಡೆಯುವ ಅಥವಾ ಕ್ಯಾಂಪಸ್‌ಗೆ ಬಂದು ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. ಈ ಕುರಿತು ಅರ್ಜಿ ನಮೂನೆ ಹಾಗೂ ಮುಂದಿನ ಸೂಚನೆಗಳನ್ನು ಪದವಿ ಪಡೆಯಲಿರುವ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವ್ಯಕ್ತವಾಗಿದ್ದ ಭಾರಿ ವಿರೋಧ

ಘಟಿಕೋತ್ಸವದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಭಾಗವಹಿಸುವ ಪ್ರಸ್ತಾವನೆಗೆ NLSIU ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಹೆಚ್ಚುತ್ತಿರುವ ವಿರೋಧದ ನಡುವೆಯೇ ಈ ರದ್ದತಿ ನಡೆದಿದೆ. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಇವರ ಭಾಗವಹಿಸುವಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ (NALSAR) ವಿದ್ಯಾರ್ಥಿಗಳು ಹಾಗೂ ಬೋಧಕ ಸಮುದಾಯಕ್ಕೆ BCI ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ: ಪೊಲೀಸರಿಗೆ ಹೈಕೋರ್ಟ್ ಕ್ಲಾಸ್

NALSARನ 2026ರ ಪದವಿ ಪಡೆಯಲಿರುವ ಬ್ಯಾಚ್‌ನ ವಿದ್ಯಾರ್ಥಿಗಳು CJI ಸೂರ್ಯಕಾಂತ್ ಅವರ ಘಟಿಕೋತ್ಸವದಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಅಭಿಯಾನ ನಡೆಸಿದ್ದ ಹಿನ್ನೆಲೆಯಲ್ಲಿ, ಆಗಸ್ಟ್ 13ರಂದು BCI ಅವರ ನೋಂದಣಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ BCI ಆ ನಿರ್ಧಾರವನ್ನು ಹಿಂಪಡೆದಿತ್ತು. BCI ಕೈಗೊಂಡ ಕ್ರಮಗಳನ್ನು NLSIU ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಬಣ್ಣಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us