Bengaluru Stampede: ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ ಹೆಚ್ಚಿಸಿದ ಸರ್ಕಾರ

Bengaluru RCB Victory Celebrations Stampede: ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಮೃತರ ಕುಟುಂಬಸ್ಥರಿಗೆ ಘೋಷಿಸಿದ್ದ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.

Bengaluru Stampede: ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ ಹೆಚ್ಚಿಸಿದ ಸರ್ಕಾರ
ಕಾಲ್ತುಳಿತ, ಸಿದ್ದರಾಮಯ್ಯ

Updated on: Jun 07, 2025 | 9:57 PM

ಬೆಂಗಳೂರು, ಜೂನ್​ 07: ಆರ್‌ಸಿಬಿ (RCB) ಗೆಲುವು ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತದಲ್ಲಿ (Chinnaswamy stadium Stampede) ಮೃತಪಟ್ಟವರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಈ ಮೊದಲು ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ಘೋಷಣೆ ಮಾಡಿತ್ತು. ಇದೀಗ ಈ ಪರಿಹಾರ ಧನವನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ. ಹಾಗೆಯೇ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ಸರ್ಕಾರ ಹೇಳಿತ್ತು.

18 ವರ್ಷದ ಸಂಭ್ರಮ ಒಂದೇ ಗಂಟೆಯಲ್ಲಿ ಮಣ್ಣುಪಾಲು

ಆರ್​ಸಿಬಿ ಅಭಿಮಾನಿಗಳ 17 ವರ್ಷಗಳ ಕನಸು ಮಂಗಳವಾರ (ಜೂ.03) ರಂದು ನನಸಾಗಿತ್ತು. ಆರ್​ಸಿಬಿ ಪಂಜಾಬ್​ ವಿರುದ್ಧದ ಫೈನಲ್​ ಪಂದ್ಯ ಗೆದ್ದು ಬೀಗಿತ್ತು. ಆರ್​ಸಿಬಿ ಅಭಿಮಾನಿಗಳು ಇಡೀ ರಾತ್ರಿ ಸಂಭಮಾಚರಣೆ ಮಾಡಿದ್ದರು. ಮರುದಿನ ಬುಧವಾರ (ಜೂ.04) ರಂದು ವಿಧಾನಸೌಧದ ಮೆಟ್ಟಿಲುಗಳು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಆಯೋಜಿಸಲಾಗಿತ್ತು.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ, ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ ಕಾಲ್ತುಳಿತ ಸಂಭವಿಸಿತು, ಇದರಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡರೆ, 20 ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ
Stamped: RCB ವಿರುದ್ಧ ಕಬ್ಬನ್​ ಪಾರ್ಕ್ ಠಾಣೆಯಲ್ಲಿ​ ಮತ್ತೆರಡು ಕೇಸ್​
ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಕರ್ನಾಟಕ ಪೊಲೀಸರು ದಾಖಲಿಸಿದ FIR!
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು

ಇದನ್ನೂ ಓದಿ: ಕೆಎಸ್‌ಸಿಎ ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಆರ್​ಸಿಬಿಯಿಂದ 10 ಲಕ್ಷ ರೂ. ಪರಿಹಾರ

ಸರ್ಕಾರದ ಬಳಿಕ ಕೆಎಸ್​ಸಿಎ ಕೂಡ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಧನವಾಗಿ 5 ಲಕ್ಷ ನೀಡುವುದಾಗಿ ಹೇಳಿತ್ತು. ಇದೀಗ ಆರ್​ಸಿಬಿ ಫ್ರಾಂಚೈಸಿ ಕೂಡ ಮಡಿದ ಆರ್​ಸಿಬಿ ಅಭಿಮಾನಿಗಳ ಕುಟುಂಬಗಳ ನೆರವಿಗೆ ಮುಂದಾಗಿತ್ತು. ಅಲ್ಲದೆ ಈ ಅವಘಡದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಭಿಮಾನಿಗಳ ಚಿಕಿತ್ಸೆಗಾಗಿ ಆರ್‌ಸಿಬಿ ಕೇರ್ ನಿಧಿಯನ್ನು ಸಹ ರಚನೆ ಮಾಡಲಾಗಿತ್ತು. ಘಟನೆ ನಡೆದ ಒಂದು ದಿನದ ಬಳಿಕ ಮೃತರಿಗೆ ಆರ್ಥಿಕ ಪರಿಹಾರವನ್ನು ಘೋಷಿಸಿದ್ದ ಫ್ರಾಂಚೈಸಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿ ಮೃತರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿತ್ತು.

ವರದಿ: ಈರಣ್ಣ ಬಸವ

(ಹೆಚ್ಚಿನ ಮಾಹಿತಿ ಅಪ್ಡೇಟ್​ ಆಗುತ್ತಿದೆ…)

Published On - 9:45 pm, Sat, 7 June 25