ಕುಡಿಯುವ ನೀರಿನ ಆಸ್ತಿಗಳ ನಿರ್ವಹಣೆಗೆ ಡಿಜಿಟಲ್ ಸ್ಪರ್ಶ: ‘ಜಲ ಆಸ್ತಿ’ ಆ್ಯಪ್ ಲೋಕಾರ್ಪಣೆ
'Jala Asthi' App: ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲಿ 'ಜಲ ಆಸ್ತಿ' ಆಸ್ತಿ ನಿರ್ವಹಣಾ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು. ಈ ವೆಬ್ ಅಪ್ಲಿಕೇಶನ್, ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಯೋಜನೆಗಳಡಿ ಬರುವ 3 ಲಕ್ಷಕ್ಕೂ ಹೆಚ್ಚು ಕುಡಿಯುವ ನೀರಿನ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು, ಆಗಸ್ಟ್ 27: ಕರ್ನಾಟಕದ (Karnataka) ಹಳ್ಳಿ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗಳಲ್ಲಿ ಪಾರದರ್ಶಕತೆ ಹಾಗೂ ನಿಖರತೆ ತರುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದೆ. ಇಲಾಖೆಯ ವ್ಯಾಪ್ತಿಗೆ ಬರುವ ಸಮಗ್ರ ಮೂಲಸೌಕರ್ಯ ಹಾಗೂ ಆಸ್ತಿಗಳ ನಿರ್ವಹಣೆಗಾಗಿ ರೂಪಿಸಲಾದ ‘ಜಲ ಆಸ್ತಿ’ (Jala Asthi App) ವೆಬ್ ಅಪ್ಲಿಕೇಶನ್ ಮತ್ತು ಮೊಬೈಲ್ ಆ್ಯಪ್ ಅನ್ನು ಸಚಿವ ಈಶ್ವರ ಖಂಡ್ರೆ (eshwar khandre) ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.
37 ಸಾವಿರ ಕೋಟಿ ರೂ ವೆಚ್ಚದ ಯೋಜನೆಗಳು
ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ‘ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ‘ಜಲಜೀವನ್ ಮಿಷನ್’ ಸೇರಿದಂತೆ ಸುಮಾರು 37 ಸಾವಿರ ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಭರದಿಂದ ಸಾಗುತ್ತಿವೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕ್ಯಾಪನ್ ಅಭಿಮನ್ಯು ಆನೆಗೆ ಗೌರವಯುತ ಬೀಳ್ಕೊಡಿಗೆ ನೀಡುವಂತೆ ಈಶ್ವರ್ ಖಂಡ್ರೆ ಪತ್ರ
‘ಈ ಯೋಜನೆಗಳಡಿ ನಿರ್ಮಾಣವಾಗುವ ಆಸ್ತಿಗಳು ಜನರಿಗೆ ದೀರ್ಘಕಾಲ ಸುಸ್ಥಿರ ಸೇವೆ ನೀಡಬೇಕಾದರೆ ಅವುಗಳ ಸಮಗ್ರ ದಾಖಲೀಕರಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಇಲಾಖೆಯ ವ್ಯಾಪ್ತಿಯಲ್ಲಿರುವ ಸುಮಾರು 3 ಲಕ್ಷ ಆಸ್ತಿಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದ ಪರಿಶೀಲನೆ ಅಡಿಯಲ್ಲಿ ಈವರೆಗೆ 70 ಸಾವಿರಕ್ಕೂ ಅಧಿಕ ಜಲ ಸ್ವತ್ತುಗಳ ದಾಖಲೀಕರಣ ಮಾಡಲಾಗಿದೆ’ ಎಂದು ತಿಳಿಸಿದರು.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
‘ಬೋರ್‌ವೆಲ್‌ಗಳು, ಪೈಪ್‌ಲೈನ್‌ಗಳು, ನೀರಿನ ಟ್ಯಾಂಕ್‌ಗಳು, ಅವುಗಳ ಪ್ರಸ್ತುತ ಕಾರ್ಯಕ್ಷಮತೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಹಂತ ಸೇರಿದಂತೆ ಪ್ರತಿಯೊಂದು ವಿವರವನ್ನೂ ಈ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಇದಕ್ಕಾಗಿ ಸಹಾಯಕ ಎಂಜಿನಿಯರ್‌ಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನಾ ವರದಿ ಅಪ್‌ಲೋಡ್ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಯಾವುದೇ ಲೋಪವಿಲ್ಲದೆ ಹಳ್ಳಿಗಾಡಿನ ಕಟ್ಟಕಡೆಯ ಮನೆಗೂ ನಿರಂತರ ನೀರು ಸರಬರಾಜಾಗುವಂತೆ ನಿಗಾ ವಹಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ’ ಎಂದು ಅವರು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




