
ಬೆಂಗಳೂರು, ಮೇ27: ಬೆಂಗಳೂರಿನಲ್ಲಿ ಜನರಿಗೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ರಸ್ತೆ ಗುಂಡಿಮ ಟ್ರಾಫಿಕ್, ದರೋಡೆ, ಕಳ್ಳತನ ಹೀಗೆ ಅನೇಕ ಸಮಸ್ಯೆಗಳು ಇದೆ. ಇದೀಗ ಸಂಚಾರ ದಟ್ಟಣೆ, ಗುಂಡಿ ಬಿದ್ದ ರಸ್ತೆಗಳ ನಡುವೆ ಈಗ ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಮತ್ತೊಂದು ಘೋರ ಗಂಡಾಂತರ ಎದುರಾಗಿದೆ. ಹೌದು, ನಗರದಲ್ಲಿ ಸದ್ದಡಗಿದ್ದ ಕುಖ್ಯಾತ ‘ಪಂಕ್ಚರ್ ಮಾಫಿಯಾ’ (Nails Puncture Mafia) ಮತ್ತೊಮ್ಮೆ ತನ್ನ ಕೃತ್ಯ ಆರಂಭಿಸಿದೆ. ಈ ಗ್ಯಾಂಗ್ ಸವಾರರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಇತ್ತೀಚೆಗೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿ (Byadarahalli) ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ನೂರಾರು ಮೊಳೆಗಳನ್ನು ಉದ್ದೇಶಪೂರ್ವಕವಾಗಿಯೇ ಹಾಕಿ ಸವಾರರನ್ನುನ ಸಂಕಷ್ಟಕ್ಕೆ ಸಿಲುಕಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹೆಚ್ಚಿನ ಲಾಭ ಗಳಿಸುವ ಮತ್ತು ಪಂಕ್ಚರ್ ಅಂಗಡಿಗಳಿಗೆ ಗ್ರಾಹಕರನ್ನು ಸೆಳೆಯುವ ಏಕೈಕ ದುರಾಸೆಯಿಂದ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಗಳಲ್ಲೇ ಮೊಳೆಗಳು, ಸ್ಕ್ರೂಗಳು ಮತ್ತು ಬ್ಲೇಡ್‌ಗಳನ್ನು ಎಸೆಯಲಾಗುತ್ತಿದೆ. ಆಫೀಸ್ ತಡವಾಗಿದೆ ಎಂಬ ಅವಸರದಲ್ಲಿರುವ ಐಟಿ ಉದ್ಯೋಗಿಗಳು, ಬೈಕ್ ಸವಾರರು, ಕ್ಯಾಬ್ ಚಾಲಕರು, ಡೆಲಿವರಿ ಏಜೆಂಟ್‌ಗಳು ಹಾಗೂ ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳೇ ಈ ಮಾಫಿಯಾದ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಅಮಾಯಕರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಈ ಜಾಲದ ಕ್ರಿಮಿನಲ್ ಬುದ್ಧಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಅಂದು ಜಸ್ಟ್ 20 ನಿಮಿಷದಲ್ಲಿದ್ದ ಜರ್ನಿ ಇಂದು 3.5 ಗಂಟೆ!: ಬೆಂಗಳೂರಿನ ಈ ದಯನೀಯ ಸ್ಥಿತಿಗೆ ಅಸಲಿ ಕಾರಣವೇನು?
ಇದು ಕೇವಲ ಹಣ ದೋಚುವ ದಂಧೆಯಾಗಿ ಉಳಿದಿಲ್ಲ, ಬದಲಿಗೆ ಅಮಾಯಕರ ಜೀವಕ್ಕೆ ಕಂಟಕ ತರುವ ಕೃತ್ಯವಾಗಿದೆ. ಅತಿ ವೇಗವಾಗಿ ಚಲಿಸುವ ದ್ವಿಚಕ್ರ ವಾಹನಗಳ ಟೈರ್ ಒಮ್ಮೆಲೇ ಪಂಕ್ಚರ್ ಆದರೆ ಸವಾರರು ನಿಯಂತ್ರಣ ತಪ್ಪಿ ಬಿದ್ದು ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. “ಒಂದು ವೇಳೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಹೊತ್ತೊಯ್ಯುವ ಆಂಬ್ಯುಲೆನ್ಸ್‌ನ ಟೈರ್ ಇಂತಹ ಮೊಳೆಗಳಿಂದ ಪಂಕ್ಚರ್ ಆದರೆ ಆಗುವ ಅನಾಹುತಕ್ಕೆ ಹೊಣೆ ಯಾರು?” ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.
Puncture Mafia or Planned Sabotage? Nails Found Across Bengaluru Roads Yet Again
The nails puncture mafia is once again active in Bengaluru. Almost every day, citizens are finding nails deliberately thrown on roads across different parts of the city, putting the lives of… pic.twitter.com/pGo8vpK0yl
— Karnataka Portfolio (@karnatakaportf) May 27, 2026
ನಗರದ ಹೆಬ್ಬಾಳ, ನೆಲಮಂಗಲ ಹೈವೇ ಹಾಗೂ ಔಟರ್ ರಿಂಗ್ ರೋಡ್‌ಗಳ ಬೆನ್ನಲ್ಲೇ ಈಗ ಬ್ಯಾಡರಹಳ್ಳಿ ಮತ್ತು ಮಾಗಡಿ ರಸ್ತೆಯಲ್ಲೂ ಈ ದಂಧೆ ವ್ಯಾಪಕವಾಗಿ ಹರಡುತ್ತಿದೆ. ರಸ್ತೆಗಳು ಸುರಕ್ಷಿತ ಪ್ರಯಾಣಕ್ಕಾಗಿ ಇವೆಯೇ ಹೊರತು ಅಕ್ರಮ ಸಂಪಾದನೆಗಾಗಿ ಅಮಾಯಕರನ್ನು ಬಲೆಗೆ ಬೀಳಿಸುವ ಜಾಗಗಳಲ್ಲ. ಆದ್ದರಿಂದ ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ಠಾಣಾ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ರಸ್ತೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ ಮೊಳೆ ಜಲ್ಲುವ ಕಿರಾತಕರನ್ನು ಪತ್ತೆ ಹಚ್ಚಬೇಕು. ಹಾಗೂ ಇಂತಹ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ರಸ್ತೆ ಬದಿಯ ಪಂಕ್ಚರ್ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬೆಂಗಳೂರಿನ ನಾಗರಿಕರು ಗೃಹ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Wed, 27 May 26